ಭಾರತ-ಶ್ರೀಲಂಕಾ ನಡುವಣ 2ನೇ ಟಿ20 ಪಂದ್ಯವನ್ನು ಮುಂದೂಡಲಾಗಿದೆ. ಟೀಮ್ ಇಂಡಿಯಾ ಆಟಗಾರ ಕೃನಾಲ್ ಪಾಂಡ್ಯ ಕೊರೋನಾ ಪಾಸಿಟಿವ್ ಆಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯವನ್ನು ರದ್ದು ಮಾಡಲಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದೀಗ 2ನೇ ಪಂದ್ಯವು ರದ್ದಾಗಿದ್ದು, ಪಂದ್ಯದ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಇನ್ನು ಪಾಂಡ್ಯ ಅವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬರುತ್ತಿದ್ದಂತೆ ಎಲ್ಲಾ ಆಟಗಾರರನ್ನು ಐಸೊಲೇಷನ್ಗೆ ಒಳಪಡಿಸಲಾಗಿದೆ. ಹಾಗೆಯೇ ಪಾಂಡ್ಯ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆಟಗಾರರ ಮೇಲೆ ನಿಗಾ ಇಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಎಲ್ಲಾ ಆಟಗಾರರ ಕೊರೋನಾ ಟೆಸ್ಟ್ ರಿಸಲ್ಟ್ ನೆಗೆಟಿವ್ ಬಂದ ಬಳಿಕ ಪಂದ್ಯವನ್ನು ಆಯೋಜಿಸುವ ಸಾಧ್ಯತೆಯಿದೆ.
ಈಗಾಗಲೇ ಏಕದಿನ ಸರಣಿ ಮುಗಿದಿದ್ದು, ಶ್ರೀಲಂಕಾ ತಂಡವನ್ನು 2-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಸರಣಿ ವಶಪಡಿಸಿಕೊಂಡಿದೆ. ಹಾಗೆಯೇ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನು 2 ಪಂದ್ಯಗಳು ಉಳಿದಿದ್ದು, ಇದೀಗ ಸರಣಿಗೆ ಕೊರೋನಾಂತಕ ಎದುರಾಗಿದೆ.
ಈ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಪ್ರವಾಸ ಮುಗಿಸಿ ಹಿಂದಿರುಗಿದ ಶ್ರೀಲಂಕಾದ ಎಲ್ಲಾ ಆಟಗಾರರ ಕೊರೋನಾ ಮೊದಲ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿತ್ತು. ಈ ವೇಳೆ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಹಾಗೂ ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದರಿಂದ ಎಲ್ಲಾ ಆಟಗಾರರನ್ನು ಮತ್ತೊಮ್ಮೆ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿತ್ತು.
ಇದೇ ಕಾರಣದಿಂದ ಭಾರತ, ಶ್ರೀಲಂಕಾ ಸರಣಿ ವೇಳಾಪಟ್ಟಿಯನ್ನು ಬದಲಿಸಲಾಗಿತ್ತು. ಅದರಂತೆ ಜುಲೈ 13 ರಿಂದ ಶುರುವಾಗಬೇಕಿದ್ದ ಸರಣಿಯನ್ನು ಜುಲೈ 18 ರಿಂದ ಪ್ರಾರಂಭಿಸಲಾಗಿತ್ತು. ಇದೀಗ ಮತ್ತೊಮ್ಮೆ ಕೊರೋನಾಂತಕ ಎದುರಾಗಿದ್ದು, ಉಳಿದ 2 ಪಂದ್ಯಗಳನ್ನು ಆಡಲಿದೆಯಾ ಕಾದು ನೋಡಬೇಕಿದೆ.
ಟೀಮ್ ಇಂಡಿಯಾ ಸಂಪೂರ್ಣ ತಂಡ:
ಶಿಖರ್ ಧವನ್ (ನಾಯಕ) , ಪೃಥ್ವಿ ಶಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಸಂಜು ಸ್ಯಾಮ್ಸನ್ , ಹಾರ್ದಿಕ್ ಪಾಂಡ್ಯ , ಕ್ರುನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ, ಮನೀಶ್ ಪಾಂಡೆ , ರಾಹುಲ್ ಚಹರ್ , ಕುಲದೀಪ್ ಯಾದವ್ , ಕೃಷ್ಣಪ್ಪ ಗೌತಮ್ , ನಿತೀಶ್ ರಾಣಾ , ನವದೀಪ್ ಸೈನಿ , ರುತುರಾಜ್ ಗಾಯಕ್ವಾಡ್ , ದೇವದತ್ ಪಡಿಕ್ಕಲ್ , ಚೇತನ್ ಸಕರಿಯಾ
ಇದನ್ನೂ ಓದಿ: Viral Story: ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಟಾಯ್ಲೆಟ್
ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?
Published On - 3:59 pm, Tue, 27 July 21