AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Rankings: ಜಾರಿದ ಮಂಧಾನ; ಶಫಾಲಿಗೆ ಮುಂಬಡ್ತಿ

ICC T20 Rankings: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಮಹಿಳಾ ತಂಡದ ಕಳಪೆ ಪ್ರದರ್ಶನ ಐಸಿಸಿ ಟಿ20 ಶ್ರೇಯಾಂಕದ ಮೇಲೆ ಪರಿಣಾಮ ಬೀರಿದೆ. ಬ್ಯಾಟಿಂಗ್ ವೈಫಲ್ಯದಿಂದ ಭಾರತ ಎರಡು ಪಂದ್ಯಗಳನ್ನು ಸೋತಿದೆ. ಸ್ಮೃತಿ ಮಂಧಾನ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದರೆ, ಶಫಾಲಿ ವರ್ಮಾ ಎರಡು ಸ್ಥಾನ ಏರಿಕೆ ಕಂಡು ಆರನೇ ಸ್ಥಾನಕ್ಕೆ ತಲುಪಿದ್ದಾರೆ. ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್ ಅವರೂ ಬೌಲಿಂಗ್ ಶ್ರೇಯಾಂಕದಲ್ಲಿ ಇಳಿಕೆ ಕಂಡಿದ್ದಾರೆ.

ICC Rankings: ಜಾರಿದ ಮಂಧಾನ; ಶಫಾಲಿಗೆ ಮುಂಬಡ್ತಿ
Team India
ಪೃಥ್ವಿಶಂಕರ
|

Updated on: Apr 21, 2026 | 7:07 PM

Share

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಭಾರತ ತಂಡ ಸೋಲನುಭವಸಿದೆ. ತಂಡದ ಈ ಸೋಲಿಗೆ ಬ್ಯಾಟಿಂಗ್‌ ವಿಭಾಗದ ವೈಫಲ್ಯವೇ ಕಾರಣ ಎನ್ನಬಹುದು. ಇದೀಗ ಇದರ ಪರಿಣಾಮ ಐಸಿಸಿ ಟಿ20 ಶ್ರೇಯಾಂಕದಲ್ಲಿ (T20 Rankings) ಸ್ಪಷ್ಟವಾಗಿ ಗೋಚರಿಸಿದೆ. ಈ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಐಸಿಸಿ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಆದರೆ ಈ ಸೋಲುಗಳ ಹೊರತಾಗಿಯೂ ತಂಡದ ಪರ ಅಮೋಘ ಪ್ರದರ್ಶನ ನೀಡುತ್ತಿರುವ ಶಫಾಲಿ ವರ್ಮಾ ಮುಂಬಡ್ತಿ ಪಡೆದಿದ್ದಾರೆ. ಈ ಸರಣಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿರುವ ಶಫಾಲಿ ವರ್ಮಾ ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ ಎರಡು ಸ್ಥಾನ ಜಿಗಿತ ಸಾಧಿಸಿದ್ದು ಆರನೇ ಸ್ಥಾನಕ್ಕೆ ತಲುಪಿದ್ದಾರೆ.

ಮಂಧಾನಾಗೆ ಆಘಾತ

ಟಿ20 ರ್ಯಾಂಕಿಂಗ್​ನಲ್ಲಿ ಕುಸಿತ ಕಂಡಿರುವ ಸ್ಮೃತಿ ಮಂಧಾನ ಎರಡು ಪಂದ್ಯಗಳಲ್ಲಿ ಕೇವಲ 25 ರನ್ ಗಳಿಸಿದ್ದರು. ಹೀಗಾಗಿ ಮಂಧಾನ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದ್ದಾರೆ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡು ಸ್ಥಾನಗಳ ಏರಿಕೆ ಕಂಡು ಪ್ರಸ್ತುತ 11 ನೇ ಸ್ಥಾನದಲ್ಲಿದ್ದಾರೆ. ಸ್ಮೃತಿ ಅವರಂತೆ ಜೆಮಿಮಾ ರೊಡ್ರಿಗಸ್ ಕೂಡ ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸಿದ್ದು, ನಾಲ್ಕು ಸ್ಥಾನಗಳು ಕುಸಿದು 14 ನೇ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಆಟಗಾರ್ತಿಯರಿಗೆ ಲಾಭ

ಭಾರತ ವಿರುದ್ಧದ ಎರಡನೇ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಬಾರಿಸಿದ್ದ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ಫರ್ಟ್ ಐದನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ಅನ್ನೆರಿ ಡೆರ್ಕ್ಸೆನ್ 18 ಸ್ಥಾನ ಏರಿಕೆಯಾಗಿ 33 ನೇ ಸ್ಥಾನಕ್ಕೆ ತಲುಪಿದ್ದಾರೆ. ಸುನೆ ಲೂಸ್ ಎಂಟು ಸ್ಥಾನ ಏರಿಕೆಯಾಗಿ 35 ನೇ ಸ್ಥಾನಕ್ಕೆ ತಲುಪಿದ್ದಾರೆ.

2026 ರ ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್..! ತನಿಖೆ ಪ್ರಾರಂಭಿಸಿದ ಐಸಿಸಿ

ದೀಪ್ತಿ-ರೇಣುಕಾಗೆ ಹಿಂಬಡ್ತಿ

ಏತನ್ಮಧ್ಯೆ, ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ, ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಮತ್ತು ಅರುಂಧತಿ ರೆಡ್ಡಿ ಬೌಲರ್‌ಗಳ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ದೀಪ್ತಿ ಎರಡು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ಇಳಿದರೆ, ರೇಣುಕಾ ನಾಲ್ಕು ಸ್ಥಾನ ಕುಸಿದು ಒಂಬತ್ತನೇ ಸ್ಥಾನಕ್ಕೆ ಜಾರಿದ್ದಾರೆ. ಏತನ್ಮಧ್ಯೆ, ಅರುಂಧತಿ ಮೂರು ಸ್ಥಾನ ಕುಸಿದು ಟಾಪ್ 10 ರಿಂದ ಹೊರಬಿದ್ದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us