ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ನೀಡಿರುವ ಭಾರತ ಕ್ರಿಕೆಟ್ ತಂಡ (Indian Cricket Team) ಇದೀಗ ತವರಿಗೆ ಮರಳುತ್ತಿದೆ. ಈ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ಸಜ್ಜಾಗಬೇಕಿದೆ. ಭಾರತ ತಂಡ ತವರಿನಲ್ಲಿ ಕೆರಿಬಿಯನ್ನರ್ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಇದೇ ಫೆಬ್ರವರಿ 6 ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಇನ್ನೂ ಪ್ರಕಟ ಮಾಡಿಲ್ಲ. ಈ ತಿಂಗಳ ಅಂತ್ಯದಲ್ಲಿ 15 ಆಟಗಾರರ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಕೊರೊನಾ ವೈರಸ್ನ ಆತಂಕದ ಕಾರಣದಿಂದಾಗ ಆರು ತಾಣಗಳಲ್ಲಿ ಸರಣಿಯನ್ನು ನಡೆಸುವುದು ಸೂಕ್ತವಲ್ಲ ಎಂದು ಬಿಸಿಸಿಐ ನಿರ್ಧರಿಸಿ ಬದಲಾವನೆಯನ್ನು ಮಾಡಿಕೊಂಡಿದೆ. ಹೀಗಾಗಿ ಕೊಲ್ಕತ್ತಾ ಹಾಗೂ ಅಹ್ಮದಾಬಾದ್ನಲ್ಲಿ ಏಕದಿನ ಹಾಗೂ ಟಿ20 ಸರಣಿಯ ಎಲ್ಲಾ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ಆಯೋಜನೆಯಾಗಲಿದೆ.
ಈ ಸರಣಿಯ ಮೂರು ಪಂದ್ಯಗಳನ್ನು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂ ಆಗಿ ಹೊಸ ವಿನ್ಯಾಸ ಪಡೆದ ಬಳಿಕ ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್ ಸರಣಿಗೆ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಇದಾದ ಬಳಿಕ ಟಿ20 ಸರಣಿಯ 3 ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಆಯೋಜನೆಯಾಗಲಿದೆ.
ಇಂಜುರಿಯಿಂದ ಸಂಪೂರ್ಣ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಕಮ್ಬ್ಯಾಕ್ ಮಾಡಲಿದ್ದಾರೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು ರೋಹಿತ್ ಶರ್ಮಾ ಬೆಂಗಳೂರಿನ ಎನ್ಸಿಎನಲ್ಲಿ ಅದ್ಭುತವಾಗಿ ಚೇತರಿಕೆ ಕಾಣುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವರು ಲಭ್ಯವಾಗುವ ಸಾಧ್ಯತೆಯಿದೆ. ಈ ಸರಣಿಗೆ ಕನಿಷ್ಠ ಎರಡು ವಾರಗಳ ಅಂತರವಿರುವುದರಿಂದ ಆ ವೇಳೆಗೆ ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.
ಜೊತೆಗೆ ಕೆಲ ಹೊಸ ಮುಖಗಳ ಪರಿಚಯ ಆಗುವ ಸಾಧ್ಯತೆ ಕೂಡ ಇದೆ. ಮುಂದಿನ ದಿನಗಳಲ್ಲಿ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಇರುವ ಕಾರಣ ಈಗಿನಿಂದಲೇ ಇದಕ್ಕೆ ತಯಾರಿ ಮಾಡುವತ್ತ ಮ್ಯಾನೇಜ್ಮೆಂಟ್ ಚಿತ್ತನೆಟ್ಟಿದೆ. ಪ್ರಮುಖವಾಗಿ ಪೃಥ್ವಿ ಶಾ ಏಕದಿನ ಅಥವಾ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಹಾಗೆಯೆ ರುತುರಾಜ್ ಗಾಯಕ್ವಾಡ್ ಕೂಡ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಬಹುದು. ರವೀಂದ್ರ ಜಡೇಜಾ ತಂಡ ಸೇರಿಕೊಳ್ಳಲಿದ್ದು ಪ್ರಮುಖ ಹಿರಿಯ ಆಟಗಾರರಾದ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ಗೆ ವಿಶ್ರಾಂತಿ ನೀಡಿದರೆ ಅಚ್ಚರಿ ಪಡಬೇಕಿಲ್ಲ. ಹಾಗಾದ್ರೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತದ ಸಂಭಾವ್ಯ 15 ಆಟಗಾರರು ಯಾರು ಎಂಬುದನ್ನು ನೋಡೋಣ.
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ವೆಂಕಟೇಶ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯುಜ್ವಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್/ ಮೊಹಮ್ಮದ್ ಶಮಿ.
Virat Kohli: ವಾಮಿಕ ಫೋಟೋ ವೈರಲ್ ಆದ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ: ಏನಂದ್ರು?