
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ (4th Test) ಪಂದ್ಯ ಸೃಷ್ಟಿಸಿದ ರೋಚಕತೆ ಅಷ್ಟಿಟ್ಟಲ್ಲ. ಆಂಗ್ಲರ ಗೆಲುವಿಗೆ ಅಂತಿಮ ದಿನ 291 ರನ್ಗಳ ಅವಶ್ಯಕತೆಯಿತ್ತು. ಭಾರತ (Team India) ಗೆಲ್ಲಬೇಕಾದರೆ ಎದುರಾಳಿಯ ಅಷ್ಟೂ ವಿಕೆಟ್ ಕೀಳಬೇಕಿತ್ತು. ಹೀಗಾಗಿ ಬೌಲರ್ಗಳ ಪ್ರದರ್ಶನದ ಮೇಲೆ ಟೀಮ್ ಇಂಡಿಯಾ ಗೆಲುವು ನಿರ್ಧಾರವಾಗಿತ್ತು. ನಾಲ್ಕನೇ ಟೆಸ್ಟ್ ಆರಂಭವಾದ ಹೊತ್ತಿಗೆ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ತಂಡದಿಂದ ಮತ್ತೆ ಹೊರಗಿಟ್ಟ ನಾಯಕ ವಿರಾಟ್ ಕೊಹ್ಲಿ (Virat Kohli) ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಯಾಕೆಂದರೆ ಅಶ್ವಿನ್ ಸ್ಪಿನ್ ಪಂದ್ಯದ ಕೊನೆಯ ದಿನಕ್ಕೆ ಅವಶ್ಯಕತೆಯಿದೆ ಎನ್ನಲಾಗಿತ್ತು. ಆದರೆ, ಭಾರತದ ವೇಗಿಗಳು ಎಲ್ಲದಕ್ಕೂ ತಕ್ಕ ಉತ್ತರ ನೀಡಿದರು.
ಅಂತಿಮ ದಿನ ವೇಗಿಗಳಿಗೆ ಹಿನ್ನಡೆಯಾಗಲಿದೆ ಎಂದವರಿಗೆ ಮುಟ್ಟಿನೋಡುವಂತಹ ಉತ್ತರ ಕೊಟ್ಟ ಭಾರತೀಯ ವೇಗಿಗಳು ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಉಮೇಶ್ ಯಾದವ್ 3 ವಿಕೆಟ್, ಜಸ್ಪ್ರೀತ್ ಬುಮ್ರಾ 2 ಮತ್ತು ಶಾರ್ದೂಲ್ ಠಾಕೂರ್ 2 ವಿಕೆಟ್ ಕಿತ್ತು ಮಿಂಚಿದರು. ರವೀಂದ್ರ ಜಡೇಜಾ ಕೂಡ ಪ್ರಮುಖ 2 ವಿಕೆಟ್ ಪಡೆದರು.
ಭಾರತೀಯ ಬೌಲರ್ಗಳ ಪ್ರದರ್ಶನ ಕಂಡು ನಾಯಕ ವಿರಾಟ್ ಕೊಹ್ಲಿ ಹಾಡಿಹೊಗಳಿದ್ದಾರೆ. ಅದರಲ್ಲೂ ಚೆಂಡು ರಿವರ್ಸ್ ಸ್ವಿಂಗ್ ಆಗುವಾಗ ತಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ. “ಪರಿಸ್ಥಿತಿಗಳು ತುಂಬಾ ಬಿಸಿಯಾಗಿತ್ತು. ಬೌಲರ್‌ಗಳು ರಿವರ್ಸ್ ಸ್ವಿಂಗ್ ಅತ್ಯುತ್ತಮವಾಗಿ ಮಾಡಿದ್ದರು. ಎಲ್ಲಾ 10 ವಿಕೆಟ್‌ಗಳನ್ನು ಪಡೆಯುತ್ತೇವೆಂಬ ಬಗ್ಗೆ ನಮಗೆ ನಂಬಿಕೆ ಇತ್ತು. ಬಾಲ್ ರಿವರ್ಸ್ ಸ್ವಿಂಗ್ ಆಗಲು ಶುರು ಆದಾಗ ಜಸ್ಪ್ರೀತ್ ಬುಮ್ರಾ ನನ್ನ ಬಳಿ ಬಂದು ನಾನು ಬೌಲಿಂಗ್ ಮಾಡುತ್ತೇನೆ ಎಂದು ತಿಳಿಸಿದರು. ಅದರಂತೆ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಕೊಟ್ಟೆ. ಅದರ ಪರಿಣಾಮ ಮುಂದಿನ ಎರಡು ಓವರ್ನಲ್ಲಿ ಎರಡು ವಿಕೆಟ್ ಕಿತ್ತು ದೊಡ್ಡ ಬ್ರೇಕ್ ತಂದುಕೊಟ್ಟರು” ಎಂದು ಕೊಹ್ಲಿ ಹೇಳಿದ್ದಾರೆ.
“ಗೆಲುವು ಪಡೆದ ಎರಡೂ ಪಂದ್ಯಗಳಲ್ಲಿ ತಂಡ, ಅತ್ಯುತ್ತಮ ಪಾತ್ರವನ್ನು ತೋರಿಸಿದೆ. ನಾವು ಇಲ್ಲಿ ಎದುರು ನೋಡುತ್ತಿರುವುದು ಉಳಿದುಕೊಳ್ಳಲು ಅಲ್ಲ, ಬದಲಿಗೆ ನಾವು ಇಲ್ಲಿರುವುದು ಗೆಲ್ಲಲು. ತಂಡ ತೋರಿದ ಪಾತ್ರದಿಂದ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ. ಭಾರತ ನಾಯಕನಾದ ಬಳಿಕ ಇದು ನನ್ನ ಪಾಲಿಗೆ ಮೂರನೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ” ಎಂದು ಕೊಹ್ಲಿ ಪಂದ್ಯದ ಬಳಿಕ ಮಾತನಾಡಿದರು.
ಜಸ್ಪ್ರೀತ್ ಬುಮ್ರಾ ಅವರು ಇಬ್ಬರು ಅಪಾಯಕಾರಿ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು. ಮೊದಲಿಗೆ ಮೊದಲ ಇನ್ನಿಂಗ್ಸ್ನಲ್ಲಿ 81 ರನ್ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದ ಓಲಿ ಪೋಪ್ ಅವರನ್ನು ಕೇವಲ 2 ರನ್ಗೆ ಕ್ಲೀನ್ ಬೌಲ್ಡ್ ಮಾಡಿದರೆ, ಮುಂದಿನ ಓವರ್ನಲ್ಲಿ ಸೊನ್ನೆಗೆ ಜಾನಿ ಬೈರ್ಸ್ಟೋರನ್ನು ಪೆವಿಲಿಯನ್ಗೆ ಅಟ್ಟಟಿದರು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್: 191/10 (61.3) (ಶಾರ್ದೂಲ್ ಠಾಕೂರ್ 57, ವಿರಾಟ್ ಕೊಹ್ಲಿ 50, ಕ್ರಿಸ್ ವೋಕ್ಸ್ 55/4, ರಾಬಿನ್ಸನ್ 38/3)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 290/10 (84) (ಓಲಿ ಪೋಪ್ 81, ಕ್ರಿಸ್ ವೋಕ್ಸ್ 50, ಉಮೇಶ್ ಯಾದವ್ 76/3, ಜಸ್ಪ್ರೀತ್ ಬುಮ್ರಾ 67/2)
ಭಾರತ ಎರಡನೇ ಇನ್ನಿಂಗ್ಸ್: 466/10 (148.2) (ರೋಹಿತ್ ಶರ್ಮಾ 127, ಶಾರ್ದೂಲ್ ಠಾಕೂರ್ 60, ಕ್ರಿಸ್ ವೋಕ್ಸ್ 83/3, ರಾಬಿನ್ಸನ್ 105/2)
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 210/10 (92.2) (ಹಸೀಬ್ ಹಮೀದ್ 63, ರಾರಿ ಬರ್ನ್ಸ್ 50, ಉಮೇಶ್ ಯಾದವ್ 60/3, ಜಸ್ಪ್ರೀತ್ ಬುಮ್ರಾ 27/2)
India vs England: ಭಾರತದ ದಾಖಲೆಯ ಗೆಲುವಿಗೆ ಇಂಗ್ಲೆಂಡ್ ನಾಯಕ ರೂಟ್ ನೀಡಿದ ಕಾರಣವೇನು ಕೇಳಿ
(India vs England: When the ball started reversing Jasprit Bumrah said give me the ball: Virat Kohli)