IPL 2025: ಐಪಿಎಲ್ ನಿಯಮ ಉಲ್ಲಂಘಿಸಿದ ಇಶಾಂತ್ ಶರ್ಮಾಗೆ ದಂಡ
IPL 2025 SRH vs GT: ಐಪಿಎಲ್ನ 19ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 152 ರನ್ ಕಲೆಹಾಕಿದರೆ, ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡ 16.4 ಓವರ್ಗಳಲ್ಲಿ ಬೆನ್ನತ್ತಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಮೊಹಮ್ಮದ್ ಸಿರಾಜ್.

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 19ನೇ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದಕ್ಕಾಗಿ ಗುಜರಾತ್ ಟೈಟಾನ್ಸ್ ತಂಡದ ವೇಗಿ ಇಶಾಂತ್ ಶರ್ಮಾಗೆ (Ishant Sharma) ದಂಡ ವಿಧಿಸಲಾಗಿದೆ. ಹೈದರಾಬಾದ್ನ ರಾಜೀವ್ ದಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ಇಶಾಂತ್ ಶರ್ಮಾ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥನೆಂದು ಕಂಡುಬಂದಿದ್ದು, ಹೀಗಾಗಿ ಅವರಿಗೆ ಪಂದ್ಯ ಶುಲ್ಕವನ್ನು ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಐಪಿಎಲ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಇಶಾಂತ್ ಶರ್ಮಾ ಮಾಡಿದ ತಪ್ಪಿನ ಬಗ್ಗೆ ಉಲ್ಲೇಖಿಸಲಾಗಿಲ್ಲ. ಮ್ಯಾಚ್ ರೆಫರಿ ಜೊತೆ ಇಶಾಂತ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಐಪಿಎಲ್ ನಿಯಮದ ಪ್ರಕಾರ, ಲೆವೆಲ್ 1 ರಲ್ಲಿ ತಪ್ಪಿತಸ್ಥರೆಂದು ಕಂಡುಬಂದಿರುವ ಕಾರಣ ಅವರಿಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.
ಗೆದ್ದು ಬೀಗಿದ ಗುಜರಾತ್ ಪಡೆ:
ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತು.
153 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ಶುಭ್ಮನ್ ಗಿಲ್ ಅಜೇಯ 61 ರನ್ ಬಾರಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡ 16.4 ಓವರ್ಗಳಲ್ಲಿ 153 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇಶಾಂತ್ ಶರ್ಮಾ ಕಳಪೆ ಪ್ರದರ್ಶನ:
ಗುಜರಾತ್ ಟೈಟಾನ್ಸ್ ಇಶಾಂತ್ ಶರ್ಮಾ ಅವರ 7ನೇ ತಂಡವಾಗಿದೆ. ಟೈಟಾನ್ಸ್ ಪರ ಇಲ್ಲಿಯವರೆಗೆ 3 ಪಂದ್ಯಗಳನ್ನು ಆಡಿರುವ ಅವರು ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ. ಹೀಗಾಗಿಯೇ ಮುಂದಿನ ಪಂದ್ಯಗಳಿಂದ ಹಿರಿಯ ವೇಗಿಯನ್ನು ಗುಜರಾತ್ ಟೈಟಾನ್ಸ್ ತಂಡವು ಕೈ ಬಿಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಒಂದು ಬೌಂಡರಿಗೆ 19 ಎಸೆತಗಳು: ಐಪಿಎಲ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಧೋನಿ
ಐಪಿಎಲ್‌ನಲ್ಲಿ ಇಶಾಂತ್ ಶರ್ಮಾ ಅವರ ಒಟ್ಟಾರೆ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು ಇಲ್ಲಿಯವರೆಗೆ ಆಡಿರುವ 113 ಪಂದ್ಯಗಳಲ್ಲಿ 93 ವಿಕೆಟ್‌ಗಳನ್ನು ಕಬಳಿಸಿದ್ದಾರೆ.