
India vs New Zealand 1st ODI: ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 60 ರನ್ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ಟಿಕ್ನರ್ ಯಶಸ್ವಿಯಾದರು. 13ನೇ ಓವರ್ನಲ್ಲಿ ರೋಹಿತ್ ಶರ್ಮಾ (34) ವಿಕೆಟ್ ಪಡೆದ ಟಿಕ್ನರ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (8) ಸ್ಯಾಂಟ್ನರ್ ಎಸೆತದಲ್ಲಿ ಬೌಲ್ಡ್ ಆದರು. ಆ ಬಳಿಕ ಬಂದ ಇಶಾನ್ ಕಿಶನ್ 5 ರನ್ಗಳಿಸಿ ನಿರ್ಗಮಿಸಿದರು.
ಇದಾಗ್ಯೂ ಮತ್ತೊಂದೆಡೆ ಶುಭ್ಮನ್ ಗಿಲ್ ಇನಿಂಗ್ಸ್ ಕಟ್ಟುವ ಕಾಯಕ ಮುಂದುವರೆಸಿದ್ದರು. ಸೂರ್ಯಕುಮಾರ್ ಜೊತೆಗೂಡಿ ತಂಡದ ಮೊತ್ತವನ್ನು 150 ರ ಗಡಿದಾಟಿಸಿದ ಗಿಲ್ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಈ ವೇಳೆ 31 ರನ್ಗಳಿಸಿದ್ದ ಸೂರ್ಯ ಡೆರಿಲ್ ಮಿಚೆಲ್ ಎಸೆತದಲ್ಲಿ ಔಟಾದರು. ನಂತರದ ಬಂದ ಹಾರ್ದಿಕ್ ಪಾಂಡ್ಯ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಶುಭ್ಮನ್ ಗಿಲ್ 87 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಸಿಡಿಸಿದ ಬೆನ್ನಲ್ಲೇ ರನ್ಗಳಿಕೆಯ ವೇಗ ಹೆಚ್ಚಿಸಿಕೊಂಡ ಶುಭ್ಮನ್ ಗಿಲ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ 145 ಎಸೆತಗಳಲ್ಲಿ ಗಿಲ್ ಡಬಲ್ ಸೆಂಚುರಿ ಸಿಡಿಸಿ ಬ್ಯಾಟ್ ಮೇಲೆಕ್ಕೆತಿದರು. ಇನ್ನು ದ್ವಿಶತಕ ಬಳಿಕ 149 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ 9 ಭರ್ಜರಿ ಸಿಕ್ಸ್ ಹಾಗೂ 19 ಫೋರ್ನೊಂದಿಗೆ 208 ರನ್ ಬಾರಿಸಿ ಶಿಪ್ಲಿ ಎಸೆತದಲ್ಲಿ ಕ್ಯಾಚ್ ನೀಡಿದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಮೊತ್ತ 300 ರ ಗಡಿದಾಟಿತ್ತು. ಅಂತಿಮವಾಗಿ ಟೀಮ್ ಇಂಡಿಯಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಕಲೆಹಾಕಿತು.
350 ರನ್ಗಳ ಬಿಗ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಸಿರಾಜ್ ಅವರ ಕರಾರುವಾಕ್ ದಾಳಿಗೆ ಡೆವೊನ್ ಕಾನ್ವೆ (10) ಬೇಗನೆ ನಿರ್ಗಮಿಸಿದರು. ಇದಾಗ್ಯೂ ಅಲೆನ್ ಅಬ್ಬರಿಸುವ ಮೂಲಕ 40 ರನ್ ಪೇರಿಸಿದರು. ಆದರೆ ಅಲೆನ್ ವಿಕೆಟ್ ಪಡೆದ ಬಳಿಕ ಟೀಮ್ ಇಂಡಿಯಾ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಈ ಹಂತದಲ್ಲಿ ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿದರೆ, ಸಿರಾಜ್ ಹಾಗೂ ಸಮಿ ಒಂದೊಂದು ವಿಕೆಟ್ ಉರುಳಿಸಿದರು. ಪರಿಣಾಮ 131 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಮೈಕೆಲ್ ಬ್ರೇಸ್‌ವೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಶತಕದ ಜೊತೆಯಾಟವಾಡಿದರು.
ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೇಸ್‌ವೆಲ್ 57 ಎಸೆತಗಳಲ್ಲಿ ಶತಕ ಪೂರೈಸಿದರು. ಮತ್ತೊಂದೆಡೆ ಮಿಚೆಲ್ ಸ್ಯಾಂಟ್ನರ್ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಪರಿಣಾಮ ನ್ಯೂಜಿಲೆಂಡ್ ತಂಡಕ್ಕೆ ಕೊನೆಯ 5 ಓವರ್ಗಳಲ್ಲಿ ಗೆಲ್ಲಲು 59 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಸ್ಯಾಂಟ್ನರ್ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಹೆನ್ರಿ ಶಿಪ್ಲಿ ಅವರನ್ನೂ ಕೂಡ ಸಿರಾಜ್ ಬೌಲ್ಡ್ ಮಾಡಿದರು. ಅದರಂತೆ ಕೊನೆಯ 4 ಓವರ್ಗಳಲ್ಲಿ 56 ರನ್ಗಳು ಬೇಕಿತ್ತು. ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ಬ್ರೇಸ್‌ವೆಲ್ 2 ಭರ್ಜರಿ ಸಿಕ್ಸ್ ಸಿಡಿಸಿದರು. ಇದರಿಂದ ಪಂದ್ಯವು ಕುತೂಹಲಘಟ್ಟದತ್ತ ಸಾಗಿತು.
ಇನ್ನು ಶಮಿ ಎಸೆದ 47ನೇ ಓವರ್ನಲ್ಲಿ 17 ರನ್ ಬಾರಿಸುವ ಮೂಲಕ ಬ್ರೇಸ್‌ವೆಲ್ ಗೆಲುವಿನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು. ಆದರೆ 49ನೇ ಓವರ್ನ 3ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಲಾಕಿ ಫರ್ಗುಸನ್ ವಿಕೆಟ್ ಪಡೆದರು. ಪರಿಣಾಮ ಕೊನೆಯ ಓವರ್ನಲ್ಲಿ ನ್ಯೂಜಿಲೆಂಡ್ಗೆ 20 ರನ್ಗಳು ಬೇಕಿದ್ದರೆ, ಟೀಮ್ ಇಂಡಿಯಾಗೆ 1 ವಿಕೆಟ್ನ ಅವಶ್ಯಕತೆಯಿತ್ತು.
ಕ್ರೀಸ್ನಲ್ಲಿದ್ದ ಬ್ರೇಸ್‌ವೆಲ್ ಶಾರ್ದೂಲ್ ಎಸೆದ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದರು. 2ನೇ ಎಸೆತ ವೈಡ್. ಮೂರನೇ ಎಸೆತದಲ್ಲಿ ಬ್ರೇಸ್‌ವೆಲ್ ಎಲ್ಬಿಡಬ್ಲ್ಯೂ ಆದರು. ಇದರೊಂದಿಗೆ 78 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 12 ಫೋರ್ಗಳೊಂದಿಗಿನ 140 ರನ್ಗಳ ಬ್ರೇಸ್‌ವೆಲ್ ಅವರ ವಿರೋಚಿತ ಹೋರಾಟ ಅಂತ್ಯವಾಯಿತು. ಇತ್ತ ಟೀಮ್ ಇಂಡಿಯಾ 12 ರನ್ಗಳ ರೋಚಕ ಜಯ ಸಾಧಿಸಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 10 ಓವರ್ಗಳಲ್ಲಿ ಕೇವಲ 46 ರನ್ ನೀಡಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಭಾರತ- 349/8 (50)
ನ್ಯೂಜಿಲೆಂಡ್- 337 (49.2)
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
Published On - 9:52 pm, Wed, 18 January 23