T20 World Cup 2024: ಟಿ20 ವಿಶ್ವಕಪ್ನ 8ನೇ ಪಂದ್ಯದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡಗಳು ಕಣಕ್ಕಿಳಿಯಲಿದೆ. ನ್ಯೂಯಾರ್ಕ್ನಲ್ಲಿ ಇಂದು ನಡೆಯಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಏಕೆಂದರೆ ಹವಾಮಾನ ವರದಿ ಪ್ರಕಾರ ನ್ಯೂಯಾರ್ಕ್ ಭಾಗದಲ್ಲಿ ಇಂದು (ಜೂನ್ 5) ಮಳೆಯಾಗುವ ಸಾಧ್ಯತೆಯಿದೆ.
ಬುಧವಾರ ನ್ಯೂಯಾರ್ಕ್ನಲ್ಲಿ ದಿನವಿಡೀ ಸುಮಾರು 10 ಪ್ರತಿಶತದಷ್ಟು ಮಳೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಬೆಳಗಿನ ವೇಳೆ ಮಳೆ ಪ್ರಮಾಣವು ಕಡಿಮೆಯಾಗಲಿದ್ದು, ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ತಿಳಿಸಲಾಗಿದೆ.
ಅಂದರೆ ಭಾರತ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಅಮೆರಿಕ ಕಾಲಮಾನ ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಈ ವೇಳೆಗೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಪಂದ್ಯ ನಡೆಯುವುದು ಬಹುತೇಕ ಖಚಿತ ಎನ್ನಬಹುದು.
ಇನ್ನು ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯುಂಟಾದರೆ ಓವರ್ಗಳ ಕಡಿತದೊಂದಿಗೆ ಮ್ಯಾಚ್ ಮುಂದುವರೆಯಲಿದೆ. ಇದಾಗ್ಯೂ ಈ ಪಂದ್ಯಕ್ಕೆ ಮೀಸಲು ದಿನದಾಟವಿರುವುದಿಲ್ಲ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ.
ಇತ್ತ ಈ ಪಂದ್ಯದಲ್ಲಿ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿದ್ದು, ಹೀಗಾಗಿ ಇಂದಿನ ಪಂದ್ಯವು ಮಳೆಯಿಂದಾಗಿ ರದ್ದಾದರೆ ಐರ್ಲೆಂಡ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಹಾಗಾಗಿ 2 ಅಂಕಗಳನ್ನು ಪಡೆಯಲು ಟೀಮ್ ಇಂಡಿಯಾಗೆ ಇಂದು ಪಂದ್ಯ ನಡೆಯಲೇಬೇಕು.
ಈಗಾಗಲೇ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಬಾರ್ಬಡೋಸ್ನಲ್ಲಿ ನಡೆಯುತ್ತಿದ್ದ ಪಂದ್ಯದ ಮೊದಲ ಇನಿಂಗ್ಸ್ನ ವೇಳೆ ಮಳೆ ಬಂದು ಸಂಪೂರ್ಣ ಪಂದ್ಯ ಕೊಚ್ಚಿ ಹೋಗಿದೆ. ಹಾಗೆಯೇ ಡಲ್ಲಾಸ್ನಲ್ಲಿ ನಡೆದ ಕೆಲ ಪಂದ್ಯಗಳ ವೇಳೆಯು ಮಳೆ ಅಡಚಣೆಯನ್ನುಂಟು ಮಾಡಿತ್ತು. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ನ ಕೆಲ ಪಂದ್ಯಗಳು ಮಳೆಗಾಹುತಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಭಾರತ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಯುಎಸ್ಎ ಕಾಲಮಾನ ಬೆಳಿಗ್ಗೆ 10.30 ರಿಂದ ಆರಂಭವಾಗಲಿದೆ. ಅಂದರೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ನೇರ ಪ್ರಸಾರ ಇರಲಿದೆ. ಹಾಗೆಯೇ ಈ ಪಂದ್ಯದ ಟಾಸ್ ಪ್ರಕ್ರಿಯೆ 7.30 ಕ್ಕೆ ನಡೆಯಲಿದೆ.
ಇದನ್ನೂ ಓದಿ: Yusuf Pathan: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಭರ್ಜರಿ ಜಯ ಸಾಧಿಸಿದ ಯೂಸುಫ್ ಪಠಾಣ್
ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ ದೂರದರ್ಶನ (DD) ಚಾನೆಲ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಇದಲ್ಲದೆ ಡಿಸ್ನಿ ಹಾಟ್ ಸ್ಟಾರ್ ಆ್ಯಪ್ನಲ್ಲೂ ಈ ಪಂದ್ಯದ ನೇರ ಪ್ರಸಾರವನ್ನು ಉಚಿತವಾಗಿ ವೀಕ್ಷಿಸಬಹುದು.