ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಖರೀದಿಸಿದ ಸ್ಪೋರ್ಟ್ಸ್ ಕಾರಿನ ಬೆಲೆ ಕೇಳಿದ್ರೆ ದಂಗಾಗ್ತೀರಾ..!
Mohammad Shami: ಟೀಮ್ ಇಂಡಿಯಾದಿಂದ ಹೊರಗುಳಿದಿರುವ 31 ವರ್ಷದ ಮೊಹಮ್ಮದ್ ಶಮಿ ಮುಂಬರುವ ದಿನಗಳಲ್ಲಿ ಟಿ20 ತಂಡಗಳಲ್ಲಿ ಅವಕಾಶ ಪಡೆಯುವುದು ಅನುಮಾನ ಎನ್ನಲಾಗಿದೆ.
ಟೀಮ್ ಇಂಡಿಯಾ (Team India) ವೇಗಿ ಮೊಹಮ್ಮದ್ ಶಮಿ (Mohammed Shami) ಸದ್ಯ ಬಿಡುವಿನಲ್ಲಿದ್ದಾರೆ. ಭಾರತ ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಮಾತ್ರ ಸ್ಥಾನ ಪಡೆಯುತ್ತಿರುವ ಶಮಿ, ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಈ ವಿಶ್ರಾಂತಿಯ ಅವಧಿಯಲ್ಲಿ ಹೊಚ್ಚ ಹೊಸ ಕಾರೊಂದನ್ನು ಖರೀದಿಸುವ ಮೂಲಕ ಈಗ ಸುದ್ದಿಯಾಗಿದ್ದಾರೆ. ಅದು ಅಂತಿಂಥ ಕಾರಲ್ಲ ಎಂಬುದು ವಿಶೇಷ. ಮೊಹಮ್ಮದ್ ಶಮಿ ಎಷ್ಟು ವೇಗದಲ್ಲಿ ಬೌಲಿಂಗ್ ಮಾಡಲು ಹೆಸರುವಾಸಿಯಾಗಿದ್ದಾರೋ, ಅವರ ಕಾರುಗಳ ಆಯ್ಕೆಯೂ ಅಷ್ಟೇ ಅದ್ಭುತವಾಗಿದೆ ಎಂದೇ ಹೇಳಬಹುದು.
ಹೌದು, ಮೊಹಮ್ಮದ್ ಶಮಿ ಇತ್ತೀಚೆಗೆ ಶಕ್ತಿಶಾಲಿ ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ ಕಾರನ್ನು ಖರೀದಿಸಿದ್ದಾರೆ. ಶಮಿ ಖರೀದಿಸಿದ ಹೊಸ ಕಾರು ಜಾಗ್ವಾರ್ ವಿಭಾಗದಿಂದ ಬರುವ ಅತ್ಯುತ್ತಮ ವೇಗದ ಕಾರುಗಳಲ್ಲಿ ಒಂದು ಎಂಬುದು ವಿಶೇಷ. ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 150 ವಿಕೆಟ್ಗಳನ್ನು ಪಡೆಯುವ ಹೊಸ ದಾಖಲೆ ಬರೆದಿದ್ದ ಶಮಿ ಇದೀಗ ಜಾಗ್ವಾರ್ ಎಫ್-ಟೈಪ್ ಕಾರನ್ನು ಖರೀದಿಸಿದ್ದಾರೆ.
ಇನ್ನು ಮೊಹಮ್ಮದ್ ಶಮಿ ಖರೀದಿಸಿರುವ ಜಾಗ್ವಾರ್ ಎಫ್-ಟೈಪ್ ಕಾರಿನ ಬಗ್ಗೆ ಹೇಳುವುದಾದರೆ, ಈ ಸ್ಪೋರ್ಟ್ಸ್ ಕಾರ್ ಕೇವಲ 3.7 ಸೆಕೆಂಡುಗಳಲ್ಲಿ 100 ವೇಗವನ್ನು ತಲುಪುತ್ತದೆ. ಎಫ್-ಟೈಪ್ ಕಾರ್ನಲ್ಲಿ ಹೊಸ ಮಾದರಿಯ ಶಕ್ತಿಶಾಲಿ ಎಂಜಿನ್ V8 331 kW ನೀಡಲಾಗಿದ್ದು, ಇದೇ ಕಾರಣದಿಂದಾಗಿ ಈ ಕಾರು ಅತೀ ಕಡಿಮೆ ಸೆಕೆಂಡಿನಲ್ಲಿ 100 ರ ವೇಗವನ್ನು ಪಡೆಯುತ್ತದೆ. ಹಾಗೆಯೇ ಇದರಲ್ಲಿ 8 ಸ್ಪೀಡ್ವರೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಿರುವುದು ಮತ್ತೊಂದು ವಿಶೇಷ.
ಅಂದಹಾಗೆ ಈ ಕಾರಿನ ಶೋ ರೂಂ ಬೆಲೆ 98.13 ಲಕ್ಷ ರೂ. ಆನ್ ರೋಡ್ನಲ್ಲಿ ಈ ಕಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ್ದಾಗಿದೆ. ಅಂದರೆ ಮೊಹಮ್ಮದ್ ಶಮಿ 1 ಕೋಟಿಗೂ ಅಧಿಕ ಮೊತ್ತದ ಹೊಸ ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ಮೊಹಮ್ಮದ್ ಶಮಿ ಬಳಿ ಹಲವು ವಾಹನಗಳಿವೆ.
ಅವುಗಳಲ್ಲಿ ಬಿಎಂಡಬ್ಲ್ಯು 5 ಸಿರೀಸ್, ಟೊಯೊಟಾ ಫಾರ್ಚುನರ್ ಮತ್ತು ಆಡಿ ಕಾರುಗಳು ಪ್ರಮುಖವಾದವು. ಹಾಗೆಯೇ ಇತ್ತೀಚೆಗಷ್ಟೇ ರಾಯಲ್ ಎನ್‌ಫೀಲ್ಡ್ ಜಿಟಿ 650 ನ ಬೈಕ್ವೊಂದನ್ನು ಕೂಡ ಖರೀದಿಸಿದ್ದರು. ಇದೀಗ ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ಸ್ ಕಾರಿನ ಮೂಲಕ ಶಮಿ ಕಾಣಿಸಿಕೊಂಡಿದ್ದಾರೆ.
ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ 31 ವರ್ಷದ ಮೊಹಮ್ಮದ್ ಶಮಿ ಮುಂಬರುವ ದಿನಗಳಲ್ಲಿ ಟಿ20 ತಂಡಗಳಲ್ಲಿ ಅವಕಾಶ ಪಡೆಯುವುದು ಅನುಮಾನ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಶಮಿಯನ್ನು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ಮಾತ್ರ ಪರಿಗಣಿಸಲಾಗುತ್ತಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಳ್ಳುವುದು ಡೌಟ್ ಎಂದೇ ಹೇಳಬಹುದು.