RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು ಈಗ ಉಲ್ಟಾ ಪಲ್ಟಾ

IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಗೆ ತೆರೆಬಿದ್ದಿದೆ. ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್​ಗಳಿಂದ ಮಣಿಸಿ ಆರ್​ಸಿಬಿ ಕಿರೀಟ ಮುಡಿಗೇರಿಸಿಕೊಂಡಿದೆ.

RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು ಈಗ ಉಲ್ಟಾ ಪಲ್ಟಾ
Ambati Rayudu

Updated on: Jun 04, 2025 | 12:55 PM

ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಪ್ ಗೆಲ್ಲಬಾರದು ಎಂದಿದ್ದ ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಅದು ಸಹ ಚಾಂಪಿಯನ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ ಎಂಬುದು ವಿಶೇಷ.

ಐಪಿಎಲ್ ಆರಂಭಕ್ಕೂ ಮುನ್ನ ಅಂಬಾಟಿ ರಾಯುಡು ಈ ಬಾರಿ ಆರ್​ಸಿಬಿ ತಂಡ ಕಪ್ ಗೆಲ್ಲಬಾರದು ಎಂದಿದ್ದರು. ಎಸ್ ಬ್ರದಿನಾಥ್ ನಡೆಸಿದ ಚಿಟ್​ ಚಾಟ್​ನಲ್ಲಿ ಕಾಣಿಸಿಕೊಂಡಿದ್ದ ರಾಯುಡುಗೆ ಈ ಬಾರಿಯಾದರೂ ಆರ್​ಸಿಬಿ ತಂಡದ ಕಾಯುವಿಕೆ ಕೊನೆಗೊಳ್ಳಲಿದೆಯಾ ಎಂದು ಪ್ರಶ್ನಿಸಲಾಗಿತ್ತು.

ಇದಕ್ಕೆ ನಗುತ್ತಾ ಉತ್ತರಿಸಿದ ರಾಯುಡು, ಈ ಸಲ ನನಗೆ ಆರ್​ಸಿಬಿ ತಂಡ ಕಪ್ ಗೆಲ್ಲೋದು ಇಷ್ಟವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್​ ಬೆಂಗಳೂರುನಂತಹ ತಂಡ ಇರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು. ಹೀಗಾಗಿ ಆರ್​ಸಿಬಿಯಂತಹ ತಂಡ ಐಪಿಎಲ್​ನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ.

ಅಲ್ಲದೆ ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಆನಂದಿಸುತ್ತೇನೆ. ಇದಾಗ್ಯೂ ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಈ ಬಾರಿ ಅವರು ಕಪ್ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರು ಗೆಲ್ಲಲಿ. ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದರು.

ಇದಕ್ಕೂ ಮುನ್ನ ಪೋಡ್​ ಕಾಸ್ಟ್​ವೊಂದರಲ್ಲಿ ಮಾತನಾಡಿದ್ದ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಹಾಗೂ ಪ್ರಾರ್ಥಿಸುತ್ತೇನೆ ಎಂದಿದ್ದರು.

ಆದರೆ ಅಂಬಾಟಿ ರಾಯುಡು ಅವರ ಪ್ರಾರ್ಥನೆ ಫಲಿಸಲಿಲ್ಲ. ಅಹಮದಾಬಾದ್​ನಲ್ಲಿ ನಡೆದ ಐಪಿಎಲ್​ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ದಾಖಲಿಸಿದೆ.

ಇದನ್ನೂ ಓದಿ: IPL 2025 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?

ಈ ಗೆಲುವಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ RCB ತಂಡಕ್ಕೆ ಅಭಿನಂದನೆ ಸಲ್ಲಿಸಿ ಅಂಬಾಟಿ ರಾಯುಡು ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಕೊನೆಗೂ! ಆರ್‌ಸಿಬಿ ಮತ್ತು ಅವರ ಅದ್ಭುತ ತಂಡ ಮತ್ತು ಅಭಿಮಾನಿಗಳಿಗೆ ತುಂಬಾ ಸಂತೋಷವಾಗಿದೆ.. ನಿಜವಾಗಿಯೂ ಅದಕ್ಕೆ ನೀವು ಅರ್ಹರು ಎಂದು ಚಾಂಪಿಯನ್ ಪಟ್ಟ ಅಲಂಕರಿಸಿ ಆರ್​ಸಿಬಿ ತಂಡಕ್ಕೆ ಅಂಬಾಟಿ ರಾಯುಡು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

Published On - 12:53 pm, Wed, 4 June 25