IPL 2022: ರಿಷಿ ಧವನ್ ವಿಭಿನ್ನ ರಕ್ಷಾ ಕವಚ ಧರಿಸಲು ಇದುವೇ ಕಾರಣ
Rishi Dhawan: ಈ ಪಂದ್ಯದಲ್ಲಿ ಶಾರುಖ್ ಖಾನ್ ಬದಲಿಗೆ ಆಲ್‌ರೌಂಡರ್ ರಿಷಿ ಧವನ್ ಗೆ ಪಂಜಾಬ್ ಕಿಂಗ್ಸ್ ತಂಡ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ನೀಡಿತ್ತು. ಈ ಪಂದ್ಯಕ್ಕಾಗಿ ಪಂಜಾಬ್ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದು ವಿಶೇಷ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್‌ನ 38ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಆಲ್‌ರೌಂಡರ್ ರಿಷಿ ಧವನ್ ಬೌಲಿಂಗ್ ಮಾಡಲು ಬಂದಾಗ ವಿಶೇಷ ರೀತಿಯ ಫೇಸ್ ಶೀಲ್ಡ್ ಹೆಲ್ಮೆಟ್ ಧರಿಸಿದ್ದರು. ಇದರೊಂದಿಗೆ ಈ ವಿಶೇಷ ರಕ್ಷಾ ಕವಚ ಹೊಸ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ರಿಷಿ ಧವನ್ ಯಾಕಾಗಿ ಇಂತಹದೊಂದು ಫೇಸ್ ಶೀಲ್ಡ್ ಧರಿಸಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಈ ವರ್ಷ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ 32 ವರ್ಷದ ರಿಷಿ ಧವನ್ ಅವರ ಮುಖಕ್ಕೆ ಚೆಂಡು ಬಡಿದ ಕಾರಣ ಅವರ ಮೂಗಿಗೆ ಗಾಯವಾಗಿತ್ತು. ಇದಾದ ನಂತರ ಧವನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಇದೀಗ ಐಪಿಎಲ್ನಲ್ಲೂ ಅಂತಹ ಅವಘಡ ಸಂಭವಿಸದಂತೆ ತಡೆಯಲು ವಿಶೇಷ ರಕ್ಷಾ ಕವಚ ಧರಿಸಿ ಧವನ್ ಕಣಕ್ಕಿಳಿದಿದ್ದರು.
ರಣಜಿ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶ ತಂಡದ ನಾಯಕರಾಗಿದ್ದ ರಿಷಿ ಧವನ್ 6 ವರ್ಷಗಳ ನಂತರ ಐಪಿಎಲ್ನಲ್ಲಿ ಕಣಕ್ಕಿಳಿದಿದ್ದಾರೆ. ಅವರು ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು 2016 ರಲ್ಲಿ ಆಡಿದ್ದರು. ಇದೀಗ 6 ವರ್ಷಗಳ ಬಳಿಕ ಸಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳದಿರಲು ಮುಖಕ್ಕೆ ಫೇಸ್ ಶೀಲ್ಡ್ ಧರಿಸಿ ಬೌಲಿಂಗ್ ಮಾಡಿದ್ದರು.
4 ಓವರ್‌ಗಳಲ್ಲಿ 2 ವಿಕೆಟ್: ರಿಷಿ ಧವನ್ ಸಿಎಸ್ಕೆ ವಿರುದ್ದದ ಈ ಪಂದ್ಯದಲ್ಲಿ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು. ಅದರಲ್ಲೂ ಕೊನೆಯ ಓವರ್ನಲ್ಲಿ ಧೋನಿಯ ವಿಕೆಟ್ ಪಡೆಯುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಐಪಿಎಲ್‌ನ ಕಂಬ್ಯಾಕ್ ಪಂದ್ಯದಲ್ಲೇ ರಿಷಿ ಧವನ್ ಗಮನ ಸೆಳೆದಿದ್ದಾರೆ.
ಶಾರೂಖ್ ಖಾನ್ ಬದಲಿ ಆಟಗಾರ: ಈ ಪಂದ್ಯದಲ್ಲಿ ಶಾರುಖ್ ಖಾನ್ ಬದಲಿಗೆ ಆಲ್‌ರೌಂಡರ್ ರಿಷಿ ಧವನ್ ಗೆ ಪಂಜಾಬ್ ಕಿಂಗ್ಸ್ ತಂಡ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ನೀಡಿತ್ತು. ಈ ಪಂದ್ಯಕ್ಕಾಗಿ ಪಂಜಾಬ್ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದ್ದು ವಿಶೇಷ. ಈ ಬದಲಾವಣೆ ಫಲ ನೀಡಿದ್ದು, ಅದರಂತೆ ಸಿಎಸ್ಕೆ ವಿರುದ್ದ ಗೆದ್ದು ಗೆಲುವಿನ ಲಯಕ್ಕೆ ಮರಳಿದೆ. ಸದ್ಯ ಪಂಜಾಬ್ ತಂಡ 8 ಪಂದ್ಯಗಳಿಂದ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತಲುಪಿದೆ.
ಬೌಲರ್ ಹೆಲ್ಮೆಟ್: ಕ್ರಿಕೆಟ್‌ನಲ್ಲಿ ಬೌಲರ್ ಫೇಸ್ ಶೀಲ್ಡ್ ಹೆಲ್ಮೆಟ್ ಧರಿಸುತ್ತಿರುವುದು ಹೊಸದೇನಲ್ಲ. ಏಕೆಂದರೆ 2019 ರಲ್ಲಿ, ನ್ಯೂಜಿಲೆಂಡ್ ಆಟಗಾರ ಆಂಡ್ರ್ಯೂ ಎಲ್ಲಿಸ್ ಕೂಡ ವಿಭಿನ್ನ ರೀತಿಯ ಹೆಲ್ಮೆಟ್ ಧರಿಸಿ ಬೌಲಿಂಗ್ ಮಾಡುತ್ತಿದ್ದರು. ಎಲ್ಲಿಸ್ ನಂತರ ಅದೇ ವರ್ಷ ಕ್ಯಾಂಟರ್ಬರಿ ಮತ್ತು ನಾರ್ದರ್ನ್ ಡಿಸ್ಟ್ರಿಕ್ಟ್ಸ್ ನಡುವಿನ ಫೋರ್ಡ್ ಟ್ರೋಫಿ ಪಂದ್ಯದ ಸಂದರ್ಭದಲ್ಲಿ ಸಾಮಾನ್ಯವಾಗಿ ಬೇಸ್‌ಬಾಲ್‌ನಲ್ಲಿ ಕಂಡುಬರುವ ಹೆಲ್ಮೆಟ್‌ಗಳನ್ನು ಧರಿಸಿ ದೇಶೀಯ ಕ್ರಿಕೆಟ್‌ನಲ್ಲಿ ಬೌಲ್ ಮಾಡಿದ್ದರು. ಇದೀಗ ಅಂತಹದ್ದೇ ಮಾದರಿಯ ಫೇಸ್ ಶೀಲ್ಡ್ ಧರಿಸಿ ರಿಷಿ ಧವನ್ ಕೂಡ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
Published On - 2:40 pm, Tue, 26 April 22