- Kannada News Sports Cricket news IPL 2021: Punjab Kings will finalise one more replacement in next 2 days
IPL 2021: ಇವರೇ ಪಂಜಾಬ್ ಕಿಂಗ್ಸ್ ತಂಡ ಕಣ್ಣಿಟ್ಟಿರುವ ನಾಲ್ವರು ಆಟಗಾರರು
Punjab Kings: ಪಂಜಾಬ್ ಕಿಂಗ್ಸ್ ತಂಡವು ನಾಲ್ವರು ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಇವರಲ್ಲಿ ಒಬ್ಬರು ಕೆಎಲ್ ರಾಹುಲ್ ಪಡೆ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
Updated on: Aug 23, 2021 | 6:21 PM

IPL 2021 ದ್ವಿತಿಯಾರ್ಧ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರಮುಖ ಆಟಗಾರರು ಹಿಂದೆ ಸರಿದಿದ್ದಾರೆ. ಹೀಗೆ ಟೂರ್ನಿಯ ಉಳಿದ ಪಂದ್ಯಗಳಿಗೆ ಅಲಭ್ಯರಾದವರಲ್ಲಿ ಪಂಜಾಬ್ ಕಿಂಗ್ಸ್ ತಂಡದ ವೇಗದ ಅಸ್ತ್ರಗಳಾಗಿದ್ದ ಜೈ ರಿಚರ್ಡ್ಸನ್ ಹಾಗೂ ರಿಲೆ ಮೆರಿಡಿತ್ ಕೂಡ ಸೇರಿದ್ದರು.

ಇಬ್ಬರು ಪ್ರಮುಖ ವಿದೇಶಿ ವೇಗಿಗಳು ತಂಡದಿಂದ ಹೊರ ನಡೆಯುತ್ತಿದ್ದಂತೆ ಇದೀಗ ಪಂಜಾಬ್ ಫ್ರಾಂಚೈಸಿ ಹೊಸ ಆಟಗಾರರ ಹುಡುಕಾಟಕ್ಕೆ ಮುಂದಾಗಿದ್ದಾರೆ. ಅದರಂತೆ ಈಗಾಗಲೇ ಬದಲಿ ಆಟಗಾರನಾಗಿ ಆಸ್ಟ್ರೇಲಿಯಾ ವೇಗಿ ನಾಥನ್ ಎಲ್ಲೀಸ್ ರನ್ನು ಪಂಜಾಬ್ ತಂಡ ಆಯ್ಕೆ ಮಾಡಿಕೊಂಡಿದೆ.

ಇದಾಗ್ಯೂ ಪಂಜಾಬ್ ತಂಡ ಇನ್ನೋರ್ವ ಬದಲಿ ವಿದೇಶಿ ಆಟಗಾರ ಯಾರು ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಇದೀಗ ಮಾತನಾಡಿರುವ ಪಂಜಾಬ್ ಕಿಂಗ್ಸ್ ಸಿಇಎ, ಇನ್ನೆರಡು ದಿನಗಳಲ್ಲಿ ತಂಡದ ಕೋಚ್ ಅನಿಲ್ ಕುಂಬ್ಳೆ ಹೊಸ ಆಟಗಾರನನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅದರಂತೆ ಪಂಜಾಬ್ ಕಿಂಗ್ಸ್ ತಂಡವು ನಾಲ್ವರು ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಇವರಲ್ಲಿ ಒಬ್ಬರು ಕೆಎಲ್ ರಾಹುಲ್ ಪಡೆ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆ ಆಟಗಾರರ ಪಟ್ಟಿ ಹೀಗಿದೆ.

1) ನೀಲ್ ವ್ಯಾಗ್ನರ್- ಪಂಜಾಬ್ ಕಿಂಗ್ಸ್ ಹಿಟ್ಲೀಸ್ಟ್ನಲ್ಲಿ ನ್ಯೂಜಿಲೆಂಡ್ ವೇಗಿ ಇದ್ದು, ಕಿವೀಸ್ ಎಡಗೈ ವೇಗಿ ಪಂಜಾಬ್ ತಂಡದ 2ನೇ ಬದಲಿ ಆಟಗಾರನಾಗುವ ಸಾಧ್ಯತೆ ಹೆಚ್ಚಿದೆ. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುವ ವ್ಯಾಗ್ನರ್ ಅವರ ಖರೀದಿಗೆ ಪಂಜಾಬ್ ತಂಡವು ಹೆಚ್ಚಿನ ಒಲವು ಹೊಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

2) ನವೀನ್ ಉಲ್ ಹಕ್: ಅಫ್ಘಾನಿಸ್ತಾನದ ಯುವ ವೇಗದ ಬೌಲರ್ ನವೀನ್-ಉಲ್-ಹಕ್ ಮೇಲೂ ಪಂಜಾಬ್ ಕಿಂಗ್ಸ್ ತಂಡ ಕಣ್ಣಿಟ್ಟಿದ್ದು, ಅದರಂತೆ ವ್ಯಾಗ್ನರ್ ಐಪಿಎಲ್ನಿಂದ ಹಿಂದೆ ಸರಿದರೆ ಅಫ್ಘಾನ್ ವೇಗಿಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ನವೀನ್ ಉಲ್ ಹಕ್ ಇದುವರೆಗೆ 67 ಟಿ20 ಪಂದ್ಯಗಳನ್ನು ಅದರಲ್ಲಿ 84 ವಿಕೆಟ್ ಉರುಳಿಸಿದ್ದಾರೆ.

3) ಜೇಸನ್ ಬೆಹ್ರೆಂಡ್ರಾಫ್: ಹೊಸ ಬಾಲ್ ಸ್ಪೆಷಲಿಸ್ಟ್, ಜೇಸನ್ ಬೆಹ್ರೆಂಡ್ರೊಫ್ ಆರಂಭದಲ್ಲೇ ವಿಕೆಟ್ ಉರುಳಿಸುವ ಸಾಮರ್ಥ್ಯ ಹೊಂದಿರುವ ಬೌಲರ್. ಕಳೆದ ಬಾರಿ ಸಿಎಸ್ಕೆ ತಂಡದಲ್ಲಿ ಬದಲಿ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಇದೀಗ ಜೋಶ್ ಹ್ಯಾಝಲ್ವುಡ್ ಸಿಎಸ್ಕೆ ತಂಡಕ್ಕೆ ಮರಳುವುದರೊಂದಿಗೆ ಬೆಹ್ರೆಂಡ್ರಾಫ್ ಹೊರಬಿದ್ದಿದ್ದಾರೆ. ಹೀಗಾಗಿ ಆಸೀಸ್ ವೇಗಿಯನ್ನು ಪಂಜಾಬ್ ಖರೀದಿಸುವ ಸಾಧ್ಯತೆಯಿದೆ.

4) ಕ್ರಿಸ್ ಗ್ರೀನ್: ಪವರ್‌ಪ್ಲೇನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಸೀಸ್ ಆಫ್-ಸ್ಪಿನ್ನರ್ ಕ್ರಿಸ್ ಗ್ರೀನ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಪಂಜಾಬ್ ತಂಡದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.









