IPL 2022: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ನಿರ್ಮಿಸಿದ RCB ಮತ್ತು PBKS

IPL 2022: 206 ರನ್​ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಆರಂಭ ಪಡೆದಿತ್ತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಮೊದಲ 6 ಓವರ್​ಗಳಲ್ಲಿ 63 ರನ್ ಬಾರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

IPL 2022: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ನಿರ್ಮಿಸಿದ RCB ಮತ್ತು PBKS
PBKS vs RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on:Mar 28, 2022 | 5:00 PM

205 ರನ್​ಗಳ ಟಾರ್ಗೆಟ್​…19 ಓವರ್​ಗಳಲ್ಲಿ ಚೇಸಿಂಗ್…ಇದು ಐಪಿಎಲ್​ನ 3ನೇ ಪಂದ್ಯದ (IPL 2022) ಸಂಕ್ಷಿಪ್ತ ಸ್ಕೋರ್ ವರದಿ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  ಹಾಗೂ ಪಂಜಾಬ್ ಕಿಂಗ್ಸ್ (PBKS) ನಡುವಣ ಮುಖಾಮುಖಿ ಎಲ್ಲಾ ರೀತಿಯಲ್ಲೂ ಮನರಂಜನೆಯ ರಸದೌತಣವಾಗಿತ್ತು. ಆರ್​ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಅಬ್ಬರಿಸಿದ್ದರು. ಅದರಲ್ಲೂ 57 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್​ನೊಂದಿಗೆ ಡುಪ್ಲೆಸಿಸ್ 88 ರನ್​ ಸಿಡಿಸಿದರು. ಇನ್ನು ಕೊಹ್ಲಿ 29 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸಿದ್ರೆ, ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಕೇವಲ 14 ಎಸೆತಗಳಲ್ಲಿ 32 ರನ್ ಚಚ್ಚಿದ್ದರು. ಅಲ್ಲಿಗೆ 20 ಓವರ್​ಗಳಲ್ಲಿ ಆರ್​ಸಿಬಿ ತಂಡದ ಮೊತ್ತ 205 ಕ್ಕೆ ಬಂದು ನಿಂತಿತು. ವಿಶೇಷ ಎಂದರೆ ಇದರಲ್ಲಿ 23 ರನ್​ಗಳು ಹೆಚ್ಚುವರಿಯಾಗಿ ಬಂದಿರುವುದು. ಅಂದರೆ 5 ಬೈ ರನ್, 6 ಲೆಗ್​ ಬೈ ರನ್, 12 ವೈಡ್ ಎಸೆಯುವ ಮೂಲಕ ಪಂಜಾಬ್ ಕಿಂಗ್ಸ್​ ಬೌಲರ್​​ಗಳು ಆರ್​ಸಿಬಿ 23 ಎಕ್ಸ್​ಟ್ರಾ ರನ್ ನೀಡಿದ್ದರು.

ಅದರಂತೆ 206 ರನ್​ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಆರಂಭ ಪಡೆದಿತ್ತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಮೊದಲ 6 ಓವರ್​ಗಳಲ್ಲಿ 63 ರನ್ ಬಾರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆ ಬಳಿಕ ಬಂದ ಭಾನುಕಾ ರಾಜಪಕ್ಸೆ 4 ಭರ್ಜರಿ ಸಿಕ್ಸರ್​ನೊಂದಿಗೆ ಕೇವಲ 22 ಎಸೆತಗಳಲ್ಲಿ 43 ರನ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಶಾರೂಕ್ ಖಾನ್ ಎಚ್ಚರಿಕೆಯ ಆಟವಾಡಿದ್ರೆ, ಓಡಿಯನ್ ಸ್ಮಿತ್ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್​ನೊಂದಿಗೆ 25 ರನ್​ ಬಾರಿಸಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಕೇವಲ 19 ಓವರ್​ಗಳಲ್ಲಿ 208 ರನ್​ ಕಲೆಹಾಕುವ ಮೂಲಕ ಗೆಲುವಿನ ಗುರಿ ಮುಟ್ಟಿತು. ವಿಶೇಷ ಎಂದರೆ ಆರ್​ಸಿಬಿ ಬೌಲರುಗಳು ಕೂಡ ಪಂಜಾಬ್ ಕಿಂಗ್ಸ್ ತಂಡಕ್ಕೆ ಧಾರಾಳವಾಗಿ ಹೆಚ್ಚುವರಿ ರನ್ ಬಿಟ್ಟುಕೊಟ್ಟಿದ್ದರು. ಬರೋಬ್ಬರಿ 21 ವೈಡ್ ಹಾಗೂ 1 ಬೈ ರನ್ ಮೂಲಕ ಆರ್​ಸಿಬಿ ಬೌಲರುಗಳು ಒಟ್ಟು 22 ಎಕ್ಸ್​ಟ್ರಾ ರನ್ ನೀಡಿದ್ದರು.

ಹೀಗೆ ಎರಡೂ ತಂಡಗಳ ಬೌಲರ್​ಗಳು ಒಟ್ಟು 45 ಎಕ್ಸ್​ಟ್ರಾ ರನ್​ ನೀಡುವ ಮೂಲಕ ಐಪಿಎಲ್​ ಇತಿಹಾಸದಲ್ಲೇ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅಂದರೆ ಐಪಿಎಲ್​ನಲ್ಲಿ ಒಂದೇ ಪಂದ್ಯದಲ್ಲಿ ಅತ್ಯಧಿಕ ಎಕ್ಸ್​ಟ್ರಾ ರನ್ ಮೂಡಿಬಂದ ಪಂದ್ಯವೆಂಬ ಅಪಖ್ಯಾತಿ ಇದೀಗ ಆರ್​​ಸಿಬಿ-ಪಂಜಾಬ್ ಕಿಂಗ್ಸ್ ನಡುವಣ ಪಂದ್ಯಕ್ಕೆ ದಕ್ಕಿದೆ. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಡೆಕ್ಕನ್ ಚಾರ್ಜರ್ಸ್ ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳ ಹೆಸರಿನಲ್ಲಿತ್ತು.

2008 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್​ ತಂಡಗಳು ಒಟ್ಟು 38 ಎಕ್ಸ್​ಟ್ರಾ ರನ್​ಗಳನ್ನು ನೀಡಿದ್ದು ಇದುವರೆಗಿನ ಕಳಪೆ ದಾಖಲೆಯಾಗಿತ್ತು. ಇದೀಗ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಬೌಲರುಗಳು ಒಟ್ಟು 45 ಎಕ್ಸ್​ಟ್ರಾ ರನ್​ಗಳನ್ನು ನೀಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಈ ಪಂದ್ಯವಾಡಿದ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ.

ಆರ್​ಸಿಬಿ ಪ್ಲೇಯಿಂಗ್ 11: ಫಾಫ್ ಡುಪ್ಲೆಸಿಸ್, ಅನೂಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫಾನ್ ರುದರ್​ಫೋರ್ಡ್​, ದಿನೇಶ್ ಕಾರ್ತಿಕ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಭಾನುಕಾ ರಾಜಪಕ್ಸೆ (ವಿಕೆಟ್ ಕೀಪರ್), ಶಾರುಖ್ ಖಾನ್, ಒಡಿಯನ್ ಸ್ಮಿತ್, ರಾಜ್ ಬಾವಾ, ಅರ್ಷ್‌ದೀಪ್ ಸಿಂಗ್, ಹರ್‌ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

Published On - 4:53 pm, Mon, 28 March 22