
T20 World Cup 2026: ಟಿ20 ವಿಶ್ವಕಪ್ನಲ್ಲಿ ಆಫ್ ಸ್ಪಿನ್ನರ್‌ಗಳ ವಿರುದ್ಧ ಟೀಮ್ ಇಂಡಿಯಾದ ತಿಣುಕಾಟ ಮುಂದುವರೆದಿದೆ. ಈ ತಿಣುಕಾಟವನ್ನೇ ಇದಿಗ ಎದುರಾಳಿ ತಂಡಗಳು ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಮೊದಲ ಓವರ್ ಎಸೆದಿದ್ದು ಐಡೆನ್ ಮಾರ್ಕ್ರಾಮ್. ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಆಗಿರುವ ಮಾರ್ಕ್ರಾಮ್ ಇಶಾನ್ ಕಿಶನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದಕ್ಕೂ ಮುನ್ನ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸಲ್ಮಾನ್ ಅಲಿ ಅಘಾ ಮೊದಲ ಓವರ್ ಎಸೆದಿದ್ದರು. ಅಲ್ಲದೆ ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸಲ್ಮಾನ್ ಅಲಿ ಅಘಾ ಕೂಡ ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಎಂಬುದು.
ಇನ್ನು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಮೊದಲ ಓವರ್‌ನಲ್ಲೇ ಆರ್ಯನ್ ದತ್ ಔಟ್ ಮಾಡಿದ್ದರು. ಆರ್ಯನ್ ದತ್ ಕೂಡ ಆಫ್ ಸ್ಪಿನ್ನರ್ ಎಂಬುದು ವಿಶೇಷ.
ಟೀಮ್ ಇಂಡಿಯಾದ ಟಾಪ್-3 ಬ್ಯಾಟರ್ಗಳು, ಅಂದರೆ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಆಫ್ ಸ್ಪಿನ್ ಎಸೆತಗಳಲ್ಲಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇಲ್ಲಾ ರನ್ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯಕ್ಕಾಗಿ ಟಾಪ್-3 ನಲ್ಲಿ ಬದಲಾವಣೆ ಕಂಡು ಬರಲಿದೆ.
ಅಂದರೆ ಈ ಮೂವರು ಎಡಗೈ ದಾಂಡಿಗರಲ್ಲಿ ಒಬ್ಬರನ್ನು ಕೈ ಬಿಟ್ಟು ಅವರ ಬದಲಿಗೆ ಬಲಗೈ ದಾಂಡಿಗನನ್ನು ಕಣಕ್ಕಿಳಿಸಬಹುದು. ಅದರಂತೆ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಸೌತ್ ಆಫ್ರಿಕಾ ಮನಸ್ಸು ಮಾಡಿದ್ರೆ ಭಾರತ ಡೈರೆಕ್ಟ್ ಸೆಮಿಫೈನಲ್ಗೆ!
ಸೂಪರ್-8 ಸುತ್ತಿನಲ್ಲಿ ಭಾರತ ತಂಡಕ್ಕೆ ಉಳಿದಿರುವುದು ಕೇವಲ 2 ಮ್ಯಾಚ್ ಮಾತ್ರ. ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಅಂದರೆ ಭಾರತ ತಂಡವು ಸೆಮಿಫೈನಲ್ಗೆ ಪ್ರವೇಶಿಸಬೇಕಿದ್ದರೆ ಮುಂದಿನ ಎರಡು ಮ್ಯಾಚ್ಗಳಲ್ಲೂ ಜಯ ಸಾಧಿಸಬೇಕು. ಅದಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ ಆಫ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.