Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬ್ಯಾಟಿಂಗ್‌ ವೈಫಲ್ಯ, ಸಿರಾಜ್ ಮಾರಕ ದಾಳಿ; ಆರ್​ಸಿಬಿಗೆ ಮೊದಲ ಸೋಲು

RCB's First IPL 2025 Loss: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025 ರಲ್ಲಿ ತನ್ನ ಮೊದಲ ಸೋಲನ್ನು ಅನುಭವಿಸಿದೆ. ಗುಜರಾತ್ ಟೈಟಾನ್ಸ್ ತಂಡವು 8 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಮೊಹಮ್ಮದ್ ಸಿರಾಜ್ ಅವರ ಅದ್ಭುತ ಬೌಲಿಂಗ್ ಆರ್‌ಸಿಬಿಗೆ ತೊಂದರೆ ಉಂಟು ಮಾಡಿತು. ಗುಜರಾತ್‌ನ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಗುರಿ ಮುಟ್ಟಿದರು. ಈ ಸೋಲಿನಿಂದ ಆರ್‌ಸಿಬಿ ಅಭಿಮಾನಿಗಳು ನಿರಾಶರಾಗಿದ್ದಾರೆ.

IPL 2025: ಬ್ಯಾಟಿಂಗ್‌ ವೈಫಲ್ಯ, ಸಿರಾಜ್ ಮಾರಕ ದಾಳಿ; ಆರ್​ಸಿಬಿಗೆ ಮೊದಲ ಸೋಲು
Rcb Vs Gt
Follow us
ಪೃಥ್ವಿಶಂಕರ
|

Updated on:Apr 02, 2025 | 11:24 PM

2025 ರ ಐಪಿಎಲ್​ನಲ್ಲಿ (IPL 2025) ಉತ್ತಮ ಆರಂಭ ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮೊದಲ ಸೋಲನ್ನು ಅನುಭವಿಸಿದೆ. ಕೋಲ್ಕತ್ತಾ ಮತ್ತು ಚೆನ್ನೈನಂತಹ ಮೈದಾನಗಳಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿದ್ದ ಬೆಂಗಳೂರು, ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸೋಲನ್ನು ಅನುಭವಿಸಿದೆ. ಶುಭ್​ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಏಕಪಕ್ಷೀಯವಾಗಿ ಆರ್​ಸಿಬಿ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ವಿಶೇಷವೆಂದರೆ ಗುಜರಾತ್ ತಂಡದ ಗೆಲುವಿನ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್, ಈ ಸೀಸನ್​ಗೂ ಮೊದಲು ಸತತ 7 ವರ್ಷಗಳ ಕಾಲ ಆರ್‌ಸಿಬಿ ತಂಡದ ಭಾಗವಾಗಿದ್ದ ಸಿರಾಜ್​ ಈ ಪಂದ್ಯದಲ್ಲಿ ಕೇವಲ 19 ರನ್ ನಿಡಿ ಪ್ರಮುಖ 3 ವಿಕೆಟ್ ಪಡೆದರು.

ಈ ಪಂದ್ಯಕ್ಕೂ ಮುನ್ನ, ಬೆಂಗಳೂರು ಮತ್ತು ಗುಜರಾತ್ ನಡುವಿನ ಹಣಾಹಣಿಯಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿತ್ತು, ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಜಯಗಳಿಸಿತ್ತು. ಆದಾಗ್ಯೂ ಈ ಪಂದ್ಯದಲ್ಲಿ ಗುಜರಾತ್ ತಂಡದ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿ ಪವರ್ ಪ್ಲೇನಲ್ಲಿಯೇ ಬೆಂಗಳೂರಿನ ಅಗ್ರ ಕ್ರಮಾಂಕವನ್ನು ಕೆಡವಿದರು. ಆದಾಗ್ಯೂ, ಗುಜರಾತ್ ತಂಡದ ಫೀಲ್ಡಿಂಗ್ ಖಂಡಿತವಾಗಿಯೂ ನಿರಾಶಾದಾಯಕವಾಗಿತ್ತಾದರೂ ಬೌಲರ್‌ಗಳ ಕರಾರುವಕ್ಕಾದ ದಾಳಿ ಆರ್​ಸಿಬಿ ಬ್ಯಾಟಿಂಗ್‌ ವಿಭಾಗವನ್ನು ಕಟ್ಟಿಹಾಕಿತು.

ಆರ್​​ಸಿಬಿಗೆ ಆರಂಭಿಕ ಆಘಾತ

ಈ ಪಂದ್ಯದ ಅತ್ಯಂತ ದೊಡ್ಡ ರೋಮಾಂಚನಕಾರಿ ಕ್ಷಣವೆಂದರೆ ಸಿರಾಜ್ ಮತ್ತು ವಿರಾಟ್ ಕೊಹ್ಲಿ ನಡುವಿನ ಮುಖಾಮುಖಿ. ಆದರೆ ಅರ್ಷದ್ ಖಾನ್ ಎಸೆದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಕೊಹ್ಲಿ ಔಟಾದ ಕಾರಣ ಅಂತಹದ್ದೇನೂ ಕಾಣಲಿಲ್ಲ. ಆದಾಗ್ಯೂ, ಸಿರಾಜ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ತನ್ನ ಮತ್ತು ತನ್ನ ಹಳೆಯ ತಂಡದ ಅಭಿಮಾನಿಗಳಿಗೆ ಖಂಡಿತವಾಗಿಯೂ ನೋವುಂಟುಮಾಡಿದರು. ಏಳನೇ ಓವರ್ ವೇಳೆಗೆ ಬೆಂಗಳೂರು 42 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದರಲ್ಲಿ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ನಾಯಕ ರಜತ್ ಪತಿದಾರ್ ಅವರಂತಹ ಬ್ಯಾಟ್ಸ್‌ಮನ್‌ಗಳು ಸೇರಿದ್ದರು. ಇದರಲ್ಲಿಯೂ ಸಿರಾಜ್ 3 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದರು.

ಇದನ್ನೂ ಓದಿ
Image
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
Image
ಆರ್​ಸಿಬಿ ವಿರುದ್ಧ ಐಪಿಎಲ್​ನ ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್
Image
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
Image
ತವರಿನಲ್ಲಿ ಮೊದಲ ಪಂದ್ಯ ಸೋತ ಆರ್​ಸಿಬಿ

ಲಿವಿಂಗ್​ಸ್ಟೋನ್, ಡೇವಿಡ್ ಸ್ಫೋಟಕ ಬ್ಯಾಟಿಂಗ್

ಆ ಬಳಿಕ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ಅವರಂತಹ ಬೌಲರ್‌ಗಳು ಕೂಡ ಸಿರಾಜ್ ದಾಳಿಯ ಲಾಭ ಪಡೆದರು. ಆದಾಗ್ಯೂ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಉತ್ತಮ ಜೊತೆಯಾಟ ಆಡಿದರು. ಆದಾಗ್ಯೂ, ಈ ಸಮಯದಲ್ಲಿ ಗುಜರಾತ್ ಲಿವಿಂಗ್‌ಸ್ಟೋನ್‌ಗೆ 3 ಅವಕಾಶಗಳನ್ನು ನೀಡಿತು. ಇದರ ಲಾಭ ಪಡೆದ ಲಿವಿಂಗ್‌ಸ್ಟೋನ್ 54 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ಟಿಮ್ ಡೇವಿಡ್ ಕೇವಲ 18 ಎಸೆತಗಳಲ್ಲಿ 32 ರನ್ ಗಳಿಸಿ ಬೆಂಗಳೂರು ತಂಡವನ್ನು 169 ರನ್‌ಗಳ ಪಂದ್ಯಕ್ಕೆ ಅರ್ಹವಾದ ಸ್ಕೋರ್‌ಗೆ ಕೊಂಡೊಯ್ದರು.

ವಿಕೆಟ್ ಪಡೆಯದ ಬೌಲರ್ಸ್​

ಕಳೆದ ಎರಡು ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಆರ್‌ಸಿಬಿ ಬೌಲರ್‌ಗಳು ಈ ಬಾರಿ ಅದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಹೆಚ್ಚು ರನ್ ಬಿಟ್ಟುಕೊಡದಿದ್ದರೂ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಜೋಡಿ ಉತ್ತಮ ಜೊತೆಯಾಟ ಆಡಿತು. ಆದಾಗ್ಯೂ ಭುವನೇಶ್ವರ್, ಗಿಲ್​ರನ್ನು ಬೇಗನೇ ಪೆವಿಲಿಯನ್​ಗಟ್ಟಿದರು. ಆದರೆ ಇದರ ನಂತರ, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಇನ್ನಿಂಗ್ಸ್ ನಿಭಾಯಿಸಿ, ಆರ್​ಸಿಬಿ ಮತ್ತೆ ಪಂದ್ಯಕ್ಕೆ ಮರಳದಂತೆ ಮಾಡಿದರು.

IPL 2025: 6,6,6,6,6..! ಗುಜರಾತ್ ವಿರುದ್ಧ ಅಬ್ಬರದ ಅರ್ಧಶತಕ ಸಿಡಿಸಿದ ಲಿವಿಂಗ್‌ಸ್ಟೋನ್; ವಿಡಿಯೋ

ಬಟ್ಲರ್ ಗೆಲುವಿನ ಅರ್ಧಶತಕ

ಸಾಯಿ ಸುದರ್ಶನ್ 49 ರನ್​ಗಳಿಗೆ ಔಟಾದರಾದರೂ ಪಂದ್ಯದ ಫಲಿತಾಂಶ ಬಹುತೇಕ ನಿರ್ಧಾರವಾಗಿದ್ದರಿಂದ ಇದು ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಟ್ಲರ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರೆ, ಅವರಿಗೆ ಶರ್ಫನ್ ರುದರ್ಫೋರ್ಡ್ ಉತ್ತಮ ಸಾಥ್ ನೀಡಿದರು. ಈ ಇಬ್ಬರು 63 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಮಾಡಿದರು. ಈ ಮೂಲಕ 17.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ವೇಳೆ ಬಟ್ಲರ್ ಕೇವಲ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಗಳಿಸಿದರೆ, ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗುಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:22 pm, Wed, 2 April 25