ಓಪನರ್ ಹಸೀಬ್ ಹಮೀದ್ ಶತಕ ಬಾರಿಸಿದರೂ ಎರಡನೇ ದಿನದಾಟದಲ್ಲಿ ಭಾರತೀಯ ಬೌಲರ್​ಗಳದ್ದೇ ಮೇಲುಗೈ

ಭಾರತದ ವಿರುದ್ಧ ಚೆಸ್ಟರ್​-ಲೀ ಸ್ಟ್ರೀಟ್ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಪಂದ್ಯದಲ್ಲಿ ಎರಡನೇ ದಿನವಾಗಿದ್ದ ಬುಧವಾರದಂದು ಕೌಂಟಿ ಸೆಲೆಕ್ಟ್ ಇಲೆವೆನ್ ತಂಡದ ಪರ ಆರಂಭ ಆಟಗಾರನಾಗಿ ಆಡಿದ ಹಮೀದ್ ಆಕರ್ಷಕ ಶತಕ ಬಾರಿಸಿ ರಾಷ್ಟ್ರೀಯ ತಂಡಕ್ಕೆ ತಾವು ವಾಪಸ್ಸಾಗಿರುವುದನ್ನು ಸಂಭ್ರಮಿಸಿದರು.

ಓಪನರ್ ಹಸೀಬ್ ಹಮೀದ್ ಶತಕ ಬಾರಿಸಿದರೂ ಎರಡನೇ ದಿನದಾಟದಲ್ಲಿ ಭಾರತೀಯ ಬೌಲರ್​ಗಳದ್ದೇ ಮೇಲುಗೈ
ಹಸೀಬ್ ಹಮೀದ್

ಚೆಸ್ಟರ್​-ಲೀ-ಸ್ಟ್ರೀಟ್:  ಹಸೀಬ್ ಹಮೀದ್ ನಿಮಗೆ ನೆನಪಿದೆಯಾ? 2016-17ರಲ್ಲಿ ಇಂಗ್ಲೆಂಡ್​ ಪ್ರವಾಸ ಬಂದಾಗ ಕೇವಲ 19 ವರ್ಷದವರಾಗಿದ್ದ ಪಾಕಿಸ್ತಾನ ಮೂಲದ ಆಂಗ್ಲ ಆಟಗಾರ ಹಮೀದ್, ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಮೂಲಕ, ಇಂಗ್ಲೆಂಡ್​ ಪರ ಅತಿ ಕಡಿಮೆ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಕಾಲಿಟ್ಟ ಆರಂಭ ಆಟಗಾರ ಎನಿಸಿಕೊಂಡರು. ಈ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಅವರು ಅರ್ಧ ಶತಕ ಬಾರಿಸಿ ತಮ್ಮ ಪ್ರತಿಭೆಯ ಪರಿಚಯ ನೀಡಿದ್ದರು. ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್​ನಲ್ಲಿ ಬೆರಳಿಗೆ ಗಾಯವಾಗಿದ್ದರೂ ದಿಟ್ಟತನದಿಂದ ಬ್ಯಾಟ್​ ಮಾಡಿ ಅರ್ಧ ಶತಕ ಗಳಿಸಿದ್ದು ಪ್ರೇಕ್ಷಕರ ಮತ್ತು ಕಾಮೆಂಟೇಟರ್​ಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಪಂದ್ಯದ ನಂತರ ಹಮೀದ್ ಸ್ವದೇಶಕ್ಕೆ ಮರಳಿ ಬೆರಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ದುರದೃಷ್ಟವಶಾತ್ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ (ಈ ಸಿ ಬಿ) ಮಂಡಳಿಯು ಅವರನ್ನು ಪುನಃ ರಾಷ್ಟ್ರೀಯ ತಂಡಕ್ಕೆ ಆರಿಸಲೇ ಇಲ್ಲ. ಆದರೆ ಭಾರತ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಗೆ ಈಸಿಬಿ ಬುಧವಾರ 17-ಸದಸ್ಯರ ತಂಡವನ್ನು ಪ್ರಕಟಿಸಿದ್ದು ಅದರಲ್ಲಿ ಹಮೀದ್ ಹೆಸರಿದೆ.

ಹಮೀದ್ ಕುರಿತು ಇಷ್ಟೆಲ್ಲ ಚರ್ಚಿಸಲು ಕಾರಣವಿದೆ. ಭಾರತದ ವಿರುದ್ಧ ಚೆಸ್ಟರ್​-ಲೀ ಸ್ಟ್ರೀಟ್ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಪಂದ್ಯದಲ್ಲಿ ಎರಡನೇ ದಿನವಾಗಿದ್ದ ಬುಧವಾರದಂದು ಕೌಂಟಿ ಸೆಲೆಕ್ಟ್ ಇಲೆವೆನ್ ತಂಡದ ಪರ ಆರಂಭ ಆಟಗಾರನಾಗಿ ಆಡಿದ ಹಮೀದ್ ಆಕರ್ಷಕ ಶತಕ ಬಾರಿಸಿ ರಾಷ್ಟ್ರೀಯ ತಂಡಕ್ಕೆ ತಾವು ವಾಪಸ್ಸಾಗಿರುವುದನ್ನು ಸಂಭ್ರಮಿಸಿದರು. ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿ ಆಡಿದ ಹಮೀದ್ 246 ಎಸೆತಗಳಲ್ಲಿ 112 ರನ್ ಬಾರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಅವರು 13 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.

ಅವರನ್ನು ಬಿಟ್ಟರೆ ಕೌಂಟಿ ಇಲೆವೆನ್ ತಂಡದ ಬೇರೆ ಯಾವುದೇ ಆಟಗಾರ ಭಾರತೀಯ ದಾಳಿಯನ್ನು ವಿಶ್ವಾಸದಿಂದ ಎದುರಿಸಲಿಲ್ಲ. ಲಿಯಾಮ್ ಪ್ಯಾಟರ್ಸನ್ 33 ರನ್ ಗಳಿಸಿದರೆ, ಲಿಂಡನ್ ಜೇಮ್ಸ್ 27 ರನ್​ಗಳ ಕಾಣಿಕೆ ನೀಡಿದರು. ದಿನದಾಟ ಕೊನೆಗೊಂಡಾಗ ಕೌಂಟಿ ತಂಡದ ಸ್ಕೋರ್ 220/9 ಆಗಿತ್ತು.

ಭಾರತದ ಪರ ಉಮೇಶ್ ಯಾದವ್ 22ರನ್​ಗೆ 3 ವಿಕೆಟ್ ಪಡೆದು ಅತಿ ಯಶಸ್ವೀ ಬೌಲರ್ ಎನಿಸಿಕೊಂಡರು. ಮೊಹಮ್ಮದ್ ಸಿರಾಜ್​ಗೆ 2 ವಿಕೆಟ್​ ದಕ್ಕಿದರೆ, ಮತ್ತೊಬ್ಬ ವೇಗಿ ಶಾರ್ದುಲ್ ಠಾಕೂರ್ ಮತ್ತು ಸ್ಪಿನ್ನರ್​ಗಳಾಗಿರುವ ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್​ ಪಡೆದರು.
ನಾಲೆ ಪಂದ್ಯದ ಮೂರನೇ ಹಾಗೂ ಕೊನೆ ದಿನವಾಗಿದೆ.

ಇದನ್ನೂ ಓದಿ: IND vs ENG: ಭಾರತ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

Click on your DTH Provider to Add TV9 Kannada