IPL 2025: ಇಂದು ಗೆದ್ದವರು ಮೊದಲ ಕ್ವಾಲಿಫೈಯರ್ಗೆ ಎಂಟ್ರಿ
IPL 2025 Playoffs: ಇಂಡಿಯನ್ ಪ್ರೀಮಿಯರ್ ಲೀಗ್ನ 68 ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ (18 ಅಂಕಗಳು) ತಂಡವು ಅಗ್ರ ಅಲಂಕರಿಸಿದರೆ, ಪಂಜಾಬ್ ಕಿಂಗ್ಸ್ (17) ತಂಡವು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಆರ್ಸಿಬಿ ತಂಡವು (17) ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ (16) ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ಪಂದ್ಯಕ್ಕೂ ಮುನ್ನ ನಾಲ್ಕು ತಂಡಗಳ ನಡುವೆ ಟಾಪ್-2 ಅರ್ಹತೆಗಾಗಿ ಪೈಪೋಟಿ ಏರ್ಪಟ್ಟಿದೆ. ಈ ಪೈಪೋಟಿಯ ನಡುವೆ ಇಂದು ಒಂದು ತಂಡವು ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಅಂದರೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದ್ದು, ಈ ಮೂಲಕ ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಲಿದೆ.
ಏನಿದು ಮೊದಲ ಕ್ವಾಲಿಫೈಯರ್ ಪಂದ್ಯ?
ಪ್ಲೇಆಫ್ ಸುತ್ತಿನಲ್ಲಿ ಮೊದಲ ಮೂರು ಪಂದ್ಯಗಳು ಫೈನಲ್ ಅರ್ಹತೆಗಾಗಿ ನಡೆಯಲಿದೆ. ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಇನ್ನು ಸೋತ ತಂಡ ಟೂರ್ನಿಯಿಂದ ಹೊಬೀಳುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ ಪಡೆಯಲಿದೆ.
ದ್ವಿತೀಯ ಕ್ವಾಲಿಫೈಯರ್ ಆಡುವುದು ಯಾರು?
ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಿದರೆ, ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ. ಹಾಗೆಯೇ ಎಲಿಮಿನೇಟರ್ ಮ್ಯಾಚ್ನಲ್ಲಿ ಸೋತ ತಂಡ ಪ್ಲೇಆಫ್ನಿಂದ ಹೊರಬೀಳಲಿದೆ.
ಅದರಂತೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳು ದ್ವಿತೀಯ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದೆ. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.
ಯಾರ ನಡುವೆ ಫೈನಲ್ ಮುಖಾಮುಖಿ?
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಿದರೆ, ಸೋತ ತಂಡವು ಎಲಿಮಿನೇಟರ್ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕು. ಇಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ.
ಅದರಂತೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡವನ್ನು ದ್ವಿತೀಯ ಕ್ವಾಲಿಫೈಯರ್ನಲ್ಲಿ ಗೆದ್ದ ತಂಡ ಫೈನಲ್ನಲ್ಲಿ ಎದುರಿಸಲಿದೆ.
ಎಲಿಮಿನೇಟರ್ ಭಯವೇಕೆ?
ಹೆಸರೇ ಸೂಚಿಸುವಂತೆ ಈ ಪಂದ್ಯದಲ್ಲಿ ಸೋಲುವ ತಂಡ ಎಲಿಮಿನೇಟ್ ಆಗಲಿದೆ. ಅಂದರೆ ಟೂರ್ನಿಯಿಂದ ಹೊರಬೀಳಲಿದೆ. ಆದರೆ ಅತ್ತ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ತಂಡಕ್ಕೆ ಮತ್ತೊಂದು ಅವಕಾಶ ದೊರೆಯುತ್ತದೆ. ಹೀಗಾಗಿಯೇ ಎಲ್ಲಾ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಬಯಸುತ್ತದೆ. ಅದರಂತೆ ಇದೀಗ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಮೊದಲ ಕ್ವಾಲಿಫೈಯರ್ ಅರ್ಹತೆಗಾಗಿ ಪೈಪೋಟಿ ಏರ್ಪಟ್ಟಿದೆ.
ಆರ್ಸಿಬಿ ಮೊದಲ ಕ್ವಾಲಿಫೈಯರ್ ಆಡಲು ಏನು ಮಾಡಬೇಕು?
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆದ್ದರೆ 19 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಲಿದೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ಗೆದ್ದರೆ 18 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಲಿದೆ.
ಮುಂಬೈ ಇಂಡಿಯನ್ಸ್ ಅಥವಾ ಪಂಜಾಬ್ ಕಿಂಗ್ಸ್ ತಂಡಗಳು ಮೊದಲ ಸ್ಥಾನ ಅಲಂಕರಿಸಿದರೆ, ಗುಜರಾತ್ ಟೈಟಾನ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ.
ಇದೇ ವೇಳೆ ದ್ವಿತೀಯ ಸ್ಥಾನ ಪಡೆಯಲು ಆರ್ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಸಾಕು. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ಗೆದ್ದರೆ, ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ ಅಲಂಕರಿಸುವುದು ಖಚಿತ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಬಹುದು.
ಇದನ್ನೂ ಓದಿ: IPL 2025: ಬಂದ್ಬಿಟ್ಟ… RCB ತಂಡಕ್ಕೆ ರಣ ಬೇಟೆಗಾರ ಬಂದೇ ಬಿಟ್ಟ..!
ಒಂದು ವೇಳೆ ಆರ್ಸಿಬಿ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಎಲ್ಎಸ್ಜಿ ವಿರುದ್ಧ ಸೋತರೆ, ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಅಂಕರಿಸುವ ಮೂಲಕ ಎಲಿಮಿನೇಟರ್ ಪಂದ್ಯವಾಡಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ಪಾಲಿಗೆ ಕೊನೆಯ ಮ್ಯಾಚ್ ಮಾಡು ಇಲ್ಲವೇ ಮಡಿ ಎಂದರೆ ತಪ್ಪಾಗಲಾರದು.
