
ಐಪಿಎಲ್ 2025 (IPL 2025) ರ 32 ನೇ ಪಂದ್ಯ ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (DC vs RR) ತಂಡಗಳ ನಡುವೆ ನಡೆಯಿತು. ಎರಡೂ ತಂಡಗಳ ನಡುವೆ ನಡೆದ ಈ ಜಿದ್ದಾಜಿದ್ದಿನ ಕಾಳಗದಲ್ಲಿ ಕೊನೆಗೆ ಡೆಲ್ಲಿ ತಂಡ ಸೂಪರ್ ಓವರ್‌ನಲ್ಲಿ ಜಯ ಸಾಧಿಸಿತು. ಆದಾಗ್ಯೂ ಪಂದ್ಯದ ಸಮಯದಲ್ಲಿ ತಾಳ್ಮೆ ಕಳೆದುಕೊಂಡಿದ್ದ ಡೆಲ್ಲಿ ತಂಡದ ಬೌಲಿಂಗ್ ಕೋಚ್ ಮುನಾಫ್ ಪಟೇಲ್ (Munaf Patel) ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಇದೀಗ ಮುನಾಫ್ ಪಟೇಲ್ ವಿರುದ್ಧ ಕಠಿಣ ಕ್ರಮ ಕೈಕೊಂಡಿರುವ ಬಿಸಿಸಿಐ, ಅವರ ಪಂದ್ಯ ಶುಲ್ಕದ ಶೇ 25 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ.
ಪಂದ್ಯದ ಬಳಿಕ ಮುನಾಫ್ ಪಟೇಲ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ, ಅವರು ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ವಾಸ್ತವವಾಗಿ, ಮುನಾಫ್ ಪಟೇಲ್ ತಂಡದ ಆಟಗಾರರಿಗೆ ಮೆಸೆಜ್ ಕಳುಹಿಸಲು ಮುಂದಾಗಿದ್ದರು. ಆದರೆ ನಾಲ್ಕನೇ ಅಂಪೈರ್ ಇದಕ್ಕೆ ಅನುಮತಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ಮುನಾಫ್ ಪಟೇಲ್ ಕೋಪದಲ್ಲಿ ಏನೋ ಹೇಳಿದ್ದರು. ಹೀಗಾಗಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ಮುನಾಫ್ ಪಟೇಲ್ಗೆ ದಂಡ ವಿಧಿಸಿವುದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ. ಮುನಾಫ್ ಪಟೇಲ್ ತನ್ನ ತಪ್ಪನ್ನು ಒಪ್ಪಿಕೊಂಡು ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಆದರೆ, ಅವರಿಗೆ ಯಾವ ಕಾರಣಕ್ಕಾಗಿ ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿಲ್ಲ.
IPL 2025: ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
ಈ ಸೀಸನ್‌ನಲ್ಲಿ ಡೆಲ್ಲಿ ತಂಡದ ಸದಸ್ಯರಿಗೆ ದಂಡ ವಿಧಿಸಲಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ನಾಯಕ ಅಕ್ಷರ್ ಪಟೇಲ್ ಅವರಿಗೂ ಬಿಸಿಸಿಐ ದಂಡ ವಿಧಿಸಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ದರದಿಂದಾಗಿ ಅವರಿಂದ 12 ಲಕ್ಷ ರೂ. ವಸೂಲಿ ಮಾಡಲಾಗಿತ್ತು.
ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಫಾರ್ಮ್‌ನಲ್ಲಿದೆ. ಪ್ರತಿಯೊಂದು ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅಕ್ಷರ್ ಪಟೇಲ್ ನಾಯಕತ್ವದಲ್ಲಿ ದೆಹಲಿ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ