ಇಂಡಿಗೋ ವಿಮಾನಗಳ ರದ್ದತಿ: ಫೈನಲ್ ಸೇರಿದಂತೆ 12 ಪಂದ್ಯಗಳನ್ನು ಸ್ಥಳಾಂತರಿಸಿದ ಬಿಸಿಸಿಐ
Syed Mushtaq Ali Trophy: ಇಂಡಿಗೋ ವಿಮಾನಗಳ ರದ್ದತಿ ಇಡೀ ಭಾರತದ ಮೇಲೆ ಪರಿಣಾಮ ಬೀರಿದೆ. ಇದರ ಬಿಸಿ ಬಿಸಿಸಿಐಗೂ ತಟ್ಟಿದ್ದು, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳನ್ನು ಇಂದೋರ್‌ನಿಂದ ಪುಣೆಗೆ ಸ್ಥಳಾಂತರಿಸಲಾಗಿದೆ. ವಿಮಾನ ಬಿಕ್ಕಟ್ಟು ಹಾಗೂ ಇಂದೋರ್‌ನಲ್ಲಿ ಹೋಟೆಲ್‌ಗಳ ಲಭ್ಯತೆಯ ಕೊರತೆಯು ಈ ನಿರ್ಧಾರಕ್ಕೆ ಕಾರಣ. ಬಿಸಿಸಿಐ ಆಟಗಾರರು, ತರಬೇತುದಾರರು ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸಲು ಗಂಭೀರ ಲಾಜಿಸ್ಟಿಕ್ಸ್ ಸವಾಲುಗಳನ್ನು ಎದುರಿಸುತ್ತಿದೆ.

ಇಂಡಿಗೋ (IndiGo) ವಿಮಾನಗಳ ರದ್ದತಿ ಇಡೀ ಭಾರತದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದು ತಾವು ಹೋಗಬೇಕಿದ್ದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗಲಾರದೆ ಸಿಬ್ಬಂದಿಗಳ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ಇಂಡಿಗೋ ವಿಮಾನಗಳ ರದ್ದತಿ ಬಿಸಿಸಿಐಗೂ (BCCI) ಹೊಡೆತ ನೀಡಿದೆ. ವಾಸ್ತವವಾಗಿ ಇಂಡಿಗೋ ಬಿಕ್ಕಟ್ಟಿನಿಂದಾಗಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ನಾಕೌಟ್ ಸುತ್ತಿನ ಪಂದ್ಯಗಳನ್ನು ಸ್ಥಳಾಂತರಿಸಲು ಬಿಸಿಸಿಐ ನಿರ್ಧರಿಸಿದೆ. ಇಂದೋರ್‌ನಲ್ಲಿ ನಡೆಯಬೇಕಿದ್ದ ನಾಕೌಟ್ ಪಂದ್ಯಗಳನ್ನು ಈಗ ಪುಣೆಯಲ್ಲಿ ನಡೆಯಲಿವೆ. ಈ ಪಂದ್ಯಗಳನ್ನು ಮೂಲತಃ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣ ಮತ್ತು ಎಮರಾಲ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಕೊನೆಯ 12 ಪಂದ್ಯಗಳು ಸೂಪರ್ ಲೀಗ್ ಮತ್ತು ಫೈನಲ್ ಅನ್ನು ಡಿಸೆಂಬರ್ 12 ರಿಂದ 18 ರವರೆಗೆ ಇಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು, ಆದರೆ ಈಗ ಈ ಎಲ್ಲಾ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿದೆ.
2 ಕ್ರೀಡಾಂಗಣಗಳಲ್ಲಿ ನಾಕೌಟ್ ಪಂದ್ಯಗಳು
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ಈಗ ಪುಣೆಯ MCA ಕ್ರೀಡಾಂಗಣ ಮತ್ತು DY ಪಾಟೀಲ್ ಅಕಾಡೆಮಿಯಲ್ಲಿ ನಡೆಯಲಿವೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸಿಇಒ ರೋಹಿತ್ ಪಂಡಿತ್ ಇದನ್ನು ದೃಢಪಡಿಸಿದ್ದಾರೆ. ಪಂಡಿತ್ ಅವರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಸೈಯದ್ ಮುಷ್ತಾಕ್ ಅಲಿ ನಾಕೌಟ್ ಪಂದ್ಯಗಳನ್ನು ಈ ಮೊದಲು ನಿಗದಿಪಡಿಸಿದ ಸ್ಥಳಗಳಲ್ಲಿ ಆಯೋಜಿಸಲು ಸಾಧ್ಯವಾಗುವುದಿಲ್ಲ ಎಂದು 15 ದಿನಗಳ ಹಿಂದೆ ಬಿಸಿಸಿಐಗೆ ತಿಳಿಸಲಾಗಿದೆ. ಇಂಡಿಗೊ ವಿಮಾನ ಬಿಕ್ಕಟ್ಟಿನ ಜೊತೆಗೆ, ಡಿಸೆಂಬರ್ 9 ರಿಂದ 12 ರವರೆಗೆ ಇಂದೋರ್‌ನಲ್ಲಿ ವಿಶ್ವ ವೈದ್ಯರ ಸಮ್ಮೇಳನವೂ ನಡೆಯಲಿದೆ. ಇದರಿಂದಾಗಿ ಅಲ್ಲಿ ಹೋಟೆಲ್ ಕೊಠಡಿಗಳು ಲಭ್ಯವಿಲ್ಲ. ಈ ಕಾರಣದಿಂದಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳ ಸ್ಥಳಗಳನ್ನು ಬದಲಿಸಲು ನಿರ್ಧರಿಸಲಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಬಿಸಿಸಿಐ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸ್ಥಳಗಳನ್ನು ಸ್ಥಳಾಂತರಿಸಿರುವುದರಿಂದ ಬಿಸಿಸಿಐ, ಈಗ ಕೆಲವು ಗಂಭೀರ ವ್ಯವಸ್ಥಾಪನಾ ಸವಾಲುಗಳನ್ನು ಎದುರಿಸುತ್ತಿದೆ. ಬಿಸಿಸಿಐ ನಾಲ್ಕು SMAT ಗುಂಪು ಹಂತದ ಸ್ಥಳಗಳಾದ ಅಹಮದಾಬಾದ್, ಕೋಲ್ಕತ್ತಾ, ಲಕ್ನೋ ಮತ್ತು ಹೈದರಾಬಾದ್‌ಗಳಿಂದ ಆಟಗಾರರು, ತರಬೇತುದಾರರು, ಅಂಪೈರ್‌ಗಳು ಮತ್ತು ಅಧಿಕಾರಿಗಳನ್ನು ಪುಣೆಗೆ ಕರೆತರಬೇಕಾಗುತ್ತದೆ. ಇದಲ್ಲದೆ, ಇತರ ದೇಶೀಯ ಪಂದ್ಯಾವಳಿಗಳು ಸಹ ನಡೆಯುತ್ತಿವೆ.
Hardik Pandya: ಹಾರ್ದಿಕ್ ಪಾಂಡ್ಯ ಕಂಬ್ಯಾಕ್ಗೆ ಗ್ರೀನ್ ಸಿಗ್ನಲ್ ನೀಡಿದ ಬಿಸಿಸಿಐ
ಇಂಡಿಗೊ ಬಿಕ್ಕಟ್ಟು ಮುಂದುವರಿದರೆ, ಎಂಟು ತಂಡಗಳನ್ನು, ಅಂಪೈರ್‌ಗಳು ಮತ್ತು ಇತರ ಅಧಿಕಾರಿಗಳೊಂದಿಗೆ, ನಾಕೌಟ್ ಪಂದ್ಯಗಳಿಗಾಗಿ ಪುಣೆಗೆ ಸಾಗಿಸುವುದು ಸವಾಲಿನದ್ದಾಗಿರಬಹುದು ಎಂದು ವರದಿಗಳು ಸೂಚಿಸುತ್ತವೆ. ಇದಲ್ಲದೆ, ಮಹಿಳಾ ಅಂಡರ್-23 ಟಿ20 ಟ್ರೋಫಿ ಮತ್ತು ಪುರುಷರ ಅಂಡರ್-19 ಕೂಚ್ ಬೆಹಾರ್ ಟ್ರೋಫಿಯನ್ನು ಸಹ ಅಹಮದಾಬಾದ್‌ನಲ್ಲಿ ನಡೆಸಲಾಗುತ್ತಿದ್ದು , ತಂಡಗಳು ಮತ್ತು ಅಧಿಕಾರಿಗಳಿಗೆ ಆಗಾಗ್ಗೆ ಪ್ರಯಾಣದ ಅಗತ್ಯವಿರುತ್ತದೆ . ಬಿಸಿಸಿಐ ಈ ಬಿಕ್ಕಟ್ಟನ್ನು ಹೇಗೆ ನಿವಾರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 pm, Fri, 5 December 25
