AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 83 ರನ್​ಗಳಿಂದ ಸೋತ ಗುಜರಾತ್; ಆರ್​ಸಿಬಿಗಿದೆ ಅಗ್ರಸ್ಥಾನಕ್ಕೇರುವ ಅವಕಾಶ..!

CSK Upsets Gujarat Titans in IPL 2025: ಐಪಿಎಲ್ 2025ರ 67ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ ತಂಡವನ್ನು 83 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ 231 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 147 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನಿಂದ ಸಿಎಸ್‌ಕೆ ಲೀಗ್ ನಿಂದ ಹೊರಬಿದ್ದರೆ, ಗುಜರಾತ್ ತಂಡದ ಟಾಪ್ 2 ಸ್ಥಾನದ ಆಸೆಗೆ ತೊಂದರೆಯಾಗಿದೆ.

IPL 2025: 83 ರನ್​ಗಳಿಂದ ಸೋತ ಗುಜರಾತ್; ಆರ್​ಸಿಬಿಗಿದೆ ಅಗ್ರಸ್ಥಾನಕ್ಕೇರುವ ಅವಕಾಶ..!
Gt Vs Csk
ಪೃಥ್ವಿಶಂಕರ
|

Updated on:May 25, 2025 | 7:37 PM

Share

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 (IPL 2025) ರ 67ನೇ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್  (GT)ತಂಡವನ್ನು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಸಿಎಸ್​ಕೆ ಲೀಗ್​ಗೆ ವಿದಾಯ ಹೇಳಿದರೆ, ಇತ್ತ ಈ ಸೋಲಿನೊಂದಿಗೆ ಗುಜರಾತ್ ತಂಡದ ಟಾಪ್ 2 ಕನಸು ಭಗ್ನಗೊಳ್ಳುವ ಹಂತಕ್ಕೆ ತಲುಪಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ 231 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 147 ರನ್​ಗಳಿಗೆ ಆಲೌಟ್ ಆಗುವ ಮೂಲಕ 83 ರನ್​ಗಳ ಬೃಹತ್ ಅಂತರದಿಂದ ಹೀನಾಯ ಸೋಲಿಗೆ ಕೊರಳೊಡ್ಡಿತು.

ಸಿಎಸ್​ಕೆಗೆ ಉತ್ತಮ ಆರಂಭ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯುಷ್ ಮ್ಹಾತ್ರೆ ಮತ್ತು ಡೆವೊನ್ ಕಾನ್ವೇ ಭರ್ಜರಿ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಆಯುಷ್ 17 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಉರ್ವಿಲ್ ಪಟೇಲ್ ಕೂಡ ಉತ್ತಮ ಪ್ರದರ್ಶನ ನೀಡಿ 19 ಎಸೆತಗಳಲ್ಲಿ 37 ರನ್​ಗಳ ಕಾಣಿಕೆ ನೀಡಿದರು. ಶಿವಂ ದುಬೆ 8 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರೆ, ಆರಂಭಿಕ ಕಾನ್ವೇ 35 ಎಸೆತಗಳಲ್ಲಿ 52 ರನ್ ಗಳಿಸಿದರು.

ಅಬ್ಬರಿಸಿದ ಬ್ರೆವಿಸ್

ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ಡೆವಾಲ್ಡ್ ಬ್ರೆವಿಸ್ ಕೇವಲ 23 ಎಸೆತಗಳಲ್ಲಿ 57 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಜಡೇಜಾ ಕೂಡ 18 ಎಸೆತಗಳಲ್ಲಿ 21 ರನ್​ಗಳ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 230 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಬೌಲಿಂಗ್​ನಲ್ಲಿ ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಶಾರುಖ್ ತಲಾ ಒಂದು ವಿಕೆಟ್ ಪಡೆದರು.

ಗುಜರಾತ್​ಗೆ ಕಳಪೆ ಆರಂಭ

231 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಶುಭ್​ಮನ್ ಗಿಲ್ ಕೇವಲ 13 ರನ್ ಗಳಿಸಿ ಔಟಾದರು. ಇದಾದ ನಂತರ, ಜೋಸ್ ಬಟ್ಲರ್ ಕೂಡ ಕೇವಲ 5 ರನ್​ಗಳಿಗೆ ಸುಸ್ತಾದರು. ಆ ಬಳಿಕ ಬಂದ ಸ್ಫೋಟಕ ದಾಂಡಿಗ ರುದರ್ಫೋರ್ಡ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಶಾರುಖ್ ಖಾನ್ 19 ರನ್ ಗಳಿಸಿದ ಔಟಾದರೆ, ಭರವಸೆಯ ಆರಂಭಿಕ ಸಾಯಿ ಸುದರ್ಶನ್ 28 ಎಸೆತಗಳಲ್ಲಿ 41 ರನ್ ಗಳಿಸಿ ರವೀಂದ್ರ ಜಡೇಜಾಗೆ ಬಲಿಯಾದರು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಸುದರ್ಶನ್ ಔಟಾದ ತಕ್ಷಣ ಗುಜರಾತ್ ತಂಡದ ಬ್ಯಾಟಿಂಗ್ ಕ್ರಮಾಂಕ ಪೆವಿಲಿಯನ್ ಪರೇಡ್ ನಡೆಸಿತು. ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್​ಗೂ ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್‌ನಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಡೀ ತಂಡವು 147 ರನ್‌ಗಳಿಗೆ ಆಲೌಟ್ ಆಯಿತು. ಬೌಲಿಂಗ್‌ನಲ್ಲಿ ಸಿಎಸ್‌ಕೆ ಪರ ಅನ್ಶುಲ್ ಕಾಂಬೋಜ್ ಮತ್ತು ನೂರ್ ಅಹ್ಮದ್ ತಲಾ 3 ವಿಕೆಟ್ ಪಡೆದರು.

IPL 2025: ಒಂದೇ ಓವರ್​ನಲ್ಲಿ 28 ರನ್; ಸಿಎಸ್​ಕೆಗೆ ಸಿಕ್ಕಿದ್ದಾನೆ ಹೊಸ ಹಿಟ್‌ಮ್ಯಾನ್

ಆರ್​​ಸಿಬಿಗೆ ಸುವರ್ಣಾವಕಾಶ

ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಸೋತರೂ ಪಾಯಿಂಟ್ ಪಟ್ಟಿಯಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹೀಗಾಗಿ ಅಗ್ರಸ್ಥಾನಕ್ಕೇರುವ ಅವಕಾಶ ಈಗಲೂ ಎಲ್ಲಾ ನಾಲ್ಕು ತಂಡಗಳಿಗಿದೆ. ಅದರಲ್ಲೂ ತಲಾ 17 ಅಂಕಗಳನ್ನು ಹೊಂದಿರುವ ಪಂಜಾಬ್ ಹಾಗೂ ಆರ್​ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಹೆಚ್ಚಿದೆ. ಒಂದು ವೇಳೆ ನಾಳೆಯ ಪಂದ್ಯದಲ್ಲಿ ಪಂಜಾಬ್ ಸೋತು ಮುಂಬೈ ಗೆದ್ದರೆ, ಆಗ ಮುಂಬೈ ತಂಡ ಅಗ್ರಸ್ಥಾನಕ್ಕೇರಲಿದೆ. ಆ ಬಳಿಕ ಲಕ್ನೋ ವಿರುದ್ಧ ಆರ್​ಸಿಬಿ ಗೆದ್ದರೆ, ಆಗ ಆರ್​ಸಿಬಿ ಅಗ್ರಸ್ಥಾನ ಪಡೆದು ಪ್ಲೇ ಆಫ್​ ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Sun, 25 May 25