4 ವಿಕೆಟ್ ಪಡೆದ ಆಕಿಬ್ ನಬಿ; ಭರ್ಜರಿ ಶತಕ ಬಾರಿಸಿದ ಮಯಾಂಕ್ ಅಗರ್ವಾಲ್

ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಆಟಗಾರರ ಪ್ರದರ್ಶನ ಮುಂದುವರಿದಿದೆ. ಮಾನವ್ ಸುತಾರ್ ಮತ್ತು ಕುಲ್ದೀಪ್ ಯಾದವ್ ನಂತರ, ಆಕಿಬ್ ನಬಿ ಸರ್ರೆ ಪರ 4 ವಿಕೆಟ್ ಪಡೆದರೆ, ಮಯಾಂಕ್ ಅಗರ್ವಾಲ್ ಡರ್ಹ್ಯಾಮ್ ಪರ ಶತಕ ಬಾರಿಸಿ ಮಿಂಚಿದ್ದಾರೆ. ಈ ಅಮೋಘ ಪ್ರದರ್ಶನಗಳು ಭಾರತೀಯ ಆಟಗಾರರ ಸಾಮರ್ಥ್ಯವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುತ್ತಿವೆ.

4 ವಿಕೆಟ್ ಪಡೆದ ಆಕಿಬ್ ನಬಿ; ಭರ್ಜರಿ ಶತಕ ಬಾರಿಸಿದ ಮಯಾಂಕ್ ಅಗರ್ವಾಲ್
ಮಯಾಂಕ್ ಅಗರ್ವಾಲ್, ಆಕಿಬ್ ನಬಿ

Updated on: Sep 15, 2026 | 9:39 PM

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಟಗಾರರ ಅಮೋಘ ಪ್ರದರ್ಶನ ಮುಂದುವರೆದಿದೆ. ಮಾನವ್ ಸುತಾರ್ ಹಾಗೂ ಕುಲ್ದೀಪ್ ಯಾದವ್ ನಂತರ ಇದೀಗ ಇನ್ನೀಬ್ಬರು ಭಾರತೀಯ ಆಟಗಾರರಾದ ಆಕಿಬ್ ನಬಿ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್‌ನ 64 ನೇ ಪಂದ್ಯದಲ್ಲಿ, ಭಾರತದ ಯುವ ವೇಗಿ ಆಕಿಬ್ ನಬಿ ದಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಸರ್ರೆ ಪರ ಗ್ಲಾಮೋರ್ಗನ್ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಇತ್ತ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರಲ್ಲಿ, ಅನುಭವಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಡರ್ಹಾಮ್ ಪರ ಅದ್ಭುತ ಶತಕ ಬಾರಿಸಿದರು.

ಆಕಿಬ್ ನಬಿ ಮಾರಕ ದಾಳಿ

ಸರ್ರೆ ಮತ್ತು ಗ್ಲಾಮೋರ್ಗನ್ ನಡುವಿನ ಡಿವಿಷನ್ ಒನ್ ಪಂದ್ಯದಲ್ಲಿ, ಆಕಿಬ್ ನಬಿ ಅವರ ಮಾರಕ ಬೌಲಿಂಗ್‌ಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಬಳಿ ಉತ್ತರವಿರಲಿಲ್ಲ. ಶ್ರೀಲಂಕಾ ಪ್ರವಾಸದಲ್ಲಿ ಭಾರತೀಯ ತಂಡದ ಭಾಗವಾಗಿದ್ದರೂ, ಅವರಿಗೆ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಸಿಗಲಿಲ್ಲ. ಆದಾಗ್ಯೂ, ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ತಯಾರಿ ನಡೆಸುತ್ತಿರುವ ನಬಿಗೆ ಇಂಗ್ಲೆಂಡ್‌ನ ಪ್ರದರ್ಶನ ಮತ್ತಷ್ಟು ಬಲ ತುಂಬಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳನ್ನು ಬೌಲ್ ಮಾಡಿದ ನಬಿ 36 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ಆಕಿಬ್ ನಬಿ ಗ್ಲಾಮೋರ್ಗನ್ ತಂಡದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬೆನ್ನೇಲುಬು ಮುರಿಯುವಲ್ಲಿ ಯಶಸ್ವಿಯಾದರು. ಮೊದಲಿಗೆ ಆಸಾ ಟ್ರೈಬ್ ಅವರ ವಿಕೆಟ್ ಪಡೆಯುವ ಮೂಲಕ ತಮ್ಮ ವಿಕೆಟ್​ಗಳ ಖಾತೆ ತೆರೆದ ನಬಿ, ನಂತರ ನಾಯಕ ಕಿರಣ್ ಕಾರ್ಲ್ಸನ್, ಬಿಲ್ಲಿ ರೂಟ್ ಮತ್ತು ಜ್ಯಾಕ್ ಹೋಪ್-ಬೆಲ್ ಅವರನ್ನು ಪೆವಿಲಿಯನ್​ಗಟ್ಟಿದರು. ಆಕಿಬ್ ಅವರ ಅಬ್ಬರದ ಬೌಲಿಂಗ್ ಪ್ರದರ್ಶನದ ಪರಿಣಾಮವಾಗಿ ಗ್ಲಾಮೋರ್ಗನ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 132 ರನ್‌ಗಳಿಗೆ ಆಲೌಟ್ ಆಯಿತು.

ಮಾಯಾಂಕ್ ಅಗರ್ವಾಲ್ ಶತಕ

ಇತ್ತ ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಡರ್ಹ್ಯಾಮ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಡರ್ಹ್ಯಾಮ್ ತಂಡದ ಪರ ಆಡಿದ ಮಯಾಂಕ್ ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಕೌಂಟಿ ಶತಕವನ್ನು ದಾಖಲಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಗರ್ವಾಲ್ ಅವರ 22 ನೇ ಶತಕವಾಗಿದೆ. ಮಯಾಂಕ್ 2022 ರಲ್ಲಿ ಭಾರತದ ಪರ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆದಾಗ್ಯೂ ಅವರ ಫಾರ್ಮ್ ದೇಶ ಮತ್ತು ವಿದೇಶಗಳಲ್ಲಿ ಸ್ಥಿರವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us