RR vs SRH: ಸನ್‌ರೈಸರ್ಸ್ ವಿರುದ್ಧ ಭರ್ಜರಿ ಜಯಗಳಿಸಿ ವಿಶೇಷ ದಾಖಲೆ ಬರೆದ ರಾಜಸ್ಥಾನ್; ಉಳಿದ ತಂಡಗಳಿಗೆ ನಡುಕ ಶುರು
RR vs SRH IPL Match Result: ನಿನ್ನೆ (ಮಾ.29) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಐಪಿಎಲ್ 2022ರಲ್ಲಿ ಇದುವರೆಗೆ ಎಲ್ಲಾ ತಂಡಗಳು ಒಂದೊಂದು ಒಂದ್ಯ ಆಡಿದಂತಾಗಿದೆ. ಈ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಉಳಿದೆಲ್ಲಾ ತಂಡಗಳಿಗಿಂತ ಭಿನ್ನ ಸಾಧನೆ ಮಾಡಿದ್ದು, ಉಳಿದ ತಂಡಗಳಿಗೆ ತಮ್ಮ ಆಗಮನದ ಸಂದೇಶ ಸಾರಿದೆ. ನಿನ್ನೆ (ಮಾ.29) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 5ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 61 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಐಪಿಎಲ್ನಲ್ಲಿ ಗೆಲ್ಲಲು ಟಾಸ್ ಗೆದ್ದರೆ ಸಾಕು ಎಂಬ ಮಾತಿನ ನಡುವೆ, ಟಾಸ್ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡರು. ಎರಡನೇ ಇನ್ನಿಂಗ್ಸ್ನಲ್ಲಿ ಇಬ್ಬನಿ ಇರುವ ಕಾರಣ, ಬೌಲಿಂಗ್ ಕಷ್ಟವಾಗುತ್ತದೆ, ಬ್ಯಾಟಿಂಗ್ ಸುಲಭವಾಗುತ್ತದೆ ಎನ್ನುವುದು ಎಲ್ಲಾ ಐಪಿಎಲ್ ತಂಡಗಳ ಯೋಚನೆ. ಇದಕ್ಕೆ ಕೇನ್ ಕೂಡ ಹೊರತಾಗಿರಲಿಲ್ಲ. ಅದೇ ಮಾದರಿಯಲ್ಲಿ ಅವರು ಬೌಲಿಂಗ್ ಆಯ್ದುಕೊಂಡರು. ಆದರೆ ರಾಜಸ್ಥಾನ್ ಆಲ್ರೌಂಡ್ ನಿರ್ವಹಣೆಗೆ ಕೇನ್ ಪಡೆ ಮರುಮಾತಿಲ್ಲದೇ ಶರಣಾಯಿತು. ಈ ಮೂಲಕ ಇದುವರೆಗೆ ನಡೆದ 5 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿ ಗೆದ್ದ ತಂಡ ರಾಜಸ್ಥಾನ್ ಮಾತ್ರವಾಗಿದ್ದು, ದಾಖಲೆ ಬರೆದಿದೆ.
ರಾಜಸ್ಥಾನ್ ಹರಾಜು ನಡೆದಲ್ಲಿಂದ ಬಲಾಢ್ಯ ತಂಡವಾಗಿ ತೋರುತ್ತಿತ್ತು. ಇದೀಗ ಮೈದಾನದಲ್ಲಿನ ನಿರ್ವಹಣೆಯಲ್ಲೂ ಗಮನ ಸೆಳೆದಿದ್ದು ಉಳಿದ ತಂಡಗಳಿಗೆ ತನ್ನ ಆಗಮನವನ್ನು ಸಾರಿದೆ. ಯಜುವೇಂದ್ರ ಚಾಹಲ್ ಹಾಗೂ ಆರ್.ಅಶ್ವಿನ್ರಂತಹ ಬಲಾಢ್ಯ ಸ್ಪಿನ್ನರ್ಗಳು ತಂಡಕ್ಕೆ ಏಕೆ ಅಗತ್ಯ ಎನ್ನುವುದನ್ನು ಸಾಬೀತುಪಡಿಸಿದ ಈ ಪಂದ್ಯದಲ್ಲಿ, ರಾಜಸ್ಥಾನ್ನ ಬ್ಯಾಟರ್ಗಳೂ ಅಬ್ಬರಿಸಿದರು. ಒಟ್ಟಾರೆಯಾಗಿ ಮೊದಲು ಬ್ಯಾಟ್ ಮಾಡಿ ಭರ್ಜರಿ ಜಯ ದಾಖಲಿಸಿದ ರಾಜಸ್ಥಾನ್ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವುದಲ್ಲದೇ, ಉಳಿದ ಸಂದೇಶಗಳಿಗೆ ಕಠಿಣ ಸಂದೇಶ ರವಾನಿಸಿದೆ.
211 ರನ್ಗಳ ದೊಡ್ಡ ಗುರಿ ನೀಡಿದ ರಾಜಸ್ಥಾನ್:
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ರಾಜಸ್ಥಾನ್ ರಾಯಲ್ಸ್ ಭುವನೇಶ್ವರ್ ಕುಮಾರ್ ಅವರ ಮಾರಕ ಎಸೆತಗಳನ್ನು ಎದುರಿಸಲು ಮೊದಲು ಪರದಾಡಿತು. ಅನುಭವಿ ಜೋಸ್ ಬಟ್ಲರ್ ಕೂಡ ತಿಣುಕಾಡಿದರು. 21 ಎಸೆತಗಳ ಅವಧಿಯಲ್ಲಿ ಮೂರು ನೋ-ಬಾಲ್ ಎಸೆದ ಸನ್‌ರೈಸರ್ಸ್ ಬೌಲಿಂಗ್ ನಂತರ ಹಳಿತಪ್ಪಿತು. ನೋಬಾಲ್ನಲ್ಲಿ ಔಟ್ ಆಗಿದ್ದ ಜೋಸ್ ಬಟ್ಲರ್, ತಮಗೆ ಲಭಿಸಿದ ಜೀವದಾನದ ಭರಪೂರ ಲಾಭವೆತ್ತಿದರು. 28 ಎಸೆತಗಳಲ್ಲಿ 35 ರನ್ಗಳಿಸಿ ತಂಡಕ್ಕೆ ಉತ್ತಮ ಆರಂಭ ಕಲ್ಪಿಸಿದರು.
ಕಪ್ತಾನನ ಆಟ: ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸಂಜು ಸ್ಯಾಮ್ಸನ್ ಕಪ್ತಾನನ ಆಟವಾಡಿದ್ದಲ್ಲದೇ ತಂಡದ ರನ್ರೇಟ್ 10ರ ಆಸುಪಾಸಿನಲ್ಲಿರುವಂತೆ ನೋಡಿಕೊಂಡರು. ಇದಕ್ಕೆ ಕನ್ನಡಿಗ ದೇವದತ್ತ ಪಡಿಕ್ಕಲ್ ಭರ್ಜರಿ ಸಾಥ್ ನೀಡಿದರು. ಸ್ಯಾಮ್ಸನ್ 27 ಎಸೆಗಳಲ್ಲಿ 5 ಸಿಕ್ಸರ್ ಸಹಿತ 55 ರನ್ ಗಳಿಸಿದರು. ಪಡಿಕ್ಕಲ್ 29 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 41 ರನ್ ಗಳಿಸಿದರು. ಸ್ಲಾಗ್ ಓವರ್ಗಳಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಕೆರೆಬಿಯನ್ ದೈತ್ಯ ಶಿಮ್ರಾನ್ ಹೆಟ್ಮೈಯರ್ ಕೇವಲ 13 ಎಸೆತಗಳಲ್ಲಿ 32 ರನ್ ಸಿಡಿಸಿದರು. ಇದರಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಈ ಮೂಲಕ ರಾಜಸ್ಥಾನ್ ತಂಡವು 20 ಓವರ್ಗಳಲ್ಲಿ 210 ರನ್ ಪೇರಿಸಿತು.
ಸನ್‌ರೈಸರ್ಸ್ ಆರಂಭಿಕ ಬ್ಯಾಟರ್ಗಳ ಕಳಪೆ ಪ್ರದರ್ಶನ:
ರಾಜಸ್ಥಾನ್ ನೀಡಿದ ಗುರಿಯನ್ನು ಬೆಂಬತ್ತಿದ ಸನ್ರೈಸರ್ಸ್ಗೆ ಗೆಲುವಿನ ಅವಕಾಶ ಇರಲಿದೆ ಎಂದು ಮೊದಲು ನಿರೀಕ್ಷಿಸಲಾಗಿತ್ತು. ಆದರೆ ರಾಜಸ್ಥಾನ್ ಬಿಗಿ ಬೌಲಿಂಗ್ ಸನ್‌ರೈಸರ್ಸ್ ಗೆಲುವಿಗೆ ಯಾವುದೇ ಅವಕಾಶ ನೀಡಲಿಲ್ಲ. ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿಯೇ ಎಸ್ಆರ್ಹೆಚ್ ಕಪ್ತಾನ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಹೈದರಾಬಾದ್ ತಂಡದ ಕುಸಿತಕ್ಕೆ ನಾಂದಿ ಹಾಡಿದರು.
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್ ಅವರ ಬ್ಯಾಟ್ನಿಂದ ಸ್ಕೋರ್ಗಳು ಒಂದಂಕಿ ದಾಟಲಿಲ್ಲ. 37 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಸನ್‌ರೈಸರ್ಸ್ ಹೀನಾಯವಾಗಿ ಸೋಲಲಿದೆ ಎಂದು ಭಾವಿಸಲಾಗಿತ್ತು. ಆದರೆ ಮರ್ಕ್ರಮ್, ಶೆಫರ್ಡ್ ಹಾಗೂ ವಾಷಿಂಗ್ಟನ್ ಸುಂದರ್ ತಮ್ಮ ಅಮೂಲ್ಯ ಕೊಡುಗೆಗಳಿಂದ ತಂಡದ ಹೀನಾಯ ಸೋಲನ್ನು ತಪ್ಪಿಸಿದರು. ಮರ್ಕ್ರಮ್ 41 ಎಸೆತಗಳಲ್ಲಿ 57 ರನ್ಗಳಿಸಿದರೆ, ಕೆರೆಬಿಯನ್ ಆಟಗಾರ ರೊಮಾರಿಯೋ ಶೆಫರ್ಡ್ 18 ಎಸೆತಗಳಲ್ಲಿ 24 ರನ್ ಗಳಿಸಿದರು.
ಮಾಜಿ ಆರ್ಸಿಬಿ ಆಟಗಾರ ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಬಲುದುಬಾರಿಯಾಗಿದ್ದರು. ಆದರೆ ಬ್ಯಾಟಿಂಗ್ನಲ್ಲಿ ಮಿಂಚಿದ ಅವರು, 14 ಎಸೆತಗಳಲ್ಲಿ 40 ರನ್ ಸಿಡಿಸಿದರು. ಆದರೆ ಅದಾಗಲೇ ಸನ್‌ರೈಸರ್ಸ್ ಸೋಲು ಖಚಿತಪಟ್ಟಿತ್ತು. ಒಟ್ಟಾರೆ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 149 ರನ್ಗಳಿಸಿ ಶರಣಾಯಿತು. ಈ ಮೂಲಕ ರಾಜಸ್ಥಾನ್ ಭರ್ಜರಿ 61 ರನ್ಗಳ ಜಯ ಸಾಧಿಸಿತು. ರಾಜಸ್ಥಾನ್ ಪರ ಚಾಹಲ್ 3 ವಿಕೆಟ್ ಪಡೆದರೆ, ಪ್ರಸಿದ್ಧ ಕೃಷ್ಣ ಹಾಗೂ ಟ್ರೆಂಟ್ ಬೋಲ್ಟ್ ತಲಾ 2 ವಿಕೆಟ್ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಆರ್ಆರ್ ಕಪ್ತಾನ ಸಂಜು ಸ್ಯಾಮ್ಸನ್ ಪಾಲಾಯಿತು. ಈ ಜಯದಿಂದ ಪಾಯಿಂಟ್ ಪಟ್ಟಿಯಲ್ಲಿ ರಾಜಸ್ಥಾನ್ ಅಗ್ರಸ್ಥಾನಕ್ಕೇರಿದೆ.
ಇದನ್ನೂ ಓದಿ:
IPL 2022: ಐಪಿಎಲ್ನಲ್ಲಿ ಕಠಿಣ ನಿಯಮ ಜಾರಿ ಮಾಡಲು ಮುಂದಾದ ಬಿಸಿಸಿಐ
IPL 2022: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ನಿರ್ಮಿಸಿದ RCB ಮತ್ತು PBKS
Published On - 8:19 am, Wed, 30 March 22