AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಔಟ್ OR ನಾಟೌಟ್? ವಿವಾದದ ಕಿಡಿ ಹೊತ್ತಿಸಿದ ಕೊಹ್ಲಿ ವಿಕೆಟ್..!

IPL 2024 Virat Kohli: ವಿರಾಟ್ ಕೊಹ್ಲಿ ವಿಕೆಟ್ ಪತನದ ಬಗ್ಗೆ ಹೊಸ ವಿವಾದವೊಂದು ಐಪಿಎಲ್ ಲೋಕದಲ್ಲಿ ಹುಟ್ಟಿಕೊಂಡಿದೆ. ಕೆಲವರು ಇದು ಕೊಹ್ಲಿಗಾದ ಮೋಸ ಎನ್ನುತ್ತಿದ್ದರೆ, ಇನ್ನು ಕೆಲವರು ಮೂರನೇ ಅಂಪೈರ್ ನೀಡಿದ ತೀರ್ಪು ಕ್ರಿಕೆಟ್ ನಿಯಮಗಳ ಪ್ರಕಾರ ಸರಿಯಾಗಿತ್ತು ಎನ್ನುತ್ತಿದ್ದಾರೆ. ಅಷ್ಟಕ್ಕೂ ನಡೆದಿದ್ದಾರೂ ಏನು?

IPL 2024: ಔಟ್ OR ನಾಟೌಟ್? ವಿವಾದದ ಕಿಡಿ ಹೊತ್ತಿಸಿದ ಕೊಹ್ಲಿ ವಿಕೆಟ್..!
ಅಂಪೈರ್ ಜೊತೆ ಕೊಹ್ಲಿ ವಾಗ್ವಾದ
ಪೃಥ್ವಿಶಂಕರ
|

Updated on:Apr 21, 2024 | 9:40 PM

Share

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Kolkata Knight Riders Vs Royal Challengers Bangalore) ನಡುವಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತು. ಅಂತಿಮವಾಗಿ ಈ ಪಂದ್ಯವನ್ನು 1 ರನ್​ಗಳಿಂದ ಗೆದ್ದುಕೊಳ್ಳುವಲ್ಲಿ ಕೆಕೆಆರ್ ಯಶಸ್ವಿಯಾಯಿತು. ಇತ್ತ ಈ ಸೋಲಿನೊಂದಿಗೆ ಆರ್​ಸಿಬಿಯ ಪ್ಲೇಆಫ್‌ ಕನಸು ಭಗ್ನಗೊಂಡಿತು. ಆದರೆ ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ (Virat Kohli) ವಿಕೆಟ್ ಪತನದ ಬಗ್ಗೆ ಹೊಸ ವಿವಾದವೊಂದು ಐಪಿಎಲ್ ಲೋಕದಲ್ಲಿ ಹುಟ್ಟಿಕೊಂಡಿದೆ. ಕೆಲವರು ಇದು ಕೊಹ್ಲಿಗಾದ ಮೋಸ ಎನ್ನುತ್ತಿದ್ದರೆ, ಇನ್ನು ಕೆಲವರು ಮೂರನೇ ಅಂಪೈರ್ ನೀಡಿದ ತೀರ್ಪು ಕ್ರಿಕೆಟ್ ನಿಯಮಗಳ ಪ್ರಕಾರ ಸರಿಯಾಗಿತ್ತು ಎನ್ನುತ್ತಿದ್ದಾರೆ. ಅಷ್ಟಕ್ಕೂ ನಡೆದಿದ್ದಾರೂ ಏನು? ಕೊಹ್ಲಿಗೆ ನಿಜಕ್ಕೂ ಅನ್ಯಾಯವಾಯಿತಾ? ಘಟನೆಯ ಪೂರ್ಣ ಚಿತ್ರಣ ಇಲ್ಲಿದೆ.

ಚರ್ಚೆಗೆ ಕಾರಣವಾದ ತೀರ್ಪು

ವಾಸ್ತವವಾಗಿ ಕೆಕೆಆರ್ ನೀಡಿದ 223 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಉತ್ತಮ ಆರಂಭವೇ ಸಿಕ್ಕಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್, ಮೊದಲ ಎರಡು ಓವರ್​ಗಳಲ್ಲಿ 27 ರನ್ ಕಲೆಹಾಕಿದ್ದರು. ಆದರೆ ಮೂರನೇ ಓವರ್​ನ ಮೊದಲ ಎಸೆತದಲ್ಲಿ ಕೊಹ್ಲಿ ವಿಕೆಟ್ ಪತನವಾಯಿತು. ಕೊಹ್ಲಿ ವಿರುದ್ಧ ಮೂರನೇ ಅಂಪೈರ್ ನೀಡಿದ ತೀರ್ಪು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಷ್ಟಕ್ಕೂ ನಡೆದಿದ್ದೇನು?

ಹರ್ಷಿತ್ ರಾಣಾ ಬೌಲ್ ಮಾಡಿದ ಇನ್ನಿಂಗ್ಸ್​ನ ಮೂರನೇ ಓವರ್​ನ ಮೊದಲ ಎಸೆತ ಸ್ಲೋ ಫುಲ್ ಟಾಸ್ ಆಗಿತ್ತು. ಈ ಎಸೆತವನ್ನು ಎದುರಿಸಿದ ಕೊಹ್ಲಿ ಕೊಂಚ ಗೊಂದಲಕ್ಕೊಳಗಾದರು. ಅಲ್ಲದೆ ಆ ಎಸೆತವನ್ನು ನೋ ಬಾಲ್ ಎಂದು ಭಾವಿಸಿ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಆದರೆ ಚೆಂಡು ಕೊಹ್ಲಿ ಬ್ಯಾಟ್‌ನ ಅಂಚಿಗೆ ಬಡಿದು ಮೇಲಕ್ಕೆ ಹೋಯಿತು. ಬೌಲರ್ ಹರ್ಷಿತ್ ರಾಣಾ ಸುಲಭ ಕ್ಯಾಚ್ ಪಡೆದರು. ಅಂಪೈರ್ ಕೂಡ ಔಟೆಂದು ತೀರ್ಪು ನೀಡಿದರು. ಅಂಪೈರ್ ತೀರ್ಮಾನ ನೋಡಿದ ಕೊಹ್ಲಿ ಕೊಂಚ ಸಮಯ ಆಘಾತಕ್ಕೊಳಗಾದರು. ಕೂಡಲೇ ರಿವ್ಯೂವ್ ತೆಗೆದುಕೊಂಡರು. ಫೀಲ್ಡ್ ಅಂಪೈರ್ ನಿರ್ಧಾರವನ್ನು ಮರು ಪರಿಶೀಲಿಸಿದ ಮೂರನೇ ಅಂಪೈರ್ ಕೂಡ ಕೊಹ್ಲಿ ಔಟೆಂದು ತೀರ್ಪು ನೀಡಿದರು.

ಕೋಪಗೊಂಡ ಕೊಹ್ಲಿ

ಮೂರನೇ ಅಂಪೈರ್ ತೀರ್ಪು ಪ್ರಕಟವಾದ ಬಳಿಕವೂ ಕೊಹ್ಲಿ ಅಸಮಾಧಾನ ಹೊರಹಾಕಿದರು. ಬಳಿಕ ಪೆವಿಲಿಯನ್​ಗೆ ಮರಳುವಾಗ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಸ್ವಲ್ಪ ಹೊತ್ತು ಅಂಪೈರ್ ಜೊತೆ ಕೋಪದಿಂದ ಮಾತನಾಡಿದ ಕೊಹ್ಲಿ ಬೇಸರದೊಂದಿಗೆ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು. ಇಲ್ಲಿಗೆ ಕೋಪವನ್ನು ಕಡಿಮೆ ಮಾಡಿಕೊಳ್ಳದ ಕೊಹ್ಲಿ, ಡಗೌಟ್​ಗೆ ತೆರಳುವಾಗ ಅಡ್ಡಲಾಗಿ ಸಿಕ್ಕ ಡಸ್ಟ್ ಬಿನ್ ಅನ್ನು ಕೈಯಿಂದ ಕೆಡವಿದರು. ನಂತರ ಕೆಳಗೆ ಬಿದ್ದ ಕೈಯ ಗ್ಲೌಸ್ ಅನ್ನು ಎತ್ತಿಕೊಂಡು ಒಳಗೆ ಹೋದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 pm, Sun, 21 April 24