IPL 2024: ಈ ಬಾರಿಯಾದರೂ RCB ಕಪ್ ಗೆಲ್ಲಲಿ: ಸುರೇಶ್ ರೈನಾ
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿ ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಸದ್ಯ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದ್ದು, ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸಲಾಗುತ್ತದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 22 ರಂದು ಶುರುವಾಗಲಿರುವ ಐಪಿಎಲ್ ಸೀಸನ್-17 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಇತ್ತ ಐಪಿಎಲ್ ವೇಳಾಫಟ್ಟಿ ಪ್ರಕಟವಾದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಸಲ ಕಪ್ ಗೆಲ್ಲುವುದನ್ನು ಎದುರು ನೋಡುತ್ತಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಟ್ರೋಫಿಯನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಈ ಕಾಯುವಿಕೆಯ ಸಮಯ ಮೀರಿದೆ ಎಂದೇ ಹೇಳಬಹುದು. ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಗೆದ್ದಿದೆ. ಆದರೆ ಈ ವರ್ಷ ಇದುವರೆಗೆ ಕಪ್ ಗೆಲ್ಲದ ತಂಡ ಚಾಂಪಿಯನ್ ಪಟ್ಟಕ್ಕೇರಬೇಕು ಎಂದು ನಾನು ಬಯಸುತ್ತೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕಳೆದ 16 ಸೀಸನ್ಗಳಿಂದಲೂ ಕಠಿಣ ಪರಿಶ್ರಮಪಟ್ಟಿದ್ದಾರೆ. ಹೀಗಾಗಿ ಈ ಬಾರಿ ಕೊಹ್ಲಿ ಮತ್ತು ಆರ್‌ಸಿಬಿ ತಂಡ ಕಪ್ ಗೆಲ್ಲಲು ಅರ್ಹರು ಎಂದು ನಾನು ಭಾವಿಸುತ್ತೇನೆ. ಅದರಂತೆ ಈ ಸಲವಾದರೂ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಲಿ ಎಂದು ಸುರೇಶ್ ರೈನಾ ಹೇಳಿದರು.
ಮೂರು ಬಾರಿ ಎಡವಿದ ಆರ್‌ಸಿಬಿ:
- ಐಪಿಎಲ್ನಲ್ಲಿ ಟ್ರೋಫಿ ಗೆಲ್ಲುವ ಆರ್‌ಸಿಬಿ ತಂಡದ ಕನಸು ಮುಂದುವರೆದಿದೆ. ಕಳೆದ 16 ವರ್ಷಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಅಂತಿಮ ಹಂತದಲ್ಲಿ ಎಡವಿತ್ತು.
- 2009 ರಲ್ಲಿ ಆರ್‌ಸಿಬಿ ತಂಡವು ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್ಗಳಿಂದ ಸೋತು ಟ್ರೋಫಿಗೆ ಮುತ್ತಿಕ್ಕುವ ಅವಕಾಶ ಕಳೆದುಕೊಂಡಿತು.
- ಇದಾದ ಬಳಿಕ ಆರ್‌ಸಿಬಿ ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ 2011ರಲ್ಲಿ ಫೈನಲ್ ಆಡಿತ್ತು. ಅಂದು ಸಿಎಸ್‌ಕೆ ವಿರುದ್ಧ 58 ರನ್ಗಳಿಂದ ಸೋತು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ಆರ್‌ಸಿಬಿ ಕೈಚೆಲ್ಲಿಕೊಂಡಿತು.
- ಇನ್ನು 2016 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿತು. ಎಸ್ಆರ್ಹೆಚ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 8 ರನ್ಗಳಿಂದ ಪರಾಜಯಗೊಳ್ಳುವ ಮೂಲಕ ಆರ್‌ಸಿಬಿ ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡಿತು.
ಇದೀಗ ಆರ್‌ಸಿಬಿ 17ನೇ ಸೀಸನ್ ಆರಂಭಕ್ಕೆ ಸಜ್ಜಾಗಿ ನಿಂತಿದೆ. ಈ ಬಾರಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವ ಮೂಲಕ 16 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸುವ ವಿಶ್ವಾಸದಲ್ಲಿದ್ದಾರೆ ಆರ್‌ಸಿಬಿ ಅಭಿಮಾನಿಗಳು.
ಇದನ್ನೂ ಓದಿ: IPL 2024: RCB ಗೆದ್ದರೆ ಹೊಸ ಇತಿಹಾಸ