ಡಬ್ಲ್ಯುಟಿಸಿ ಫೈನಲ್‌ ಕನಸಿಗೆ ಕಿವೀಸ್‌ ಸವಾಲು; ಭಾರತಕ್ಕೆ ಮಾಡು ಇಲ್ಲವೇ ಮಡಿ ಸರಣಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ತಂಡಕ್ಕೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳು ನಿರ್ಣಾಯಕವಾಗಿವೆ. ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿರುವ ಭಾರತ, ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ಉತ್ತಮ ಪ್ರದರ್ಶನ ಕಡ್ಡಾಯ. WTC ಅಂಕಪಟ್ಟಿ ಹಾಗೂ ಫೈನಲ್ ತಲುಪುವ ಭಾರತದ ಮಾರ್ಗಗಳನ್ನು ಇಲ್ಲಿ ವಿವರಿಸಲಾಗಿದೆ.

ಡಬ್ಲ್ಯುಟಿಸಿ ಫೈನಲ್‌ ಕನಸಿಗೆ ಕಿವೀಸ್‌ ಸವಾಲು; ಭಾರತಕ್ಕೆ ಮಾಡು ಇಲ್ಲವೇ ಮಡಿ ಸರಣಿ
Team India

Updated on: Nov 19, 2026 | 9:39 PM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪ್ರಸಕ್ತ ಆವೃತ್ತಿಯಲ್ಲಿ ಭಾರತ ತಂಡಕ್ಕೆ ಈಗ ನಿಜವಾದ ಸವಾಲು ಎದುರಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 19, ಗುರುವಾರದಿಂದ ಆರಂಭವಾಗಿದೆ. ನ್ಯೂಜಿಲೆಂಡ್ ನೆಲದಲ್ಲಿ ನಡೆಯಲಿರುವ ಈ ಸರಣಿ ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್‌ ಕನಸಿಗೆ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ. ಆರು ವರ್ಷಗಳ ಬಳಿಕ ಟೆಸ್ಟ್ ಸರಣಿ ಆಡಲು ಭಾರತ ತಂಡ ನ್ಯೂಜಿಲೆಂಡ್‌ಗೆ ಕಾಲಿಟ್ಟಿದೆ. ತಂಡದ ಬಹುತೇಕ ಆಟಗಾರರಿಗೆ ಅಲ್ಲಿನ ಪಿಚ್ ಹಾಗೂ ವಾತಾವರಣದ ಬಗ್ಗೆ ಹೆಚ್ಚಿನ ಅನುಭವವಿಲ್ಲ. ಹೀಗಾಗಿ ಕಿವೀಸ್‌ ನೆಲದಲ್ಲಿ ಗೆಲುವು ಸಾಧಿಸುವುದು ಭಾರತಕ್ಕೆ ಸುಲಭದ ಕೆಲಸವಲ್ಲ. ಈ ಸರಣಿಯ ಫಲಿತಾಂಶ ಡಬ್ಲ್ಯುಟಿಸಿ ಫೈನಲ್‌ ರೇಸ್‌ನಲ್ಲಿ ಭಾರತದ ಭವಿಷ್ಯವನ್ನು ಹೇಗೆ ನಿರ್ಧರಿಸಲಿದೆ ಎಂಬುದನ್ನು ನೋಡೋಣ.

ಭಾರತಕ್ಕೆ ನಾಲ್ಕನೇ ಸ್ಥಾನ

ಭಾರತ ತಂಡವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನವನ್ನು ಇಂಗ್ಲೆಂಡ್ ಪ್ರವಾಸದೊಂದಿಗೆ ಆರಂಭಿಸಿತ್ತು. ಐದು ಪಂದ್ಯಗಳ ಸರಣಿಯನ್ನು 2-2ರಿಂದ ಸಮಬಲಗೊಳಿಸುವ ಮೂಲಕ ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ, ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ ಸೋಲು ತಂಡದ ಫೈನಲ್‌ ಹಾದಿಯನ್ನು ಕಠಿಣಗೊಳಿಸಿತು. ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿ ಮೊದಲ ಟೆಸ್ಟ್ ಗೆದ್ದ ಭಾರತ ತನ್ನ ಅವಕಾಶಗಳನ್ನು ಹೆಚ್ಚಿಸಿಕೊಂಡಿತ್ತು. ಆದರೆ ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ತಂಡಕ್ಕೆ ಕೊಂಚ ಹಿನ್ನಡೆಯಾಯಿತು. ಹೀಗಾಗಿ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಿಂದ ದೂರ ಉಳಿದಿದೆ.

Loading...

ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ ತಂಡ ಶೇ.51.52ರಷ್ಟು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.  ದಕ್ಷಿಣ ಆಫ್ರಿಕಾ ಮೊದಲನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಜಾರಿದೆ. ಆಸ್ಟ್ರೇಲಿಯಾ ಶೇ.69.23ರಷ್ಟು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದೀಗ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧದ ಸರಣಿ ಎದುರಾಗಿದ್ದು, ಇದರ ಬಳಿಕ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿದೆ. ಈ ಎರಡೂ ಸರಣಿಗಳು ಭಾರತದ ಫೈನಲ್‌ ಭವಿಷ್ಯವನ್ನು ನಿರ್ಧರಿಸಲಿವೆ.

ಭಾರತಕ್ಕೆ ಗೆಲುವು ಅನಿವಾರ್ಯ

ಶುಭಮನ್ ಗಿಲ್ ನಾಯಕತ್ವದ ಭಾರತ ತಂಡಕ್ಕೆ ಈ ಎರಡು ಪಂದ್ಯಗಳ ಸರಣಿ ಅತ್ಯಂತ ಮಹತ್ವದ್ದಾಗಿದೆ. ತಂಡವು ಸದ್ಯ ಬದಲಾವಣೆಯ ಹಂತದಲ್ಲಿದ್ದು, ಯುವ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಫಲಿತಾಂಶ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತದ ಸ್ಥಾನವನ್ನು ನಿರ್ಧರಿಸಲಿದೆ. ಒಂದು ವೇಳೆ ಭಾರತ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ತಂಡದ ಅಂಕಗಳ ಶೇಕಡಾವಾರು ಪ್ರಮಾಣ (PCT) ಶೇ.58.97ಕ್ಕೆ ಏರಿಕೆಯಾಗಲಿದೆ. ಅದೇ ಭಾರತ 0-2 ಅಂತರದಲ್ಲಿ ಸರಣಿ ಸೋತರೆ, ಪಿಸಿಟಿ ಶೇ.43.59ಕ್ಕೆ ಕುಸಿಯಲಿದೆ.

ಇನ್ನು ಒಂದು ಪಂದ್ಯದಲ್ಲಿ ಗೆದ್ದು ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಭಾರತದ ಫೈನಲ್‌ ಹಾದಿ ಸುಗಮವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ ಐದೂ ಪಂದ್ಯಗಳನ್ನು ಗೆಲ್ಲುವುದು ಭಾರತಕ್ಕೆ ಬಹುತೇಕ ಅನಿವಾರ್ಯವಾಗಲಿದೆ.

25 ಟೆಸ್ಟ್ ಪಂದ್ಯ, ಕೇವಲ 5 ಗೆಲುವು; ನ್ಯೂಜಿಲೆಂಡ್‌ನಲ್ಲಿ ಭಾರತದ ಹಣೆಬರಹವೇನು?

ಆಸ್ಟ್ರೇಲಿಯಾ ವಿರುದ್ಧವೂ ಗೆದ್ದರೆ ಫೈನಲ್‌

ನ್ಯೂಜಿಲೆಂಡ್ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದು, ಬಳಿಕ ಆಸ್ಟ್ರೇಲಿಯಾ ವಿರುದ್ಧದ ಐದೂ ಪಂದ್ಯಗಳನ್ನು ಗೆದ್ದರೆ ಭಾರತ ತಂಡದ ಪಿಸಿಟಿ ಶೇ.70.37ಕ್ಕೆ ತಲುಪಲಿದೆ. ಇದರಿಂದ ಡಬ್ಲ್ಯುಟಿಸಿ ಫೈನಲ್‌ ಪ್ರವೇಶಿಸುವ ಅವಕಾಶ ಮತ್ತಷ್ಟು ಹೆಚ್ಚಲಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋತು, ಬಳಿಕ ಆಸ್ಟ್ರೇಲಿಯಾ ವಿರುದ್ಧ ಐದೂ ಪಂದ್ಯಗಳನ್ನು ಗೆದ್ದರೂ ಭಾರತದ ಪಿಸಿಟಿ ಕೇವಲ ಶೇ.59.26ಕ್ಕೆ ತಲುಪಲಿದೆ. ಇಂತಹ ಪರಿಸ್ಥಿತಿಯಲ್ಲಿ ಫೈನಲ್‌ ಪ್ರವೇಶಿಸುವುದು ಅತ್ಯಂತ ಕಷ್ಟವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Thu, 19 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us