IND vs ENG: ಪುಣೆ ಪಿಚ್ ಯಾರಿಗೆ ಹೆಚ್ಚು ಸಹಕಾರಿ? ಪಂದ್ಯಕ್ಕಿದೆಯಾ ಮಳೆಯ ಆತಂಕ?
India vs England 4th T20: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಪುಣೆಯಲ್ಲಿ ನಡೆಯಲಿದೆ. ಪುಣೆ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದರೂ, ಆಟ ಮುಂದುವರೆದಂತೆ ಸ್ಪಿನ್ನರ್‌ಗಳು ಪ್ರಾಮುಖ್ಯತೆ ಪಡೆಯಬಹುದು. ಹವಾಮಾನ ಅನುಕೂಲಕರವಾಗಿರಲಿದೆ. ಭಾರತ ತಂಡವು ಸರಣಿಯನ್ನು ಗೆಲ್ಲಲು ಪ್ರಯತ್ನಿಸಿದರೆ, ಇಂಗ್ಲೆಂಡ್ ಸರಣಿಯನ್ನು ಸಮಬಲಗೊಳಿಸಲು ಪ್ರಯತ್ನಿಸುತ್ತದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಶುಕ್ರವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮತ್ತೆ ಮುಖಾಮುಖಿಯಾಗಲಿವೆ. ಇದುವರೆಗೆ ಆಡಿರುವ ಮೂರು ಟಿ20 ಪಂದ್ಯಗಳಲ್ಲಿ ಭಾರತ ಎರಡರಲ್ಲಿ ಗೆದ್ದಿದ್ದರೆ, ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದೆ. ಪುಣೆಯಲ್ಲಿ ಭಾರತ ಸರಣಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಸರಣಿಯನ್ನು ಸಮಬಲಗೊಳಿಸಲು ಎದುರು ನೋಡುತ್ತಿದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸುತ್ತದೆ ಎಂಬುದು ಪಿಚ್‌ನ ಸ್ವರೂಪವನ್ನು ಅವಲಂಬಿಸಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, MCA ಪಿಚ್ ಹೇಗಿದೆ ಮತ್ತು ಯಾರಿಗೆ ಹೆಚ್ಚು ನೆರವು ನೀಡಲಿದೆ ಎಂಬುದನ್ನು ನೋಡುವುದಾದರೆ..
ಪುಣೆ ಪಿಚ್ ವರದಿ ಹೀಗಿದೆ
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡಿದರೆ, ಈ ಟ್ರ್ಯಾಕ್ ಬ್ಯಾಟಿಂಗ್‌ಗೆ ಉತ್ತಮ ವಿಕೆಟ್ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಆಟ ಮುಂದುವರೆದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು. ಇಲ್ಲಿಯವರೆಗೆ ಇಲ್ಲಿ 4 ಟಿ20 ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ ಮೊದಲು ಮತ್ತು ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳ ಗೆಲುವಿನ ಸರಾಸರಿ ಸಮಾನವಾಗಿದೆ. ಇಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 16 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಆದರೆ ಆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಅದ್ಭುತ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದ್ದರು. ಇನ್ನು ಇಂಗ್ಲೆಂಡ್ ತಂಡ ಇಲ್ಲಿ ಕೇವಲ ಒಂದು ಟಿ20 ಪಂದ್ಯವನ್ನು ಆಡಿದ್ದು, ಆ ಪಂದ್ಯದಲ್ಲಿ ಭಾರತ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು.
ಹವಾಮಾನ ಹೇಗಿರುತ್ತದೆ?
ಅಕ್ಯು ವೆದರ್ ವರದಿಯ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದಿಲ್ಲ. ವರದಿಯ ಪ್ರಕಾರ, ಜನವರಿ 31 ರಂದು ತಾಪಮಾನವು 32 ಡಿಗ್ರಿ ಇರಲಿದ್ದು, ಮಳೆ ಬರುವ ಸಾಧ್ಯತೆಯೇ ಇಲ್ಲ. ಗಂಟೆಗೆ 13 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಆರ್ದ್ರತೆಯು ಶೇಕಡಾ 37 ರಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ. ಹೀಗಾಗಿ ಪಂದ್ಯ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿದೆ.
ಉಭಯ ತಂಡಗಳು
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಮತ್ತು ವಾಷಿಂಗ್ಟನ್ ಸುಂದರ್.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ) ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಸಾಕಿಬ್ ಸಲೀತ್ ಮತ್ತು ಫಿಲ್ ಸಾಲ್ಟ್ ಮತ್ತು ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ