IPL 2023 Auction: ಐಪಿಎಲ್ ಮಿನಿ ಹರಾಜಿಗೆ ಡೇಟ್ ಫಿಕ್ಸ್
IPL 2023 Auction: ಆಯಾ ಫ್ರಾಂಚೈಸಿಗಳ ತವರು ಮೈದಾನದಲ್ಲೇ 2 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯ ನಡೆಯಲಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು.
IPL 2023 Auction: ಟಿ20 ವಿಶ್ವಕಪ್ ಶುರುವಾದ ಬೆನ್ನಲ್ಲೇ ಇತ್ತ ಬಿಸಿಸಿಐ ಐಪಿಎಲ್ (IPL 2023) ಸೀಸನ್ 16 ಗೆ ತಯಾರಿಗಳನ್ನು ಆರಂಭಿಸಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಇದೀಗ ಐಪಿಎಲ್ 2023 ರ ಹರಾಜಿಗಾಗಿ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಈ ವರ್ಷ ಡಿಸೆಂಬರ್ 16 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ. ನವೆಂಬರ್ 13 ರಂದು ಟಿ20 ವಿಶ್ವಕಪ್ ಮುಕ್ತಾಯವಾಗಲಿದ್ದು, ಇದಾಗಿ ಒಂದು ತಿಂಗಳಲ್ಲೇ ಆಟಗಾರರ ಹರಾಜು ನಡೆಯಲಿರುವುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಟಿ20 ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಈ ಬಾರಿ ಐಪಿಎಲ್ನಲ್ಲಿ ಡೀಲ್ ಕುದುರಿಸಿಕೊಳ್ಳುವ ಅವಕಾಶ ಆಟಗಾರರಿಗೆ ಇರಲಿದೆ.
ಮಿನಿ ಹರಾಜು:
ಈ ಬಾರಿ ಐಪಿಎಲ್ನಲ್ಲಿ ಮಿನಿ ಹರಾಜು ನಡೆಯಲಿದೆ. ಕಳೆದ ಬಾರಿ ಮೆಗಾ ಹರಾಜು ನಡೆದಿರುವ ಹಿನ್ನಲೆಯಲ್ಲಿ ಈ ಸಲ ಆಯಾ ತಂಡವು ಬಿಡುಗಡೆ ಮಾಡುವ ಆಟಗಾರರ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕಾಗುತ್ತದೆ.
ಇತ್ತ ಟಿ20 ವಿಶ್ವಕಪ್ ಜರುಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳಿಗೆ ಆಟಗಾರರ ಫಾರ್ಮ್ ಅನ್ನು ಕೂಡ ಗಣನೆಗೆ ತೆಗೆದುಕೊಳ್ಳಬಹುದು. ಈ ಮೂಲಕ ಯಾರನ್ನು ತಂಡದಲ್ಲೇ ಉಳಿಸಿಕೊಳ್ಳಬೇಕು ಮತ್ತು ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು.
ಹರಾಜು ಮೊತ್ತ ಹೆಚ್ಚಳ:
ಕಳೆದ ಬಾರಿ ಮೆಗಾ ಹರಾಜಿನಲ್ಲಿ ಪ್ರತಿ ತಂಡಗಳಿಗೆ 90 ಕೋಟಿ ರೂ. ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ಈ ಮೊತ್ತವನ್ನು 95 ಕೋಟಿಗೆ ಏರಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಮೂಲಕ ಆಟಗಾರರ ಖರೀದಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಐಪಿಎಲ್ ಆಡಳಿತ ಮಂಡಳಿ ಚಿಂತಿಸಿದೆ.
ಹೋಮ್ & ಅವೇ ಮ್ಯಾಚ್:
ಐಪಿಎಲ್ 2023 ಅನ್ನು ಭಾರತದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ ಪ್ರೇಕ್ಷಕರಿಗೆ ಸ್ಟೇಡಿಯಂನಲ್ಲೇ ಪಂದ್ಯ ವೀಕ್ಷಿಸಲು ಅವಕಾಶ ನೀಡಲಿದೆ. ವಿಶೇಷ ಎಂದರೆ ಈ ಹಿಂದಿನಂತೆ ಮುಂದಿನ ಸೀಸನ್ನಲ್ಲಿ ಹೋಮ್ ಗ್ರೌಂಡ್ ಹಾಗೂ ಅವೇ ಗ್ರೌಂಡ್ಗಳಲ್ಲಿ ಪಂದ್ಯ ನಡೆಯಲಿದೆ.
ಅಂದರೆ ಆಯಾ ಫ್ರಾಂಚೈಸಿಗಳ ತವರು ಮೈದಾನದಲ್ಲೇ 2 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯ ನಡೆಯಲಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಕಳೆದ ಎರಡು ಸೀಸನ್ಗಳಿಂದ ಕೊರೋನಾ ಕಾರಣದಿಂದಾಗಿ ನಿಗದಿತ ಮೈದಾನದಲ್ಲೇ ಮಾತ್ರ ಪಂದ್ಯ ಆಯೋಜಿಸಲಾಗುತ್ತಿದೆ. ಈ ಬಾರಿ ಮತ್ತೆ ಆಯಾ ತಂಡಗಳ ತವರಿನಲ್ಲೇ ಮೈದಾನದಲ್ಲೇ ಪಂದ್ಯಗಳು ನಡೆಯಲಿದೆ.