IND vs PAK, Asia Cup 2025: ಏಷ್ಯಾಕಪ್‌ನಲ್ಲಿ ಇಂದು ಭಾರತ- ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕದನ: ನೀವು ಪಂದ್ಯ ನೋಡುತ್ತೀರಾ?
Asia Cup 2025, India vs Pakistan Preview: 2025 ರ ಏಷ್ಯಾಕಪ್‌ನ ಅತಿ ದೊಡ್ಡ ಪಂದ್ಯ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದಿರುವ ಕಾರಣ ಇಂದಿನ ಪಂದ್ಯ ರೋಚಕತೆ ಸೃಷ್ಟಿಸಿದೆ.

ಬೆಂಗಳೂರು (ಸೆ. 14): ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಏಷ್ಯಾಕಪ್ 2025 ರಲ್ಲಿ ಭಾನುವಾರ ಅಂದರೆ ಇಂದು ಪಾಕಿಸ್ತಾನವನ್ನು ಎದುರಿಸಲು ಸಿದ್ಧವಾಗಿದೆ. ಈ ಪಂದ್ಯವು ದುಬೈನ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯವು ಗ್ರೂಪ್ ಎ ನಲ್ಲಿ ನಡೆಯಲಿದೆ. ಭಾರತ ತಂಡವು ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಸೋಲಿಸಿತು. ಮತ್ತೊಂದೆಡೆ, ಪಾಕಿಸ್ತಾನವು ಓಮನ್ ಅನ್ನು ಸೋಲಿಸುವ ಮೂಲಕ ಉತ್ತಮ ಆರಂಭವನ್ನು ಮಾಡಿದೆ. ಉಭಯ ತಂಡಗಳು ಮೊದಲ ಗೆಲುವು ಕಂಡಿರುವ ಕಾರಣ ಇಂದಿನ ಪಂದ್ಯ ರೋಚಕತೆ ಸೃಷ್ಟಿಸಿದೆ.
ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 19 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿದೆ. ಆದರೆ 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಟಿ20 ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು 3 ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 1 ಪಂದ್ಯವನ್ನು ಗೆದ್ದಿದೆ.
ಕಳೆದ ಪಂದ್ಯದಲ್ಲಿ ಭಾರತೀಯ ತಂಡದ ಬೌಲರ್‌ಗಳು, ವಿಶೇಷವಾಗಿ ಕುಲದೀಪ್ ಯಾದವ್, ತಮ್ಮ ಮಾರಕ ಬೌಲಿಂಗ್‌ನಿಂದ ಸಂಚಲನ ಮೂಡಿಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಬ್ಬ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಮಾತ್ರ ಮೈದಾನಕ್ಕೆ ಇಳಿದಿತ್ತು. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ವಿರುದ್ಧದ ಪ್ಲೇಯಿಂಗ್ ಹನ್ನೊಂದರಲ್ಲಿ ಅರ್ಶ್‌ದೀಪ್ ಸಿಂಗ್ ಅವರನ್ನು ಸೇರಿಸಿದರೆ, ಯಾರನ್ನು ಬಲಿಕೊಡಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಏಕೆಂದರೆ ಶಿವಂ ದುಬೆ ಯುಎಇ ವಿರುದ್ಧದ ಪಂದ್ಯದಲ್ಲಿಯೂ 3 ವಿಕೆಟ್‌ಗಳನ್ನು ಕಬಳಿಸಿದರು. ಅಂತಹ ಪರಿಸ್ಥಿತಿಯಲ್ಲಿ, ಸಂಭಾವ್ಯ ಆಡುವ XI ಬಗ್ಗೆ ಮಾತನಾಡಿದರೆ, ಅರ್ಶ್‌ದೀಪ್ ಟೀಮ್ ಇಂಡಿಯಾ ಪ್ರವೇಶದಿಂದಾಗಿ ಶಿವಂ ದುಬೆ ಹೊರಗುಳಿಯಬೇಕಾಗಬಹುದು. ಏಕೆಂದರೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಪೇಸ್ ಆಲ್‌ರೌಂಡರ್ ಆಗಿ ಆಡುವುದು ಖಚಿತ. ಮತ್ತೊಂದೆಡೆ, ಅರ್ಶ್‌ದೀಪ್ ಸಿಂಗ್ ತಂಡಕ್ಕೆ ಬಂದರೆ, ಹಾರ್ದಿಕ್ ಮೂರನೇ ವೇಗದ ಬೌಲರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ ಕುಲ್‌ದೀಪ್ ಮತ್ತು ವರುಣ್ ಚಕ್ರವರ್ತಿ ಇಲ್ಲದೆ ಸೂರ್ಯ ಮೈದಾನಕ್ಕೆ ಇಳಿಯಲು ಬಯಸುವುದಿಲ್ಲ. ಹೀಗಾಗಿ ಇಂದಿನ ಪಂದ್ಯಕ್ಕೆ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ.
Asia Cup 2025: ಬಾಂಗ್ಲಾದೇಶ ವಿರುದ್ಧ 6 ವಿಕೆಟ್ಗಳಿಂದ ಗೆದ್ದ ಶ್ರೀಲಂಕಾ
ಅತ್ತ ಪಾಕಿಸ್ತಾನ ಕ್ರಿಕೆಟ್ ತಂಡದ ಮೊದಲ ಪಂದ್ಯ ಓಮನ್ ವಿರುದ್ಧವಾಗಿತ್ತು. ಈ ಪಂದ್ಯದಲ್ಲಿ, ರಿಸ್ ರೌಫ್ ಇಲ್ಲದೆ ಮೈದಾನಕ್ಕೆ ಇಳಿದಿತ್ತು. ಪಾಕಿಸ್ತಾನದ ದೊಡ್ಡ ದೌರ್ಬಲ್ಯವೆಂದರೆ ಅವರ ಬ್ಯಾಟಿಂಗ್. ಓಮನ್ ನಂತಹ ಬೌಲಿಂಗ್ ಲೈನ್ ಅಪ್ ಮುಂದೆ ಅವರ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಸ್ಯಾಮ್ ಅಯೂಬ್ ಮತ್ತು ಸಲ್ಮಾನ್ ಅಗಾ ಅವರಂತಹ ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ನಿರ್ಗಮಿಸಿದ್ದರು. ಹೀಗಾಗಿ ಬ್ಯಾಟಿಂಗ್ನಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ.
ಇದರ ಮಧ್ಯೆ, ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸದಿರಲು ನಿರ್ಧರಿಸಿದ್ದಾರೆ. ಆಪರೇಷನ್ ಸಿಂಧೂರ್ ನಂತರ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ಪಂದ್ಯದ ಬಗ್ಗೆ ಭಾರತದಲ್ಲಿ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಪಂದ್ಯವನ್ನು ರದ್ದುಗೊಳಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ. ದೇಶಕ್ಕಿಂತ ಕ್ರಿಕೆಟ್ ಮುಖ್ಯವಲ್ಲ, ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕೆಂದರೆ, ಅವರ ವಿರುದ್ಧ ಯಾವುದೇ ಪಂದ್ಯವನ್ನು ಆಡಬಾರದು ಎಂದು ಭಾರತೀಯರು ಒತ್ತಾಯಿಸುತ್ತಿದ್ದಾರೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI- ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




