AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Auction: ‘ಮಯಾಂಕ್​ಗೆ ಅನ್ಯಾಯವಾಗಿದೆ’; ಪಂಜಾಬ್ ಕಿಂಗ್ಸ್ ವಿರುದ್ಧ ಕ್ರಿಸ್ ಗೇಲ್ ಕೆಂಡ!

IPL 2023 Auction: ಮಯಾಂಕ್ ಮೇಲೆ ಇತರ ತಂಡಗಳಿಗೆ ಇನ್ನೂ ನಂಬಿಕೆ ಇದ್ದು, ಹರಾಜಿನಲ್ಲಿ ಅವರನ್ನು ಖರೀದಿಸುವ ಫ್ರಾಂಚೈಸಿ ಅವರನ್ನು ಚೆನ್ನಾಗಿ ನಡೆಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಗೇಲ್ ಹೇಳಿಕೊಂಡಿದ್ದಾರೆ.

IPL 2023 Auction: ‘ಮಯಾಂಕ್​ಗೆ ಅನ್ಯಾಯವಾಗಿದೆ’; ಪಂಜಾಬ್ ಕಿಂಗ್ಸ್ ವಿರುದ್ಧ ಕ್ರಿಸ್ ಗೇಲ್ ಕೆಂಡ!
ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್
TV9 Web
| Edited By: |

Updated on:Dec 23, 2022 | 1:21 PM

Share

16ನೇ ಆವೃತ್ತಿಯ ಐಪಿಎಲ್​ಗಾಗಿ (IPL 2023 Auction) ಇಂದು ಮಿನಿ ಹರಾಜು ನಡೆಯುತ್ತಿದೆ. ಕೊಚ್ಚಿಯಲ್ಲಿ ಈ ಹರಾಜು ನಡೆಯಲಿದ್ದು, ಇದರಲ್ಲಿ ಅನೇಕ ದೊಡ್ಡ ಮತ್ತು ದಿಗ್ಗಜ ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಹರಾಜಿನಲ್ಲಿ, ಮುಖ್ಯವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಆಟಗಾರರ ಮೇಲೆ ಕಣ್ಣು ಬಿದ್ದಿದೆ. ಆದರೆ ಈ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಹೆಚ್ಚು ಪೈಪೋಟಿ ನೀಡಬಲ್ಲ ಭಾರತೀಯ ಆಟಗಾರರೂ ಇದ್ದು, ಅವರಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಕೂಡ ಸೇರಿದ್ದಾರೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಮಯಾಂಕ್ ಇಡೀ ಸೀಸನ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಅಲ್ಲದೆ ತಂಡವೂ ಅವರ ನಾಯಕತ್ವದಲ್ಲಿ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಡಲಿಲ್ಲ. ಹೀಗಾಗಿ ಪಂಜಾಬ್ ಆಡಳಿತ ಮಂಡಳಿ ಮಿನಿ ಹರಾಜಿಗೂ ಮುನ್ನ ಮಯಾಂಕ್ ಅವರನ್ನು ಕೆಳಗಿಳಿಸಿದಲ್ಲದೆ, ತಂಡದಿಂದಲೂ ಹೊರಹಾಕಿತ್ತು. ಇದೀಗ ಪಂಜಾಬ್ ನಡೆಗೆ ಕೋಪಗೊಂಡಿರುವ ಐಪಿಎಲ್ ಕಿಂಗ್ ಹಾಗೂ ವೆಸ್ಟ್ ಇಂಡೀಸ್ ಅನುಭವಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ (Chris Gayle), ಮಯಾಂಕ್ ಪರ ಬ್ಯಾಟ್ ಬೀಸಿದ್ದಾರೆ.

ಐಪಿಎಲ್​ನ 15 ಸೀಸನ್​ಗಳ ಇತಿಹಾಸದಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಿಸಿದ ತಂಡ ಎಂಬ ಬೇಡದ ದಾಖಲೆ ಮಾಡಿರುವ ಪಂಜಾಬ್ ಕಿಂಗ್ಸ್ ಈ ಹೊಸ ಸೀಸನ್​ನಲ್ಲೂ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ. ಕಳೆದ ಸೀಸನ್​ನಲ್ಲಿ ಮಯಾಂಕ್ ಅಗರ್ವಾಲ್ ಅವರಿಗೆ 14 ಕೋಟಿ ಕೊಟ್ಟು ತಂಡದಲ್ಲಿ ಉಳಿಸಿಕೊಂಡಿದ್ದ ಫ್ರಾಂಚೈಸಿ, ಅವರಿಗೆ ನಾಯಕತ್ವ ಪಟ್ಟಕಟ್ಟಿತ್ತು. ಆದರೆ ಇದೀಗ ಹೊಸ ಸೀಸನ್​ ಹರಾಜಿಗೂ ಮುನ್ನ ಫ್ರಾಂಚೈಸಿ ಈ ಸ್ಟಾರ್ ಭಾರತೀಯ ಬ್ಯಾಟ್ಸ್‌ಮನ್‌ನನ್ನು ತಂಡದಿಂದ ಬಿಡುಗಡೆ ಮಾಡಿದಲ್ಲದೆ, ಧವನ್​ಗೆ ನಾಯಕತ್ವ ಪಟ್ಟಕಟ್ಟಿದೆ.

IPL 2023 Mini Auction Live: ಇಂದು ಐಪಿಎಲ್ ಮಿನಿ ಹರಾಜು: ಎಷ್ಟು ಗಂಟೆಗೆ?, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

‘ಮಯಾಂಕ್ ಉತ್ತಮ ಬಿಡ್ ಪಡೆಯಲಿದ್ದಾರೆ’

ಇದೀಗ ಪಂಜಾಬ್ ಕಿಂಗ್ಸ್ ನಡೆಯನ್ನು ಟೀಕಿಸಿರುವ ಗೇಲ್, ಪಂಜಾಬ್ ಫ್ರಾಂಚೈಸಿ ಮಯಾಂಕ್ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಆದರೆ ತಂಡದಿಂದ ಬಿಡುಗಡೆಯಾಗಿರುವ ಮಯಾಂಕ್ ಈ ಹರಾಜಿನಲ್ಲಿ ಉತ್ತಮ ಬಿಡ್ ಪಡೆಯುತ್ತಾರೆ ಎಂಬುದು ನನ್ನ ನಂಬಿಕೆ. ಅಲ್ಲದೆ ಮಯಾಂಕ್ ಈ ಹರಾಜಿನಲ್ಲಿ ಖಂಡಿತ ಖರೀದಿಯಾಗಲಿದ್ದಾರೆ. ಒಂದು ವೇಳೆ ಮಯಾಂಕ್ ಖರೀದಿಯಾಗದಿದ್ದರೆ ನಾನು ತುಂಬಾ ನಿರಾಶೆಗೊಳ್ಳುತ್ತೇನೆ. ಏಕೆಂದರೆ ಅವನು ಅಂತಹ ಆಕ್ರಮಣಕಾರಿ ಆಟಗಾರ ಎಂದು ಗೇಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ವಾಸ್ತವವಾಗಿ ಗೇಲ್ 2021 ರ ಸೀಸನ್​ವರೆಗೂ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದರು. ಹೀಗಾಗಿ ಗೇಲ್, ಮಯಾಂಕ್ ಅವರೊಂದಿಗೆ ಅನೇಕ ಪಂದ್ಯಗಳನ್ನು ಆಡಿದ್ದರು. ಹೀಗಾಗಿ ಮಯಾಂಕ್ ಬಗ್ಗೆ ಸಾಕಷ್ಟು ಅರಿತಿದ್ದ ಗೇಲ್ ಮಿನಿ ಹರಾಜಿಗೂ ಮುನ್ನ ಮಯಾಂಕ್ ಬಗ್ಗೆ ನೀಡಿರುವ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅಲ್ಲದೆ ಹರಾಜಿನಲ್ಲಿರುವ ಮಯಾಂಕ್​ಗೆ ಉತ್ತಮ ಬಿಡ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಮಯಾಂಕ್​ರನ್ನು ಪಂಜಾಬ್ ಸರಿಯಾಗಿ ನಡೆಸಿಕೊಳ್ಳಲಿಲ್ಲ

ಮುಂದುವರೆದು ಮಾತನಾಡಿದ ಗೇಲ್, ಮಯಾಂಕ್ ಫ್ರಾಂಚೈಸಿಯ ಸುಧಾರಣೆಗಾಗಿ ಸಾಕಷ್ಟು ತ್ಯಾಗ ಮಾಡಿದ್ದರು. ಆದರೆ ಫ್ರಾಂಚೈಸಿ ಅವರನ್ನು ತಂಡದಿಂದ ಹೊರಹಾಕಿದ್ದು, ಮಯಾಂಕ್​ಗೆ ತುಂಬಾ ನಿರಾಶೆ ತಂದಿರುತ್ತದೆ. ಹೀಗಾಗಿ ಪಂಜಾಬ್ ಫ್ರಾಂಚೈಸಿ ಮಯಾಂಕ್ ವಿಚಾರದಲ್ಲಿ ಹೀಗೆ ನಡೆದುಕೊಳ್ಳಬಾರದಿತ್ತು ಎಂದಿದ್ದಾರೆ. ಅಲ್ಲದೆ ಮಯಾಂಕ್ ಮೇಲೆ ಇತರ ತಂಡಗಳಿಗೆ ಇನ್ನೂ ನಂಬಿಕೆ ಇದ್ದು, ಹರಾಜಿನಲ್ಲಿ ಅವರನ್ನು ಖರೀದಿಸುವ ಫ್ರಾಂಚೈಸಿ ಅವರನ್ನು ಚೆನ್ನಾಗಿ ನಡೆಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಗೇಲ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Fri, 23 December 22