ಮಹಾ ಎಡವಟ್ಟು… ಪಾಕ್ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರು!

BAN vs PAK: ಕ್ರಿಕೆಟ್ ಪ್ರಸಾರದ ಇತಿಹಾಸದಲ್ಲೇ ಅತ್ಯಂತ ವಿಲಕ್ಷಣ ಎನ್ನಬಹುದಾದ ತಾಂತ್ರಿಕ ಪ್ರಮಾದವೊಂದು ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಸಂಭವಿಸಿದೆ. ಪಂದ್ಯದ ಲೈವ್ ಸ್ಕೋರ್‌ಕಾರ್ಡ್‌ನಲ್ಲಿ ಪಾಕಿಸ್ತಾನದ ಆಟಗಾರರ ಬದಲಿಗೆ ಟೀಮ್ ಇಂಡಿಯಾದ ರೋಹಿತ್ ಶರ್ಮಾ, ಶುಭ್​ಮನ್ ಗಿಲ್ ಸೇರಿದಂತೆ ಪ್ರಮುಖ ಆಟಗಾರರ ಪಟ್ಟಿಯನ್ನು ಪ್ರದರ್ಶಿಸಲಾಗಿದೆ.

ಮಹಾ ಎಡವಟ್ಟು... ಪಾಕ್ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರು!
Pakistan - Team India

Updated on: May 10, 2026 | 2:11 PM

ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವು ಮೈದಾನದ ಆಟಕ್ಕಿಂತ ಹೆಚ್ಚಾಗಿ ಬ್ರಾಡ್‌ಕಾಸ್ಟರ್‌ಗಳ ಬೃಹತ್ ಪ್ರಮಾದದಿಂದಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಪಂದ್ಯದ ಆರಂಭಿಕ ಹಂತದಲ್ಲಿ ಪಾಕಿಸ್ತಾನದ ಆಡುವ ಬಳಗವನ್ನು (Playing XI) ಪ್ರದರ್ಶಿಸುವ ಸಂದರ್ಭದಲ್ಲಿ, ತಾಂತ್ರಿಕ ದೋಷದಿಂದಾಗಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಪಟ್ಟಿ ಪರದೆಯ ಮೇಲೆ ಮೂಡಿಬಂದಿದೆ.

ಪಾಕಿಸ್ತಾನದ ಟೆಸ್ಟ್ ಇತಿಹಾಸದ ಅಂಕಿಅಂಶಗಳ ಗ್ರಾಫಿಕ್ಸ್ ಅಡಿಯಲ್ಲಿ ರೋಹಿತ್ ಶರ್ಮಾ, ಶುಭ್​ಮನ್ ಗಿಲ್ ಮತ್ತು ರಿಂಕು ಸಿಂಗ್ ಅವರಂತಹ ಭಾರತೀಯ ಆಟಗಾರರ ಹೆಸರುಗಳು ರಾರಾಜಿಸಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಅಚ್ಚರಿಗೆ ಕಾರಣವಾಯಿತು. ಕ್ರೀಡಾ ಪ್ರಸಾರ ಇತಿಹಾಸದಲ್ಲೇ ಇಂತಹ ದೊಡ್ಡ ಮಟ್ಟದ ಪ್ಲೇಯಿಂಗ್ ಇಲೆವೆನ್ ಎಡವಟ್ಟು ಸಂಭವಿಸಿರುವುದು ಅಪರೂಪವಾಗಿದ್ದು, ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ…

ಏನಿದು ಘಟನೆ?

ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಪಂದ್ಯ ಆರಂಭಕ್ಕೂ ಮುನ್ನ, ಅಂದರೆ ಟಾಸ್ ಪ್ರಕ್ರಿಯೆ ಮುಗಿದ ನಂತರ ಬ್ರಾಡ್‌ಕಾಸ್ಟರ್‌ಗಳು ಪಾಕಿಸ್ತಾನ್ ತಂಡದ ಪ್ಲೇಯಿಂಗ್ ಇಲೆವೆನ್ ಪಟ್ಟಿಯನ್ನು ಪರದೆಯ ಮೇಲೆ ತೋರಿಸಬೇಕಿತ್ತು. ಆದರೆ, ಇಲ್ಲಿ ದೊಡ್ಡ ಎಡವಟ್ಟು ಸಂಭವಿಸಿತು. “ಪಾಕಿಸ್ತಾನ ಟೆಸ್ಟ್ ಕೆರಿಯರ್” ಎಂಬ ಶೀರ್ಷಿಕೆಯ ಅಡಿಯಲ್ಲಿ ಪಾಕ್ ಆಟಗಾರರ ಬದಲು ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಹೆಸರುಗಳು ಮೂಡಿಬಂದವು!

ಪರದೆಯ ಮೇಲೆ ಕಂಡ ಭಾರತೀಯ ಆಟಗಾರರು:

ರೋಹಿತ್ ಶರ್ಮಾ ನಾಯಕತ್ವದ ಭಾರತದ ಟಿ20 ಮತ್ತು ಏಕದಿನ ಮಾದರಿಯ ಆಟಗಾರರ ಪಟ್ಟಿ ಅಲ್ಲಿ ಕಾಣಿಸಿಕೊಂಡಿತು.

  • ರೋಹಿತ್ ಶರ್ಮಾ (ನಾಯಕ)
  •  ಶುಭ್​​ಮನ್ ಗೊಲ್
  • ತಿಲಕ್ ವರ್ಮಾ
  • ಶಿವಂ ದುಬೆ
  • ಜಿತೇಶ್ ಶರ್ಮಾ
  •  ರಿಂಕು ಸಿಂಗ್
  • ಅಕ್ಷರ್ ಪಟೇಲ್
  • ವಾಷಿಂಗ್ಟನ್ ಸುಂದರ್
  • ರವಿ ಬಿಷ್ಣೋಯ್
  • ಅರ್ಷದೀಪ್ ಸಿಂಗ್
  • ಮುಖೇಶ್ ಕುಮಾರ್.

ಈ ಹನ್ನೊಂದು ಭಾರತೀಯ ಆಟಗಾರರ ಹೆಸರುಗಳು ಸ್ಕೋರ್‌ಕಾರ್ಡ್‌ನಲ್ಲಿ ರಾರಾಜಿಸಿದವು. ತಕ್ಷಣವೇ ಬ್ರಾಡ್​ಕಾಸ್ಟರ್ ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡರೂ, ಅಷ್ಟರಲ್ಲಾಗಲೇ ಈ ಸ್ಕೋರ್​ ಕಾರ್ಡ್​ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇದೀಗ ಈ ವೈರಲ್ ಫೋಟೋ ನೋಡಿ,  “ಪಾಕಿಸ್ತಾನ್ ತಂಡದಲ್ಲಿ ಭಾರತದ ಆಟಗಾರರೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಾ ಟ್ರೋಲ್ ಮಾಡುತ್ತಿದ್ದಾರೆ. “ಬ್ರಾಡ್‌ಕಾಸ್ಟರ್‌ಗಳಿಗೆ ಟೀಮ್ ಇಂಡಿಯಾದ ಮೇಲಿರುವ ಪ್ರೀತಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ” ಎಂದು ಅನೇಕರು ಕಿಚಾಯಿಸಿದ್ದಾರೆ.

 

 

Follow Us