IPL 2024: ಐಪಿಎಲ್ಗಾಗಿ ಪಾಕ್ ಪ್ರವಾಸದಿಂದ ಹಿಂದೆ ಸರಿಯುತ್ತಾರಾ ನ್ಯೂಜಿಲೆಂಡ್ ಕ್ರಿಕೆಟಿಗರು?
IPL 2024: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ ಗುರುವಾರವಷ್ಟೇ ಬಿಡುಗಡೆಯಾಗಿದೆ. ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

2024 ರ ಐಪಿಎಲ್ (IPL 2024) ಇದೇ ಮಾರ್ಚ್ 22 ರಿಂದ ಪ್ರಾರಂಭವಾಗುತ್ತಿದೆ. ಇದರೊಂದಿಗೆ ಇಡೀ ವಿಶ್ವದ ಕಣ್ಣು ಈ ಲೀಗ್ ಮೇಲೆ ನೆಟ್ಟಿದೆ. ಈ ಲೀಗ್‌ನಲ್ಲಿ ವಿಶ್ವದಾದ್ಯಂತದ ಕ್ರಿಕೆಟಿಗರು ಆಡಲಿದ್ದಾರೆ. ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್‌ನ ಹಲವು ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುವುದನ್ನು ಕಾಣಬಹುದು. ಆದರೆ ನ್ಯೂಜಿಲೆಂಡ್ ಕ್ರಿಕೆಟಿಗರಿಗೆ (New Zealand Cricket) ಸಮಸ್ಯೆಯೊಂದು ಉದ್ಭವಿಸಿದೆ. ಈ ಲೀಗ್‌ನ ಮಧ್ಯದಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ (New Zealand vs Pakistan) ಪ್ರವಾಸ ಮಾಡಬೇಕಿದೆ. ಹೀಗಾಗಿ ಕಿವೀಸ್ ಕ್ರಿಕೆಟಿಗರು ತಮ್ಮ ದೇಶಕ್ಕಾಗಿ ಆಡುತ್ತಾರೆಯೇ?, ರಾಷ್ಟ್ರೀಯ ಕರ್ತವ್ಯ ನಿರ್ವಹಿಸಲು ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳುತ್ತಾರೆಯೇ? ಅಥವಾ ಪಾಕ್ ಪ್ರವಾಸವನ್ನು ನಿರ್ಲಕ್ಷಿಸಿ ಐಪಿಎಲ್‌ಗೆ ಆದ್ಯತೆ ನೀಡುತ್ತಾರೆಯೇ ಎಂಬುದು ಈಗ ಪ್ರಶ್ನೆಯಾಗಿದೆ.
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ವೇಳಾಪಟ್ಟಿ ಗುರುವಾರವಷ್ಟೇ ಬಿಡುಗಡೆಯಾಗಿದೆ. ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಏಪ್ರಿಲ್ 18 ರಂದು ನಡೆಯಲಿದೆ. ಎರಡನೆಯ ಪಂದ್ಯ ಏಪ್ರಿಲ್ 20 ರಂದು, ಮೂರನೆಯ ಪಂದ್ಯ ಏಪ್ರಿಲ್ 21 ರಂದು, ನಾಲ್ಕನೆಯ ಪಂದ್ಯ ಏಪ್ರಿಲ್ 25 ರಂದು, ಐದನೇ ಪಂದ್ಯ ಏಪ್ರಿಲ್ 27 ರಂದು ನಡೆಯಲಿದೆ. ಈ ಸರಣಿಗಾಗಿ ನ್ಯೂಜಿಲೆಂಡ್ ತಂಡವು ಏಪ್ರಿಲ್ 14 ರಂದು ಪಾಕಿಸ್ತಾನಕ್ಕೆ ಹಾರಲಿದೆ. ಬಳಿಕ ಏಪ್ರಿಲ್ 28ರಂದು ಕಿವೀಸ್ ತಂಡ ಅಲ್ಲಿಂದ ಹೊರಡುವ ಸಾಧ್ಯತೆ ಇದೆ. ಅಂದರೆ ಸುಮಾರು 14 ದಿನಗಳ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ಇರಲಿದೆ.
IPL 2024: ಡೆಲ್ಲಿ ತಂಡದ ಸ್ಟಾರ್ ಬೌಲರ್ ಐಪಿಎಲ್‌ನಿಂದ ಔಟ್! ಬದಲಿಯಾಗಿ ಬಂದ ಸ್ಟಾರ್ ಬ್ಯಾಟರ್
ಆಟಗಾರರು ಏನು ಮಾಡುತ್ತಾರೆ?
ವಾಸ್ತವವಾಗಿ ಈ ಉಭಯ ತಂಡಗಳ ಟಿ20 ಸರಣಿ ಐಪಿಎಲ್‌ಗೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ನ್ಯೂಜಿಲೆಂಡ್ ತಂಡದ ಅನೇಕ ಸ್ಟಾರ್ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ನ್ಯೂಜಿಲೆಂಡ್ ಪರ ವಿಶ್ವಕಪ್‌ನಲ್ಲಿ ಮಿಂಚಿದ್ದ ರಚಿನ್ ರವೀಂದ್ರ, ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಡ್ಯಾರಿಲ್ ಮಿಚೆಲ್, ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಗ್ಲೆನ್ ಫಿಲಿಪ್ಸ್ ಮತ್ತು ಲಾಕಿ ಫರ್ಗುಸನ್ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಈ ಆಟಗಾರರು ನ್ಯೂಜಿಲೆಂಡ್‌ನ ಟಿ20 ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಹೀಗಾಗಿ ಈ ಆಟಗಾರರು ಐಪಿಎಲ್ ಅಥವಾ ರಾಷ್ಟ್ರೀಯ ತಂಡಕ್ಕೆ ಆದ್ಯತೆ ನೀಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಎಸ್ಎ20 ಲೀಗ್‌ನ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ಆಟಗಾರರು ರಾಷ್ಟ್ರೀಯ ತಂಡವನ್ನು ತೊರೆದು ಈ ಲೀಗ್‌ನಲ್ಲಿ ಆಡಿದ್ದರು. ಆದರೆ ಇದೇ ಸಮಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಿತ್ತು. ಆಗ ಆಫ್ರಿಕಾ ತಂಡದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿತ್ತು. ತಂಡದ ನಾಯಕ ಕೂಡ ಹೊಸಬನಾಗಿದ್ದ. ಇದೀಗ ನ್ಯೂಜಿಲೆಂಡ್ ಕ್ರಿಕೆಟ್ ಕೂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಾಡಿದಂತೆ ಪಾಕ್ ಪ್ರವಾಸಕ್ಕೆ ಹೊಸ ತಂಡವನ್ನು ಕಳುಹಿಸುತ್ತದೋ ಅಥವಾ ಅನುಭವಿಗಳ ತಂಡವನ್ನು ಕಳುಹಿಸುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.
ಲೀಗ್‌ಗೆ ಆದ್ಯತೆ
ಇತ್ತೀಚಿನ ದಿನಗಳಲ್ಲಿ ಹಲವು ಆಟಗಾರರು ಟಿ20 ಲೀಗ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರರು ಇದಕ್ಕೆ ಉತ್ತಮ ಉದಾಹರಣೆ. ಈಗ ಬೇರೆ ದೇಶಗಳ ಆಟಗಾರರೂ ಈ ಕೆಲಸ ಆರಂಭಿಸಿದ್ದಾರೆ. ಈ ಕಾರಣಕ್ಕಾಗಿ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಕೇಂದ್ರ ಒಪ್ಪಂದದಿಂದ ಬೋಲ್ಟ್ ಹೊರಬಂದಿದ್ದಾರೆ. ಇದನ್ನು ನೋಡಿದರೆ ಬೋಲ್ಟ್ ಪಾಕಿಸ್ತಾನ ಪ್ರವಾಸಕ್ಕೆ ಹೋಗದಿರುವುದು ಬಹುತೇಕ ಖಚಿತವಾಗಿದೆ. ಉಳಿದ ಆಟಗಾರರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Fri, 15 March 24
