
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ತನ್ನ ಸಿದ್ಧತೆಗಳನ್ನು ಅಂತಿಮಗೊಳಿಸುವ ಸಲುವಾಗಿಯೇ ತನ್ನೊಳಗೆಯೇ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು (India’s Intra-Squad Match) ಆಡಿತು. ಈ ಪಂದ್ಯದಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆಯ್ಕೆದಾರರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ಪ್ಲೇಯಿಂಗ್ 11 ಕಟ್ಟುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆಯ್ಕೆದಾರರ ನಿರೀಕ್ಷೆಯಂತೆ ತಂಡದ ಬ್ಯಾಟಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡಿತು. ನಾಯಕ ಗಿಲ್, ಅನುಭವಿ ಕೆಎಲ್ ರಾಹುಲ್ (KL Rahul), ಯುವ ಆಟಗಾರ ಸರ್ಫರಾಜ್ ಹಾಗೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಆದರೆ ಆಯ್ಕೆದಾರರ ಚಿಂತೆ ಹೆಚ್ಚಿಸಿರುವುದು ತಂಡದ ಬೌಲಿಂಗ್ ವಿಭಾಗ. ಏಕೆಂದರೆ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿರುವ ಬುಮ್ರಾಗೆ ಯಾವುದೇ ವಿಕೆಟ್ ಸಿಗಲಿಲ್ಲ. ಇನ್ನು ವಿಕೆಟ್ ಪಡೆಯಲು ಯಶಸ್ವಿಯಾದ ಸಿರಾಜ್ ಹಾಗೂ ಅರ್ಷ್‌ದೀಪ್ ರನ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
ಇಂಟ್ರಾ-ಸ್ಕ್ವಾಡ್ ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ 39 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಇದಾದ ನಂತರ, ಸಾಯಿ ಸುದರ್ಶನ್ ಏಳು ಬೌಂಡರಿಗಳನ್ನು ಒಳಗೊಂಡಂತೆ 38 ರನ್ ಗಳಿಸಿದರು. ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ 15 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 101 ರನ್ ಕಲೆಹಾಕಿದರು. ವಾಷಿಂಗ್ಟನ್ ಸುಂದರ್ 35 ರನ್, ಇಶಾನ್ ಕಿಶನ್ (45*) ಮತ್ತು ಶಾರ್ದೂಲ್ ಠಾಕೂರ್ (19*) ಅಜೇಯರಾಗಿ ಉಳಿದು ತಂಡವನ್ನು 51 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 299 ರನ್‌ಗಳಿಗೆ ಕೊಂಡೊಯ್ದರು.
ಮತ್ತೊಂದೆಡೆ, ಭಾರತೀಯ ಬೌಲರ್‌ಗಳ ಪ್ರದರ್ಶನ ಸಂಪೂರ್ಣವಾಗಿ ನೀರಸವಾಗಿತ್ತು. ಮೊಹಮ್ಮದ್ ಸಿರಾಜ್ 12 ಓವರ್‌ಗಳಲ್ಲಿ 86 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ 2 ವಿಕೆಟ್‌ಗಳನ್ನು ಪಡೆದರೆ, ಅರ್ಷ್‌ದೀಪ್ ಸಿಂಗ್ 12 ಓವರ್‌ಗಳಲ್ಲಿ 52 ರನ್‌ಗಳನ್ನು ಬಿಟ್ಟುಕೊಟ್ಟರಾದರೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಜಸ್ಪ್ರೀತ್ ಬುಮ್ರಾ 7 ಓವರ್‌ಗಳಲ್ಲಿ 36 ರನ್‌ಗಳನ್ನು ಬಿಟ್ಟುಕೊಟ್ಟು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇದ್ದುದ್ದರಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ 10 ಓವರ್‌ಗಳಲ್ಲಿ 41 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದರು. ಇವರ ಹೊರತಾಗಿ, ಕೆ.ಎನ್. ರೆಡ್ಡಿ 9 ಓವರ್‌ಗಳಲ್ಲಿ 68 ರನ್‌ಗಳಿಗೆ 1 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಕೇವಲ ಒಂದು ಓವರ್ ಬೌಲ್ ಮಾಡಿ 3 ರನ್ ಬಿಟ್ಟುಕೊಟ್ಟರು. ಬೌಲರ್‌ಗಳ ಈ ಕಳಪೆ ಬೌಲಿಂಗ್ ಬ್ಯಾಟ್ಸ್‌ಮನ್‌ಗಳಿಗೆ ರನ್‌ಗಳ ಮಳೆಗರೆಯುವ ಅವಕಾಶವನ್ನು ನೀಡಿತು.
ಇಂಗ್ಲೆಂಡ್ ನೆಲದಲ್ಲಿ ಅಜೇಯ ಶತಕ ಸಿಡಿಸಿದ ಲಾರ್ಡ್ ಶಾರ್ದೂಲ್ ಠಾಕೂರ್
ಈ ಅಂತರ್-ತಂಡದ ಪಂದ್ಯವು ಜೂನ್ 20, 2025 ರಂದು ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಗೆ ಟೀಂ ಇಂಡಿಯಾದ ಸಿದ್ಧತೆಗಳ ಒಂದು ಭಾಗವಾಗಿದೆ. ಆದರೆ ಬೌಲರ್‌ಗಳ ಈ ಕಳಪೆ ಪ್ರದರ್ಶನವು ಕಳವಳವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಸಿರಾಜ್ ಮತ್ತು ಬುಮ್ರಾ ಅವರಂತಹ ಅನುಭವಿಗಳಿಂದ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ಇವರಿಬ್ಬರು ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಿಲ್ಲ. ಮತ್ತೊಂದೆಡೆ, ಬ್ಯಾಟ್ಸ್‌ಮನ್‌ಗಳ ಫಾರ್ಮ್ ತಂಡಕ್ಕೆ ಸಕಾರಾತ್ಮಕ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್‌ನ ಸವಾಲನ್ನು ಎದುರಿಸಲು ಕೋಚ್ ಮತ್ತು ನಾಯಕ ಈಗ ಬೌಲರ್‌ಗಳ ಫಿಟ್‌ನೆಸ್ ಮತ್ತು ಕಾರ್ಯತಂತ್ರದ ಬಗ್ಗೆ ಕೆಲಸ ಮಾಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ