ಟೀಮ್ ಇಂಡಿಯಾ (Team India) ಐಸಿಸಿ ಟ್ರೋಫಿ ಗೆದ್ದು ಬರೋಬ್ಬರಿ 9 ವರ್ಷಗಳಾಗಿವೆ. 2013 ರಲ್ಲಿ ಕೊನೆಯ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ ಇದೀಗ ಮತ್ತೊಂದು ಐಸಿಸಿ ಟೂರ್ನಿಗೆ ಸಜ್ಜಾಗಬೇಕಿದೆ. ಈ ಬಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಇದಕ್ಕಾಗಿ ಈಗಲೇ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಬೇಕಿದೆ. ಆದರೆ ಪ್ರಸ್ತುತ ಐಪಿಎಲ್ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಕೆಲ ಆಟಗಾರರಿಗೆ ತಂಡದಲ್ಲಿ ಚಾನ್ಸ್ ಸಿಗಬಹುದು. ಅದರಲ್ಲೂ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಅಬ್ಬರಿಸುತ್ತಿರುವ ದಿನೇಶ್ ಕಾರ್ತಿಕ್ಗೆ ಅವಕಾಶ ಸಿಗಲಿದೆಯಾ ಎಂಬುದೇ ದೊಡ್ಡ ಪ್ರಶ್ನೆ. ಏಕೆಂದರೆ 36 ವರ್ಷದ ಡಿಕೆ 2019 ರ ಬಳಿಕ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಇದೇ ಕಾರಣದಿಂದ ಕಾರ್ತಿಕ್ ಮತ್ತೆ ಕಂಬ್ಯಾಕ್ ಮಾಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಬಗ್ಗೆ ಟೀಮ್ ಇಂಡಿಯಾದ ದಂತಕಥೆ ಸುನಿಲ್ ಗವಾಸ್ಕರ್ ಮನಬಿಚ್ಚಿ ಮಾತನಾಡಿದ್ದಾರೆ.
ಟೀಮ್ ಇಂಡಿಯಾಗೆ ದಿನೇಶ್ ಕಾರ್ತಿಕ್ ಅವರ ಆಯ್ಕೆ ಬಗ್ಗೆ ಮಾತನಾಡಿದ ಸುನಿಲ್ ಗವಾಸ್ಕರ್, ”ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನಾನು ಮತ್ತು ದಿನೇಶ್ ಕಾರ್ತಿಕ್ ಒಟ್ಟಿಗೆ ಕಾಮೆಂಟ್ರಿ ಮಾಡಿದ್ದೆವು. ಈ ಹಿಂದೆ ನಾವಿಬ್ಬರೂ ಕ್ವಾರಂಟೈನ್‌ನಲ್ಲಿ ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದೆವು. ಅಂದಿನಿಂದ ಅವರು 2021 ಮತ್ತು 2022 ರ ಟಿ20 ವಿಶ್ವಕಪ್‌ನಲ್ಲಿ ಆಡಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದು ನನಗೆ ತಿಳಿದಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆದರೆ ಅವರು ಐಪಿಎಲ್ 2022 ರಲ್ಲಿ ಪ್ರದರ್ಶನ ನೀಡಿದ ರೀತಿಯನ್ನೇ ಒಮ್ಮೆ ಗಮನಿಸಿ. ನಾನು ಆಯ್ಕೆಗಾರನಾಗಿದ್ದರೆ, ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡುತ್ತಿದ್ದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಆಟಗಾರರಿಗೆ ಫಾರ್ಮ್ ಮುಖ್ಯ. ಕ್ಲಾಸಿ ಬ್ಯಾಟ್ಸ್‌ಮನ್ ಫಾರ್ಮ್‌ನಲ್ಲಿದ್ದರೆ ನೀವು ಅವನನ್ನು ಆರಿಸಬೇಕಾಗುತ್ತದೆ. ಸದ್ಯ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನು ಪರಿಗಣಿಸಬೇಕು. ಅವರನ್ನು ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಬೇಕು. ವಿಕೆಟ್ ಕೀಪಿಂಗ್ ಎಂಬುದು 2ನೇ ಆಯ್ಕೆಯಾಗಬೇಕು. ಹೀಗಾಗಿ ಅದ್ಭುತ ಫಾರ್ಮ್‌ನಲ್ಲಿರುವ ದಿನೇಶ್ ಕಾರ್ತಿಕ್ ಬ್ಯಾಟ್ಸ್‌ಮನ್ ಆಗಿ ಕೂಡ ತಂಡಕ್ಕೆ ಆಯ್ಕೆಯಾಗಲು ಅರ್ಹ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮಾತು ಮುಂದುವರೆಸಿದ ಗವಾಸ್ಕರ್, ಯಾರೊಬ್ಬರು ತಮ್ಮ ವಯಸ್ಸಿನ ಬಗ್ಗೆ ಯೋಚಿಸಬಾರದು. 20 ಓವರ್‌ಗಳವರೆಗೆ ವಿಕೆಟ್ ಕೀಪಿಂಗ್ ಮಾಡಿದ ನಂತರ ಅವರು ಬ್ಯಾಟ್ ಮಾಡುತ್ತಾರೆ ಎಂದರೆ ಸಾಮರ್ಥ್ಯದ ಆಧಾರದ ಮೇಲೆ ಅವರಿಗೆ ಸ್ಥಾನ ನೀಡಬೇಕು. ಪ್ರಚಂಡ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಮತ್ತೊಂದು ಆಯ್ಕೆಯಾಗಿದೆ. ರಿಷಬ್ ಪಂತ್ ಅವರ ಫಾರ್ಮ್ನಲ್ಲಿ ಏರಿಳಿತವಿದೆ. ಏಕೆಂದರೆ ಪಂತ್ ಆಯ್ಕೆಯಾಗುವುದು ಖಚಿತವಾಗಿರುವುದರಿಂದ ಅವರ ಆಯ್ಕೆಯ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ. ಆದರೆ ನನ್ನ ಪ್ರಕಾರ ಆಯ್ಕೆಗಾರರು ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡದಿದ್ದರೆ, ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ಅವರಿಗಿಂತ ಮೊದಲು, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ದಿನೇಶ್ ಕಾರ್ತಿಕ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಕಾರ್ತಿಕ್ ಕಿಲ್ಲರ್ ಬ್ಯಾಟ್ಸ್‌ಮನ್ ಎಂದು ಹಾಡಿಹೊಗಳಿದ್ದಾರೆ. ಇದೀಗ ಅಧ್ಭುತ ಫಾರ್ಮ್‌ನಲ್ಲಿರುವ ಕಾರ್ತಿಕ್ 2 ವರ್ಷಗಳ ಬಳಿಕ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.