ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಕಳಪೆ ಆರಂಭ ಪಡೆದಿದೆ. ಮೊದಲ ಮೂರು ಪಂದ್ಯಗಳಲ್ಲಿ ಸೋತಿರುವ ಸಿಎಸ್ಕೆ ತಂಡವು ಇದೀಗ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತರೆ, 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಪರಾಜಯಗೊಂಡಿತು. ಇನ್ನು ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲೂ ಸೋಲನುಭವಿಸಬೇಕಾಯಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಸಿಎಸ್ಕೆ ತಂಡವು ಮೊದಲ ಬಾರಿಗೆ ಮೊದಲ ಪಂದ್ಯಗಳಲ್ಲಿ ಪರಾಜಯಗೊಂಡು ಮುಖಭಂಗ ಅನುಭವಿಸಿದೆ. ಚೆನ್ನೈ ತಂಡದ ಈ ಹೀನಾಯ ಪ್ರದರ್ಶನದ ಬಗ್ಗೆ ಮಾತನಾಡಿರುವ ಮಹೇಂದ್ರ ಸಿಂಗ್ ಧೋನಿ ಅವರ ಆಪ್ತ, ಮಾಜಿ ಕ್ರಿಕೆಟಿಗ ಆರ್.ಪಿ ಸಿಂಗ್ ಸಿಎಸ್ಕೆ ತಂಡದ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಪ್ಲ್ಯಾನ್ ಕಾಣಿಸುತ್ತಿಲ್ಲ. ಅವರ ಬ್ಯಾಟ್ಸ್‌ಮನ್‌ಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೊಂದು ಸೋಲು ಅವರನ್ನು ಪ್ಲೇಆಫ್‌ನ ರೇಸ್‌ನಿಂದ ಹೊರಹಾಕಲಿದೆ ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ. ಅಲ್ಲದೆ ತಂಡದ ಪ್ರದರ್ಶನ ನೋಡಿದರೆ ಈ ಬಾರಿ ಸಿಎಸ್ಕೆ ಪ್ಲೇಆಫ್ ಪ್ರವೇಶಿಸುವುದು ಕೂಡ ಅನುಮಾನ ಎಂದಿದ್ದಾರೆ.
‘ಸತತ ಮೂರು ಪಂದ್ಯಗಳನ್ನು ಸೋತಿರುವುದು ತಂಡದ ಪಾಲಿಗೆ ತುಂಬಾ ಕೆಟ್ಟ ಸಮಯ. ಹೀಗೆ ಪಂದ್ಯ ಸೋತ ನಂತರ ಅಗ್ರ 4ರೊಳಗೆ ಬರುವುದು ಕಷ್ಟ. ಏಕೆಂದರೆ ಇದರ ನಂತರ ನೀವು ತುಂಬಾ ಹಿಂದೆ ಉಳಿಯುತ್ತೀರಿ. ನಿಮ್ಮ ನೆಟ್ ರನ್ ರೇಟ್ ಕೂಡ ಕೆಟ್ಟದಾಗಿರುತ್ತದೆ. ಹಾಗಾಗಿ ಪ್ಲೇ ಆಫ್ನಲ್ಲಿ ಸ್ಥಾನ ಸಿಗುವುದು ಕಷ್ಟ ಎಂದು ಆರ್.ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಸಮಸ್ಯೆ ಏನು? ಪವರ್‌ಪ್ಲೇಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭವನ್ನು ಪಡೆಯುತ್ತಿಲ್ಲ. ರುತುರಾಜ್ ಗಾಯಕ್ವಾಡ್ 4-5 ಎಸೆತಗಳಲ್ಲಿ ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ. ಇದಲ್ಲದೇ ಜಡೇಜಾ, ರಾಯುಡು ಕೂಡ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ. ಬೌಲಿಂಗ್‌ನಲ್ಲಿ ದೀಪಕ್ ಚಹರ್ ಅವರ ಅನುಪಸ್ಥಿತಿ ಕಾಡುತ್ತಿದೆ. ಮುಂಬರುವ ಪಂದ್ಯಗಳಲ್ಲಿ ಚೆನ್ನೈ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಆರ್ ಪಿ ಸಿಂಗ್ ಅವರ ಮಾತು ನಿಜವಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಹೀಗಿದೆ: ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು