India vs Sri Lanka 2nd T20: ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ಚಾಹಲ್
India vs Sri Lanka 2nd T20I: ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ ಇದ್ದು, ಲಂಕಾ ವಿರುದ್ದದ 11 ಟಿ20 ಪಂದ್ಯಳಿಂದ 14 ವಿಕೆಟ್ ಪಡೆದಿದ್ದಾರೆ. ಹಾಗೆಯೇ 9 ಪಂದ್ಯಗಳಿಂದ 14 ವಿಕೆಟ್ ಉರುಳಿಸಿರುವ ದಕ್ಷಿಣ ಆಫ್ರಿಕಾ ಮಾಜಿ ಸ್ಪಿನ್ನರ್ ಇಮ್ರಾನ್ ತಾಹಿರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಭಾರತ-ಶ್ರೀಲಂಕಾ ನಡುವಣ 2ನೇ ಟಿ20 ಪಂದ್ಯವು ಮಂಗಳವಾರ (ಜು.27) ನಡೆಯಲಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಶಿಖರ್ ಧವನ್ ಪಡೆ ಪಾಲಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದು ಸರಣಿ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಲಿದೆ. ಇನ್ನು ಈ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ಒಂದು ವಿಕೆಟ್ ಪಡೆದರೆ ವಿಶೇಷ ದಾಖಲೆಯೊಂದು ನಿರ್ಮಾಣವಾಗಲಿದೆ.
ಲಂಕಾ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ 1 ವಿಕೆಟ್ ಕಬಳಿಸಿದ್ದ ಯುಜಿ, 2ನೇ ಟಿ20 ಯಲ್ಲಿ ಒಂದು ವಿಕೆಟ್ ಉರುಳಿಸಿದರೆ ಶ್ರೀಲಂಕಾ ವಿರುದ್ದ ಚುಟುಕು ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ. ಈ ದಾಖಲೆ ಸದ್ಯ ಇಂಗ್ಲೆಂಡ್ ಬೌಲರ್ ಕ್ರಿಸ್ ಜೋರ್ಡನ್ ಹೆಸರಿನಲ್ಲಿದ್ದು, ಜೋರ್ಡನ್ 8 ಪಂದ್ಯಗಳಿಂದ ಒಟ್ಟು 15 ವಿಕೆಟ್ ಉರುಳಿಸಿದ್ದಾರೆ. ಇನ್ನು ಏಳು ಪಂದ್ಯಗಳಿಂದ 15 ವಿಕೆಟ್ ಪಡೆದಿರುವ ಯುಜ್ವೇಂದ್ರ ಚಾಹಲ್ಗೆ ಜೋರ್ಡನ್ ದಾಖಲೆ ಮುರಿಯಲು ಕೇವಲ 1 ವಿಕೆಟ್ನ ಅವಶ್ಯಕತೆಯಿದೆ.
ಶ್ರೀಲಂಕಾ ಸರಣಿಯಲ್ಲಿ ಸ್ಪಿನ್ ಮೋಡಿ ಮಾಡುತ್ತಿರುವ ಟೀಮ್ ಇಂಡಿಯಾ ಸ್ಪಿನ್ನರ್ 2ನೇ ಟಿ20ಯಲ್ಲೂ ವಿಕೆಟ್ ಉರುಳಿಸುವ ನಿರೀಕ್ಷೆಯಲ್ಲಿದ್ದು, ಹೀಗಾಗಿ ಮಂಗಳವಾರ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಚಾಹಲ್ ಹೊಸ ಇತಿಹಾಸ ಬರೆಯುವ ವಿಶ್ವಾಸದಲ್ಲಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ ಇದ್ದು, ಲಂಕಾ ವಿರುದ್ದದ 11 ಟಿ20 ಪಂದ್ಯಳಿಂದ 14 ವಿಕೆಟ್ ಪಡೆದಿದ್ದಾರೆ. ಹಾಗೆಯೇ 9 ಪಂದ್ಯಗಳಿಂದ 14 ವಿಕೆಟ್ ಉರುಳಿಸಿರುವ ದಕ್ಷಿಣ ಆಫ್ರಿಕಾ ಮಾಜಿ ಸ್ಪಿನ್ನರ್ ಇಮ್ರಾನ್ ತಾಹಿರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಇದ್ದು, ಅಜ್ಮಲ್ 9 ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ದಾರೆ.
ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಸರಣಿಯಲ್ಲಿ ಮೊದಲ ಟಿ20 ಪಂದ್ಯವನ್ನು ಗೆದ್ದು 1-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ 2ನೇ ಪಂದ್ಯದಲ್ಲೂ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದೆ.
ಟೀಮ್ ಇಂಡಿಯಾ ಸಂಪೂರ್ಣ ತಂಡ: ಶಿಖರ್ ಧವನ್ (ನಾಯಕ) , ಪೃಥ್ವಿ ಶಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಸಂಜು ಸ್ಯಾಮ್ಸನ್ , ಹಾರ್ದಿಕ್ ಪಾಂಡ್ಯ , ಕ್ರುನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ, ಮನೀಶ್ ಪಾಂಡೆ , ರಾಹುಲ್ ಚಹರ್ , ಕುಲದೀಪ್ ಯಾದವ್ , ಕೃಷ್ಣಪ್ಪ ಗೌತಮ್ , ನಿತೀಶ್ ರಾಣಾ , ನವದೀಪ್ ಸೈನಿ , ರುತುರಾಜ್ ಗಾಯಕ್ವಾಡ್ , ದೇವದತ್ ಪಡಿಕ್ಕಲ್ , ಚೇತನ್ ಸಕರಿಯಾ
ಇದನ್ನೂ ಓದಿ: Viral Story: ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಟಾಯ್ಲೆಟ್
ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?
(India vs Sri Lanka 2nd T20I: Yuzvendra Chahal one wicket away from achieving a unique Record)