ಈ ಬಾರಿಯ ಐಪಿಎಲ್ನಲ್ಲಿ (IPL 2022) ಚೊಚ್ಚಲ ಸೀಸನ್ ಆಡುತ್ತಿರುವ ಎರಡು ಹೊಸ ತಂಡಗಳೇ ಪ್ರಾಬಲ್ಯ ಸಾಧಿಸಿವೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಅವುಗಳೇ ಇದ್ದು, ಪ್ರಶಸ್ತಿ ರೇಸ್ನಲ್ಲಿ ಮುಂಚೂಣಿಯಲ್ಲಿವೆ. ಹರಾಜು ಪೂರ್ಣಗೊಂಡಾಗ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಸಾಧಾರಣ ತಂಡವಾಗಿ ಪರಿಗಣಿಸಿದ್ದೇ ಹೆಚ್ಚು. ಆದರೆ ಮೈದಾನದಲ್ಲಿ ಐಪಿಎಲ್ ಇತಿಹಾಸದ ಪ್ರಬಲ ತಂಡಗಳಿಗೆ ಗುಜರಾತ್ ಸೋಲುಣಿಸಿದೆ. ಅಲ್ಲದೇ ಸಾಂಘಿಕ ಪ್ರದರ್ಶನದ ಮೂಲಕ ಗೆಲುವನ್ನು ಕಾಣುತ್ತಿರುವುದು ಉಳಿದೆಲ್ಲಾ ತಂಡಗಳಿಗಿಂತ ಆ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಗುಜರಾತ್ ಗೆಲುವುಗಳಲ್ಲಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಉಪನಾಯಕ ರಶೀದ್ ಖಾನ್ (Rashid Khan) ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಬೌಲಿಂಗ್ಗಿಂತ ಬ್ಯಾಟಿಂಗ್ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ ಅಫ್ಘನ್ ಮೂಲದ ಸ್ಪಿನ್ನರ್ ರಶೀದ್. ಇದೀಗ ಅವರು ಫ್ಲೈಯಿಂಗ್ ಕಿಸ್ ನೀಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಗುಜರಾತ್ ಟೈಟಾನ್ಸ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಶೀದ್ ಖಾನ್ ಫ್ಲೈಯಿಂಗ್ ಕಿಸ್ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವಿಶೇಷವಾಗಿದ್ದು, ಎಲ್ಲರ ಗಮನಸೆಳೆದಿದೆ. ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಪುತ್ರ ಅಗಸ್ತ್ಯನನ್ನು ಕರೆದುಕೊಂಡಿದ್ದಾರೆ. ಅಗಸ್ತ್ಯನನ್ನು ಮುದ್ದಾಗಿ ಮಾತನಾಡಿಸುತ್ತಿರುವ ರಶೀದ್ ಖಾನ್, ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಇದಕ್ಕೆ ಅಗಸ್ತ್ಯ ಕೂಡ ಅದೇ ರೀತಿ ಮುದ್ದುಮುದ್ದಾಗಿ ಪ್ರತಿಕ್ರಿಯಿಸಿದ್ದಾನೆ. ಇದು ಎಲ್ಲರ ಮುಖದಲ್ಲಿ ನಗು ಮೂಡಿಸಿದೆ.
ಗುಜರಾತ್ ಟೈಟಾನ್ಸ್ ವಿಡಿಯೋ ಹಂಚಿಕೊಂಡಿದ್ದು, ‘‘ಕೇವಲ ಮೂರೇ ಪದಗಳು, ಅತ್ಯಂತ ಮುದ್ದಾದ ವಿಡಿಯೋವಿದು’’ ಎಂದು ಕ್ಯಾಪ್ಶನ್ ನೀಡಿದೆ. ಸದ್ಯ ಈ ವಿಡಿಯೋ ಅಭಿಮಾನಿಗಳ ಮನಗೆದ್ದಿದ್ದು, ನಾನಾ ವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ ಹಂಚಿಕೊಂಡ ವಿಡಿಯೋ ಇಲ್ಲಿದೆ:
Just three words… Cutest Video Ever?#SeasonOfFirsts #AavaDe @hardikpandya7 @rashidkhan_19 pic.twitter.com/j68p8ebml3
— Gujarat Titans (@gujarat_titans) May 4, 2022
ಗುಜರಾತ್ ಟೈಟಾನ್ಸ್ ತಂಡ ಸದ್ಯ ಆಡಿರುವ 10 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು, 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಮೇ 6ರಂದು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ತಂಡವನ್ನು ಗುಜರಾತ್ ಎದುರಿಸಲಿದೆ. ಗುಜರಾತ್ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಶರಣಾಗಿತ್ತು.
ಮೇ 10ರಂದು ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮೇ 15ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು, ಮೇ 19ರ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮುಂದಿನ ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನದಲ್ಲಿ ಲೀಗ್ ಹಂತ ಮುಕ್ತಾಯಗೊಳಿಸುವ ಯೋಚನೆಯಲ್ಲಿದೆ ಗುಜರಾತ್. ಆದರೆ ಗುಜರಾತ್ ಎದುರಿಸಲಿರುವ ಎಲ್ಲಾ ತಂಡಗಳು ಪ್ಲೇ ಆಫ್ ಪ್ರವೇಶಿಸಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಹೀಗಾಗಿ ಐಪಿಎಲ್ನಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಕಾವೇರುತ್ತಿದೆ.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ