
ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಪಾಕಿಸ್ತಾನ ನಿರಂತರವಾಗಿ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಭಾರತದ ಮೇಲೆ ದುಷ್ಟ ದಾಳಿ ನಡೆಸಲು ಪ್ರಯತ್ನಿಸುತ್ತಿದೆ. ಇತ್ತ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡುತ್ತಿದೆ. ಈ ಉದ್ವಿಗ್ನತೆಯಿಂದಾಗಿ ಐಪಿಎಲ್ (IPL 2025) ಅನ್ನು ಸಹ 1 ವಾರ ಸ್ಥಗಿತಗೊಳಿಸಲಾಗಿದೆ. 7 ದಿನಗಳ ನಂತರ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಆ ನಂತರವೇ ಐಪಿಎಲ್ ಅನ್ನು ಪುನರಾರಂಭಿಸುವ ಬಗ್ಗೆ ಬಿಸಿಸಿಐ (BCCI) ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ ವಿದೇಶಿ ಆಟಗಾರರು ಈಗಾಗಲೇ ತಮ್ಮ ದೇಶಗಳಿಗೆ ಮರಳಲು ಪ್ರಾರಂಭಿಸಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ವಿದೇಶಿ ಆಟಗಾರರು ಒಂದು ವಾರದೊಳಗೆ ಮತ್ತೆ ಐಪಿಎಲ್ಗೆ ಹಿಂತಿರುಗದಿದ್ದರೆ, ಬಿಸಿಸಿಐ ತನ್ನ ಯೋಜನೆಯನ್ನು ಮರುಪರಿಶೀಲಿಸಬೇಕಾಗಬಹುದು.
ವರದಿಗಳ ಪ್ರಕಾರ, ಧರ್ಮಶಾಲಾದಲ್ಲಿ ಕೆಲವು ವಿದೇಶಿ ಆಟಗಾರರು ಸಾಕಷ್ಟು ಆತಂಕಕ್ಕೊಳಗಾಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಒಂದು ವಾರದ ನಂತರ ಲೀಗ್ ಅನ್ನು ಪುನರಾರಂಭಿಸಿದರೆ, ವಿದೇಶಿ ಆಟಗಾರರು ಬರುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಮತ್ತೊಂದೆಡೆ, ವಿದೇಶಿ ಆಟಗಾರರಿಲ್ಲದೆ ಈ ಸೀಸನ್ ಪೂರ್ಣಗೊಳಿಸುವುದು ಅಸಾಧ್ಯದ ಮಾತು. ವಿದೇಶಿ ಆಟಗಾರರು ಇಲ್ಲದಿದ್ದರೆ, ಎಲ್ಲಾ ತಂಡಗಳ ಪ್ಲೇಯಿಂಗ್ 11 ಕಟ್ಟುವುದೇ ಕಷ್ಟವಾಗಲಿದೆ. ಇದರರ್ಥ ವಿದೇಶಿ ಆಟಗಾರರು ಮತ್ತು ದೇಶದ ಪರಿಸ್ಥಿತಿಯನ್ನು ಪರಿಗಣಿಸಿ, ಬಿಸಿಸಿಐ ಮತ್ತೊಮ್ಮೆ ಲೀಗ್ ಅನ್ನು ಮುಂದೂಡಬಹುದು. ವಾಸ್ತವವಾಗಿ, ಈ ಬಾರಿಯ ಏಷ್ಯಾಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಪರಿಗಣಿಸಿ, ಈ ಪಂದ್ಯಾವಳಿಯನ್ನು ರದ್ದುಗೊಳಿಸಬಹುದು. ಇದರರ್ಥ ಬಿಸಿಸಿಐ ಐಪಿಎಲ್ ಪೂರ್ಣಗೊಳಿಸಲು ಈ ಸಮಯವನ್ನು ಬಳಿಸಿಕೊಳ್ಳಬಹುದು.
ಮತ್ತೊಂದೆಡೆ, ಮುಂದಿನ ಕೆಲವು ದಿನಗಳವರೆಗೆ ಭಾರತದಲ್ಲಿನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಬಿಸಿಸಿಐ ಪಂದ್ಯಾವಳಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಲು ಯೋಜಿಸಬಹುದು. ಇತ್ತೀಚೆಗೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಬಿಸಿಸಿಐ ತಮ್ಮೊಂದಿಗೆ ಮಾತನಾಡಿದರೆ ಐಪಿಎಲ್ ಅನ್ನು ಆಯೋಜಿಸಲು ಸಿದ್ಧ ಎಂದು ಹೇಳಿದೆ. ಇದಲ್ಲದೆ, ಯುಎಇ ಕೂಡ ಭಾರತಕ್ಕೆ ಒಂದು ಆಯ್ಕೆಯಾಗಿದೆ. ಇದಕ್ಕೂ ಮುಂಚೆಯೂ ಐಪಿಎಲ್ ಅನ್ನು ಯುಎಇಯಲ್ಲಿ ಆಡಲಾಗಿತ್ತು. ಹೀಗಾಗಿ ಐಪಿಎಲ್ ಆಯೋಜಿಸಲು ಬಿಸಿಸಿಐಗೆ ಹಲವು ಆಯ್ಕೆಗಳಿವೆ.
IPL 2025: ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು ಗೊತ್ತಾ?
ಪ್ರಸ್ತುತ ಉಂಟಾಗಿರುವ ಯುದ್ಧಾತಂಕದ ಪರಿಸ್ಥಿತಿ ಬೇಗನೇ ತಿಳಿಗೊಂಡರೆ, ಲೀಗ್‌ನ ಉಳಿದ ಪಂದ್ಯಗಳನ್ನು ದೇಶದಲ್ಲಿಯೇ ಆಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಿದೇಶಿ ಆಟಗಾರರು ಭಾರತಕ್ಕೆ ಬರಲು ನಿರಾಕರಿಸಿದರೆ, ಭವಿಷ್ಯದಲ್ಲಿ ಅವರು ಐಪಿಎಲ್‌ನಲ್ಲಿ ಭಾಗವಹಿಸಲು ಸಮಸ್ಯೆಗಳು ಹೆಚ್ಚಾಗಬಹುದು. ಏಕೆಂದರೆ ಐಪಿಎಲ್‌ನ ಹೊಸ ನಿಯಮಗಳ ಪ್ರಕಾರ, ತಂಡಕ್ಕೆ ಆಯ್ಕೆಯಾದ ನಂತರ ಆಟಗಾರರು ತಮ್ಮ ಹೆಸರನ್ನು ಹಿಂತೆಗೆದುಕೊಂಡರೆ, ಅಂತಹ ಆಟಗಾರರನ್ನು ಎರಡು ಸೀಸನ್ವರೆಗೆ ಲೀಗ್ನಿಂದ ನಿಷೇಧಿಸಲಾಗುತ್ತದೆ. ಇದರರ್ಥ ಭಾರತಕ್ಕೆ ಬಾರದಿರುವುದು ವಿದೇಶಿ ಆಟಗಾರರಿಗೆ ದುಬಾರಿಯಾಗಿ ಪರಿಣಮಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ