ಭಾರತೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ವಿದೇಶಿ ಲೀಗ್​ನತ್ತ ಮುಖ ಮಾಡಿದ ಮುಂಬೈ ಆಟಗಾರ

Harmeet Singh: 2012 ರ ಕಿರಿಯರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಹರ್ಮೀತ್ ಇದೀಗ ತಮ್ಮ ನಾಯಕ ಉನ್ಮುಕ್ತ್ ಚಂದ್ ಹಾದಿಯಲ್ಲೇ ನಡೆದಿದ್ದಾರೆ.

ಭಾರತೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ವಿದೇಶಿ ಲೀಗ್​ನತ್ತ ಮುಖ ಮಾಡಿದ ಮುಂಬೈ ಆಟಗಾರ
Harmeet Singh
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 23, 2021 | 4:36 PM

ಟೀಮ್ ಇಂಡಿಯಾ (Team India) ಅಂಡರ್-19 ತಂಡವನ್ನು ಪ್ರತಿನಿಧಿಸಿದ ಭಾರತೀಯ ಆಟಗಾರರ ವಲಸೆ ಪ್ರಕ್ರಿಯೆ ಮುಂದುವರೆದಿದೆ. ಈ ಹಿಂದೆ 2012 ರ ಭಾರತ ಕಿರಿಯರ ತಂಡದಲ್ಲಿದ್ದ ಸ್ಮಿತ್ ಪಟೇಲ್ (Smith Patel) ಭಾರತೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನತ್ತ (CPL 2021) ಮುಖ ಮಾಡಿದ್ದರು. ಅದರ ಬೆನ್ನಲ್ಲೇ ಅಂಡರ್​-19 ವಿಶ್ವಕಪ್ (Team India Under 19) ವಿಜೇತ ತಂಡದ ನಾಯಕ ಉನ್ಮುಕ್ತ್ ಚಂದ್ (Unmukth Chand) ಕೂಡ ದೇಶೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಯುಎಸ್​ಎ ಕ್ರಿಕೆಟ್​ನತ್ತ ಮುಖ ಮಾಡಿದ್ದರು. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ಕಿರಿಯರ ತಂಡವನ್ನು ಪ್ರತಿನಿಧಿಸಿದ್ದ ಮನನ್ ಶರ್ಮಾ (Manan Sharma) ಕೂಡ ವಿದಾಯ ಹೇಳಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಹರ್ಮೀತ್ ಸಿಂಗ್ (Harmeet Singh). 2012 ರ ಕಿರಿಯರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಹರ್ಮೀತ್ ಇದೀಗ ತಮ್ಮ ಹಳೆಯ ನಾಯಕ ಉನ್ಮುಕ್ತ್ ಚಂದ್ ಹಾದಿಯಲ್ಲೇ ನಡೆದಿದ್ದಾರೆ.

ಹೌದು, ಟೀಮ್ ಇಂಡಿಯಾದಲ್ಲಿ ಅವಕಾಶಗಳ ಕೊರತೆಯ ಕಾರಣ ಭಾರತೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಹರ್ಮೀತ್ ಸಿಂಗ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (USA) ಪರ ಆಡಲು ಮುಂದಾಗಿದ್ದಾರೆ. ಇದರ ಮೊದಲ ಹೆಜ್ಜೆ ಎಂಬಂತೆ ಹರ್ಮೀತ್ ಮೇಜರ್ ಕ್ರಿಕೆಟ್ ಲೀಗ್ (MCL) ನೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅದರಂತೆ ಸಿಯಾಟಲ್ ಥಂಡರ್‌ಬೋಲ್ಟ್ಸ್‌ ಪರ ಭಾರತೀಯ ಕ್ರಿಕೆಟಿಗ ಆಡಲಿದ್ದಾರೆ.

ಉನ್ಮುಕ್ತ್ ಚಂದ್ ಕೂಡ ಅಮೆರಿಕದ ಮೇಜರ್ ಕ್ರಿಕೆಟ್ ಲೀಗ್ ಆಡುತ್ತಿದ್ದು, ಇದೀಗ 2012ರ ವಿಶ್ವಕಪ್ ತಂಡದ ಭಾಗವಾಗಿದ್ದ ಹರ್ಮೀತ್ ಸಿಂಗ್ ಸಹ ನಾಯಕನೊಂದಿಗೆ ಹೊಸ ಲೀಗ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮುಂಬೈ ಪರ ದೇಶೀಯ ಪಂದ್ಯಗಳನ್ನಾಡಿದ್ದ ಹರ್ಮೀತ್ ಸಿಂಗ್ 31 ಪ್ರಥಮ ದರ್ಜೆ ಪಂದ್ಯಗಳಿಂದ 733 ರನ್​ ಹಾಗೂ 87 ವಿಕೆಟ್ ಪಡೆದಿದ್ದರು. ಇದೀಗ ಮುಂಬೈ ತಂಡದಿಂದ ನಿವೃತ್ತಿ ಪಡೆದಿರುವ 28 ವರ್ಷದ ಹರ್ಮೀತ್ ಯುಎಸ್​ಎ ದೇಶವನ್ನು ಪ್ರತಿನಿಧಿಸುವ ವಿಶ್ವಾಸದಲ್ಲಿದ್ದಾರೆ.

ತಮ್ಮ ನಿವೃತ್ತಿ ಬಗ್ಗೆ ಮಾತನಾಡಿರುವ ಹರ್ಮೀತ್ ಸಿಂಗ್ “ನಾನು ಜುಲೈನಲ್ಲಿ ನಿವೃತ್ತಿಯಾಗಿದ್ದೆ. ಆದರೆ ಇದೀಗ ಈ ವಿಷಯವನ್ನು ಬಹಿರಂಗಪಡಿಸಿದ್ದೇನೆ. ಇದೀಗ ನಾನು ಮೇಜರ್ ಕ್ರಿಕೆಟ್ ಲೀಗ್​ನಲ್ಲಿ ಒಪ್ಪಂದ ಮಾಡಿಕೊಂಡಿದ್ದೇನೆ. ಇಲ್ಲಿ ಕ್ರಿಕೆಟ್ ಆಡುವುದರಿಂದ ಉತ್ತಮ ಮೊತ್ತ ಲಭಿಸುತ್ತದೆ. ಇದು ನನ್ನ ಭವಿಷ್ಯಕ್ಕೆ ಭದ್ರತೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಯುಎಸ್ಎಗಾಗಿ ಕ್ರಿಕೆಟ್ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದಿರುವ ಹರ್ಮೀತ್ ಸಿಂಗ್, 30 ತಿಂಗಳುಗಳ ಕಾಲ ಅಮೆರಿಕದಲ್ಲಿ ವಾಸಿಸಿದರೆ, ನೀವು ಯುಎಸ್ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡಲು ಅರ್ಹತೆ ಪಡೆಯುತ್ತೀರಿ. ನಾನು ಈಗಾಗಲೇ 12 ತಿಂಗಳುಗಳನ್ನು ಪೂರೈಸಿದ್ದೇನೆ. ಇನ್ನು 18 ತಿಂಗಳು ಉಳಿದಿದ್ದು, 2023 ರ ಆರಂಭದ ವೇಳೆಗೆ, ನಾನು ಯುಎಸ್‌ಗಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಅರ್ಹತೆಯನ್ನು ಪಡೆಯಬಹುದು ಎಂಬುದು ಹರ್ಮೀತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅವಕಾಶಗಳ ಕೊರತೆ ಬಗ್ಗೆ ಮಾತನಾಡಿದ ಹರ್ಮೀತ್ ಸಿಂಗ್, ನಾನು 2009 ರಿಂದ 2017 ರವರೆಗೆ ಮುಂಬೈ ತಂಡದಲ್ಲಿದ್ದೆ. ಆದರೆ ನನಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿಕ್ಕಿದ್ದು ಕೇವಲ 9 ಪಂದ್ಯಗಳು ಮಾತ್ರ. ಅಂದರೆ ತಂಡದಲ್ಲಿದ್ದರೂ ಹೆಚ್ಚಿನ ಅವಕಾಶ ದೊರೆಯಲಿಲ್ಲ. ಹೀಗಾಗಿ ವಿದೇಶಿ ಲೀಗ್ ಹಾಗೂ ಬೇರೊಂದು ದೇಶದ ಪರ ಆಡುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಲೀಸ್ಟ್​ A ನಲ್ಲಿ 19 ಪಂದ್ಯಗಳನ್ನು ಆಡಿರುವ ಹರ್ಮೀತ್ ಸಿಂಗ್ 21 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಭಾಗವಾಗಿದ್ದರು. ಇದಾಗ್ಯೂ ಐಪಿಎಲ್​ನಲ್ಲಿ ಕೇವಲ 1 ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಮಾತ್ರ ಪಡೆದಿದ್ದರು. ಇದೀಗ ಮೇಜರ್ ಲೀಗ್ ಮೂಲಕ ವಿದೇಶದಲ್ಲಿ ಸೆಕೆಂಡ್ ಇನಿಂಗ್ಸ್ ಶುರು ಮಾಡುವ ವಿಶ್ವಾಸದಲ್ಲಿದ್ದಾರೆ ಹರ್ಮೀತ್ ಸಿಂಗ್.

ಇದನ್ನೂ ಓದಿ: Steve Smith: ಅಫ್ಘಾನಿಸ್ತಾನದ ಮಕ್ಕಳ ರಕ್ಷಣೆಗೆ ಮುಂದಾದ ಸ್ಟೀವ್ ಸ್ಮಿತ್! ಏನಿದರ ಅಸಲಿಯತ್ತು?

ಇದನ್ನೂ ಓದಿ: IPL 2021: RCB ತಂಡಕ್ಕೆ ಇಂಗ್ಲೆಂಡ್​ನ ಎಡಗೈ ವೇಗಿ..?

ಇದನ್ನೂ ಓದಿ: IPL 2021: CSK ತಂಡಕ್ಕೆ ಆಸ್ಟ್ರೇಲಿಯಾ ವೇಗಿ ರಿಎಂಟ್ರಿ..!

(U19 cricketer Harmeet Singh quits Indian Cricket)