IPL 2022: ಯಾವ ತಂಡಕ್ಕೆ ಯಾರು ಆರಂಭಿಕ: ಇಲ್ಲಿದೆ 10 ತಂಡಗಳ ಓಪನಿಂಗ್ ಜೋಡಿ
IPL 2022: ಡೆಲ್ಲಿ ಪರ ಈ ಸಲ ಪೃಥ್ವಿ ಶಾ ಹಾಗೂ ವಾರ್ನರ್ ಆರಂಭಿಕರಾಗಿ ಆಡಲಿದ್ದಾರೆ. ಆದರೆ ಡೇವಿಡ್ ವಾರ್ನರ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವ ಕಾರಣ, ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಟಿಮ್ ಸಿಫರ್ಟ್ಗೆ ಅವಕಾಶ ಸಿಗಬಹುದು.

ರಂಗೀನ್ ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್ 15 (IPL 2022) ಮಾರ್ಚ್ 26 ರಿಂದ ರಂಗೇರಲಿದೆ. ಈ ಬಾರಿ ಮುಂಬೈ ಹಾಗೂ ಪುಣೆಯ ಒಟ್ಟು 4 ಸ್ಟೇಡಿಯಂಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸವನ್ನು ಆರಂಭಿಸಿದೆ. ಅದರಲ್ಲೂ ಕೆಲ ತಂಡಗಳು ಆರಂಭಿಕ ಜೋಡಿಯೊಂದಿಗೆ ಅಭ್ಯಾಸ ನಡೆಸುತ್ತಿದೆ. ಹೀಗಾಗಿ ಈ ಆಟಗಾರರೇ ಪ್ರತಿ ತಂಡಗಳ ಓಪನರ್ಸ್ ಆಗಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು. ಹಾಗಿದ್ರೆ 10 ತಂಡಗಳ ಆರಂಭಿಕ ಜೋಡಿ ಯಾರಾಗಲಿದ್ದಾರೆ ಎಂದು ನೋಡೋಣ…
ರೋಹಿತ್ ಶರ್ಮಾ-ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್): ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಹೀಗಾಗಿ ಮುಂಬೈ ಪರ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಆಡಲಿದ್ದಾರೆ. ಈ ಹಿಂದೆ ಇದೇ ಜೋಡಿ ಮುಂಬೈ ಇಂಡಿಯನ್ಸ್ ತಂಡದ ಓಪನರ್ಸ್ ಆಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಇದೇ ಜೋಡಿಯನ್ನೇ ಮುಂಬೈ ಕೋಚ್ ಮಹೇಲ ಜಯವರ್ಧನೆ ಆರಂಭಿಕರಾಗಿ ಆಡಿಸಲಿದ್ದಾರೆ.
ರುತುರಾಜ್ ಗಾಯಕ್ವಾಡ್-ಡೆವೊನ್ ಕಾನ್ವೆ (ಚೆನ್ನೈ ಸೂಪರ್ ಕಿಂಗ್ಸ್): ಸಿಎಸ್ಕೆ ತಂಡದ ಸ್ಟಾರ್ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ ಅವರು ಈ ಬಾರಿ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತ ಚೆನ್ನೈ ತಂಡವು ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೆಯನ್ನು ಆಯ್ಕೆ ಮಾಡಿಕೊಂಡಿದ್ದು, ಹೀಗಾಗಿ ಸಿಎಸ್ಕೆ ಪರ ರುತುರಾಜ್-ಕಾನ್ವೆ ಜೋಡಿ ಇನಿಂಗ್ಸ್ ಆರಂಭಿಸುವುದು ಖಚಿತ ಎನ್ನಬಹುದು.
ವೆಂಕಟೇಶ್ ಅಯ್ಯರ್-ಸ್ಯಾಮ್ ಬಿಲ್ಲಿಂಗ್ಸ್: ಕೆಕೆಆರ್ ತಂಡವು ಆರಂಭಿಕನಾಗಿ ಆಯ್ಕೆ ಮಾಡಿಕೊಂಡಿದ್ದ ಅಲೆಕ್ಸ್ ಹೇಲ್ಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದೀಗ ಬದಲಿ ಆಟಗಾರನಾಗಿ ಕೆಕೆಆರ್ ಆರೋನ್ ಫಿಂಚ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಾಗ್ಯೂ ಫಿಂಚ್ ಪಾಕಿಸ್ತಾನ್ ವಿರುದ್ದ ಸರಣಿ ಆಡುತ್ತಿರುವ ಕಾರಣ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ತಂಡದಲ್ಲಿರುವ ಇಂಗ್ಲೆಂಡ್ನ ಮತ್ತೋರ್ವ ಆರಂಭಿಕ ಆಟಗಾರ ಸ್ಯಾಮ್ ಬಿಲ್ಲಿಂಗ್ ಯುವ ಎಡಗೈ ದಾಂಡಿಗ ವೆಂಕಟೇಶ್ ಅಯ್ಯರ್ ಜೊತೆ ಇನಿಂಗ್ಸ್ ಆರಂಭಿಸಬಹುದು.
ದೇವದತ್ ಪಡಿಕ್ಕಲ್-ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್): ಆರ್ಆರ್ ತಂಡದಲ್ಲಿ ಆರಂಭಿಕರಾಗಿ ಯುವ ಆಟಗಾರರಾದ ದೇವದತ್ ಪಡಿಕ್ಕಲ್ ಹಾಗೂ ಜೋಸ್ ಬಟ್ಲರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ಸೀಸನ್ನಲ್ಲಿ ಬಟ್ಲರ್ ಅನುಪಸ್ಥಿತಿಯಲ್ಲಿ ಎವಿನ್ ಲೂಯಿಸ್ ಆರಂಭಿಕನಾಗಿ ಕಾಣಿಸಿಕೊಂಡಿದ್ದರು. ಇದೀಗ ಎವಿನ್ ಲೂಯಿಸ್ ಲಕ್ನೋ ತಂಡದಲ್ಲಿದ್ದಾರೆ.
ರಾಹುಲ್ ತ್ರಿಪಾಠಿ-ಐಡೆನ್ ಮಾರ್ಕ್ರಾಮ್ (ಸನ್ರೈಸರ್ಸ್ ಹೈದರಾಬಾದ್): ಎಸ್ಆರ್ಹೆಚ್ ತಂಡದ ಆರಂಭಿಕರಾಗಿ ಕಾಣಿಸಿಕೊಳ್ಳುತ್ತಿದ್ದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋ ಈ ಬಾರಿ ಹೊಸ ತಂಡಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಸನ್ರೈಸರ್ಸ್ ಈ ಬಾರಿ ಖರೀದಿಸಿದ ಸೌತ್ ಆಫ್ರಿಕಾ ಆಟಗಾರ ಐಡೆನ್ ಮಾರ್ಕ್ರಾಮ್ ಹಾಗೂ ಯುವ ಸ್ಪೋಟಕ ಬ್ಯಾಟ್ಸ್ಮನ್ ರಾಹುಲ್ ತ್ರಿಪಾಠಿಯನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು.
ಪೃಥ್ವಿ ಶಾ-ಡೇವಿಡ್ ವಾರ್ನರ್ (ಡೆಲ್ಲಿ ಕ್ಯಾಪಿಟಲ್ಸ್): ಡೆಲ್ಲಿ ಪರ ಈ ಸಲ ಪೃಥ್ವಿ ಶಾ ಹಾಗೂ ವಾರ್ನರ್ ಆರಂಭಿಕರಾಗಿ ಆಡಲಿದ್ದಾರೆ. ಆದರೆ ಡೇವಿಡ್ ವಾರ್ನರ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವ ಕಾರಣ, ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಟಿಮ್ ಸಿಫರ್ಟ್ಗೆ ಅವಕಾಶ ಸಿಗಬಹುದು.
ಮಯಾಂಕ್ ಅಗರ್ವಾಲ್-ಶಿಖರ್ ಧವನ್ (ಪಂಜಾಬ್ ಕಿಂಗ್ಸ್): ಪಂಜಾಬ್ ಕಿಂಗ್ಸ್ ಪರ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಎಡಗೈ ದಾಂಡಿಗ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಕೆಎಲ್ ರಾಹುಲ್-ಕ್ವಿಂಟನ್ ಡಿಕಾಕ್ (ಲಕ್ನೋ ಸೂಪರ್ ಜೈಂಟ್ಸ್): ಲಕ್ನೋ ಪರ ನಾಯಕ ಕೆಎಲ್ ರಾಹುಲ್ ಹಾಗೂ ಸೌತ್ ಆಫ್ರಿಕಾ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಓಪನರ್ಸ್ ಆಗಿ ಆಡಲಿದ್ದಾರೆ. ಆದರೆ ಡಿಕಾಕ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವ ಕಾರಣ ಎವಿನ್ ಲೂಯಿಸ್ಗೆ ಅವಕಾಶ ಸಿಗಬಹುದು.
ಶುಭ್ಮನ್ ಗಿಲ್-ಮ್ಯಾಥ್ಯೂ ವೇಡ್ (ಗುಜರಾತ್ ಟೈಟನ್ಸ್); ಗುಜರಾತ್ ತಂಡಕ್ಕೆ ಆರಂಭಿಕನಾಗಿ ಆಯ್ಕೆಯಾಗಿದ್ದ ಜೇಸನ್ ರಾಯ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿ ಆಟಗಾರನಾಗಿ ಅಫ್ಘಾನ್ ಆಟಗಾರ ರಹಮಾನುಲ್ಲಾ ಗುರ್ಬಾಜ್ ಆಯ್ಕೆಯಾಗಿದ್ದಾರೆ. ಇದಾಗ್ಯೂ ತಂಡದಲ್ಲಿರುವ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ ಹಾಗೂ ಶುಭ್ಮನ್ ಗಿಲ್ ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಫಾಫ್ ಡುಪ್ಲೆಸಿಸ್-ಅನೂಜ್ ರಾವತ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): ಆರ್ಸಿಬಿ ಆರಂಭಿಕರಾಗಿ ಫಾಫ್ ಡುಪ್ಲೆಸಿಸ್ ಹಾಗೂ ಯುವ ಎಡಗೈ ದಾಂಡಿಗ ಅನೂಜ್ ರಾವತ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಅಭ್ಯಾಸ ಪಂದ್ಯಗಳಲ್ಲಿ ಈ ಜೋಡಿಯನ್ನೇ ಆರಂಭಿಕರಾಗಿ ಕಣಕ್ಕಿಳಿಸಲಾಗಿದೆ. ಹೀಗಾಗಿ ಡುಪ್ಲೆಸಿಸ್ ಜೊತೆ ರಾವತ್ ಓಪನರ್ ಆಗಿ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?




