IPL 2025: 300 ರನ್ ನಮ್ಮ ಗುರಿ ಎಂದಿದ್ದ ಹೈದರಾಬಾದ್‌ಗೆ 80 ರನ್‌ಗಳ ಹೀನಾಯ ಸೋಲು
KKR vs SRH: ಐಪಿಎಲ್ 2025ರ 15ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್‌ಗಳಿಂದ ಸೋಲಿಸಿದೆ. ಕೆಕೆಆರ್ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರೆ, ಬೌಲರ್‌ಗಳು ಸನ್‌ರೈಸರ್ಸ್ ಬ್ಯಾಟಿಂಗ್ ವಿಭಾಗವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದರು. ಈ ಗೆಲುವಿನೊಂದಿಗೆ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ 5 ಸ್ಥಾನಗಳನ್ನು ಏರಿದರೆ, ಹೈದರಾಬಾದ್ ಕೊನೆಯ ಸ್ಥಾನಕ್ಕೆ ಜಾರಿದೆ.

ಐಪಿಎಲ್ 2025 (IPL 2025) ರ 15 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಏಕಪಕ್ಷೀಯ ಗೆಲುವು ಸಾಧಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಇನ್ನಿಲ್ಲದಂತೆ ಕಾಡಿದ ಕೆಕೆಆರ್ ವೇಗಿಗಳು ತಂಡಕ್ಕೆ 80 ರನ್‌ಗಳ ಭಾರಿ ಜಯವನ್ನು ತಂದುಕೊಟ್ಟರು. ಈ ಸೀಸನ್‌ನಲ್ಲಿ ಕೋಲ್ಕತ್ತಾ ತಂಡ ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದ್ದು, ಹೈದರಾಬಾದ್ ವಿರುದ್ಧ ಟೂರ್ನಿಯಲ್ಲಿ ಇದು ಸತತ ನಾಲ್ಕನೇ ಗೆಲುವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 200 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡಕ್ಕೆ ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗದೆ ಇಡೀ ತಂಡ ಕೇವಲ 120 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಕ್ವಿಂಟನ್ ಡಿ ಕಾಕ್ 1 ರನ್‌ಗಳಿಗೆ ಸುಸ್ತಾದರೆ, ನರೈನ್ ಆಟವೂ 7 ರನ್‌ಗಳಿಗೆ ಅಂತ್ಯವಾಯಿತು. ಆದರೆ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ವೆಂಕಟೇಶ್ ಅಯ್ಯರ್ ಕೇವಲ 29 ಎಸೆತಗಳಲ್ಲಿ 60 ರನ್ ಗಳಿಸಿದರೆ, ಆಂಗ್ಕ್ರಿಶ್ ರಘುವಂಶಿ 32 ಎಸೆತಗಳಲ್ಲಿ 50 ರನ್ ಕಲೆಹಾಕಿದರು. ನಾಯಕ ರಹಾನೆ 27 ಎಸೆತಗಳಲ್ಲಿ 38 ರನ್ ಗಳಿಸಿದರೆ, ರಿಂಕು ಸಿಂಗ್ 17 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು.
ಹೈದರಾಬಾದ್ ಬ್ಯಾಟಿಂಗ್ ವೈಫಲ್ಯ
ಹೈದರಾಬಾದ್ ತಂಡಕ್ಕೆ ಅದರ ಬ್ಯಾಟಿಂಗ್ ವಿಭಾಗವೇ ಜೀವಾಳ. ತಂಡದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಐದಾರು ಬ್ಯಾಟ್ಸ್ಮನ್ಗಳಿದ್ದಾರೆ. ಆದಾಗ್ಯೂ ಇದೀಗ ಈ ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ಅದರ ದೌರ್ಬಲ್ಯವಾಗಿದೆ. ಆರಂಭಿಕ ಟ್ರಾವಿಸ್ ಹೆಡ್ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರೆ, ಅಭಿಷೇಕ್ ಶರ್ಮಾ ಕೇವಲ 2 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಇಶಾನ್ ಕಿಶನ್ ವಿಷಯದಲ್ಲೂ ಇದೇ ಆಗಿತ್ತು, ಅವರು ಕೂಡ 2 ರನ್ ಗಳಿಸಿ ಔಟಾದರು. ನಿತೀಶ್ ರೆಡ್ಡಿ 19 ರನ್‌ಗಳ ಇನ್ನಿಂಗ್ಸ್ ಆಡಿದರೆ, ಕಾಮಿಂದು ಮೆಂಡಿಸ್ 27 ರನ್ ಗಳಿಸಿದರು. ಹೆನ್ರಿಕ್ ಕ್ಲಾಸೆನ್ ಅತಿ ಹೆಚ್ಚು 33 ರನ್ ಗಳಿಸಿದರು. ಒಂದೆಡೆ, ಹೈದರಾಬಾದ್ ತಂಡವು ಟಿ20ಯಲ್ಲಿ 300 ರನ್ ಗಳಿಸಬಹುದು ಎಂಬ ಮಾತುಗಳು ಕೇಳಿರುತ್ತಿದ್ದರೆ, ಈಗ ಈ ತಂಡಕ್ಕೆ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗುತ್ತಿಲ್ಲ. ಕೋಲ್ಕತ್ತಾ ವಿರುದ್ಧ, ಈ ತಂಡ ಕೇವಲ 16.4 ಓವರ್‌ಗಳಲ್ಲಿ ಪತನಗೊಂಡಿತು.
ಕೆಕೆಆರ್ಗೆ ಗೆಲುವು ತಂದ ಬೌಲರ್ಸ್
ಕೋಲ್ಕತ್ತಾ ತಂಡದ ಗೆಲುವಿನಲ್ಲಿ ಬ್ಯಾಟ್ಸ್‌ಮನ್‌ಗಳು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸಿದ್ದರು, ಆದರೆ ಬೌಲರ್‌ಗಳು ನಿಜವಾಗಿಯೂ ತಂಡದ ಗೆಲುವನ್ನು ಖಚಿತಪಡಿಸಿದರು. ವೇಗಿ ವೈಭವ್ ಅರೋರಾ 4 ಓವರ್‌ಗಳಲ್ಲಿ 29 ರನ್‌ಗಳಿಗೆ 3 ವಿಕೆಟ್ ಪಡೆದರು. ಈ ಆಟಗಾರ ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ವರುಣ್ ಚಕ್ರವರ್ತಿ ಕೂಡ 4 ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಆಂಡ್ರೆ ರಸೆಲ್ 2 ವಿಕೆಟ್ ಮತ್ತು ನರೈನ್-ಹರ್ಷಿತ್ ರಾಣಾ ತಲಾ 1 ವಿಕೆಟ್ ಪಡೆದರು.
IPL 2025: ಬ್ಯಾಟಿಂಗ್ ವೈಫಲ್ಯ, ಸಿರಾಜ್ ಮಾರಕ ದಾಳಿ; ಆರ್ಸಿಬಿಗೆ ಮೊದಲ ಸೋಲು
5 ತಂಡಗಳನ್ನು ಹಿಂದಿಕ್ಕಿದ ಕೆಕೆಆರ್
ಹೈದರಾಬಾದ್ ವಿರುದ್ಧ 80 ರನ್‌ಗಳ ಗೆಲುವು ಸಾಧಿಸಿರುವ ಕೋಲ್ಕತ್ತಾ ತಂಡ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಐದು ತಂಡಗಳನ್ನು ಸೋಲಿಸುವ ಮೂಲಕ ಭರ್ಜರಿ ಮುಂಬಡ್ತಿ ಪಡೆದಿದೆ. ಈ ಹಿಂದೆ 10 ನೇ ಸ್ಥಾನದಲ್ಲಿದ್ದ ಕೆಕೆಆರ್ ಈಗ ನೇರವಾಗಿ 5 ನೇ ಸ್ಥಾನಕ್ಕೆ ತಲುಪಿದೆ. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು 4 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಮೂರು ಸೋಲುಗಳೊಂದಿಗೆ 10 ನೇ ಸ್ಥಾನಕ್ಕೆ ಕುಸಿದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 am, Fri, 4 April 25