
ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಇಂದು ಕ್ರಿಕೆಟ್ ಲೋಕದ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗುತ್ತಿದೆ. ಈಗಾಗಲೇ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡ ಕಾರಣ ಪಾಕ್ ಬ್ಯಾಟಿಂಗ್ ಶುರು ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಎಲ್ಲ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆ ಹಾಡಿ ಗೌರವ ಸೂಚಿಸುವುದು ವಾಡಿಕೆ. ಅದರಂತೆ ಈ ಪಂದ್ಯದಲ್ಲಿ ಕೂಡ ರಾಷ್ಟ್ರಗೀತೆ ಪ್ರಸಾರ ಮಾಡಲಾಯಿತು. ಈ ಸಂದರ್ಭ ಅಪರೂಪದ ಘಟನೆ ನಡೆದಿದೆ.
ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಒಂದಾಗಿರುವ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಭಾರತ-ಪಾಕ್ ಪಂದ್ಯಕ್ಕೆ ಹೌಸ್ಫುಲ್ ಆಗಿದೆ. ಸುಮಾರು 1 ಲಕ್ಷದ ಮೂವತ್ತು ಸಾವಿರ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾದ ಈ ಮೈದಾನದಲ್ಲಿ ಭಾರತದ ರಾಷ್ಟ್ರಗೀತೆ ಪ್ರಸಾರವಾದಾಗ ನೂತನ ದಾಖಲೆ ನಿರ್ಮಾಣವಾಯಿತು. ಭಾರತೀಯ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸುವಾಗ, ಮೈದಾನದಲ್ಲಿ ನೆರದಿದ್ದ 1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ರಾಷ್ಟ್ರಗೀತೆಗೆ ದನಿಯಾದ ಅಪರೂಪದ ಘಟನೆ ನಡೆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟೀಂ ಇಂಡಿಯಾದ ಈ ಐದು ದಾಖಲೆಗಳನ್ನು ಮುರಿಯುವುದು ಪಾಕ್ ತಂಡಕ್ಕೆ ಕಷ್ಟಕಷ್ಟ
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಡೆಂಗ್ಯೂಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶುಭ್ಮನ್ ಗಿಲ್ ಆಡುವ ಬಳಗಕ್ಕೆ ಮರಳಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಹೊರಬಿದ್ದಿದ್ದಾರೆ. ಅಂತೆಯೆ ಆರ್. ಅಶ್ವಿನ್ ಬದಲು ಶಾರ್ದೂಲ್ ಠಾಕೂರ್ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೊಹಮ್ಮದ್ ಶಮಿ ಅವರನ್ನು ಆಡಿಸುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆದರೆ, ಶಾರ್ದೂಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಪಾಕ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಝಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sat, 14 October 23