KKR vs RCB: ಎಲ್ ಪ್ರಿಮೆರೊ ಪಂದ್ಯಕ್ಕೆ ಮಳೆ ಭೀತಿ: ಇಂದು ಫಲಿತಾಂಶ ನಿರ್ಧರಿಸುವುದು ಹೇಗೆ?
IPL 2025: 10 ತಂಡಗಳ ಮಹಾ ಕ್ರಿಕೆಟ್ ಕದನ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಇಂದಿನಿಂದ ಶುರುವಾಗಲಿದೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದ್ದು, ಹೀಗಾಗಿ ಇಂದಿನ ಪಂದ್ಯ ನಡೆಯಲಿದೆಯಾ ಎಂಬುದೇ ಪ್ರಶ್ನೆ.

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು (ಮಾ.22) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಐಪಿಎಲ್ ಸೀಸನ್-18ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆಯಿದೆ.
ಕೊಲ್ಕತ್ತಾ ಸುತ್ತ ಮುತ್ತ ಭಾರತೀಯ ಹವಾಮಾನ ಇಲಾಖೆ (ಐಎಂಡಿ) “ಆರೆಂಜ್ ಅಲರ್ಟ್” ಘೋಷಿಸಿದ್ದು, ಮಾರ್ಚ್ 22 ರವರೆಗೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಎಲ್ಲಾ ಲಕ್ಷಣಗಳಿವೆ. ಇನ್ನು ಮಳೆಯ ನಡುವೆ ಪಂದ್ಯ ನಡೆಸುವ ಸಾಧ್ಯತೆಯನ್ನೂ ಸಹ ತಳ್ಳಿಹಾಕುವಂತಿಲ್ಲ.
ಏಕೆಂದರೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆಯಿದೆ. ಹೀಗಾಗಿ ಮಳೆ ಬಂದರೂ ಒಂದು ಗಂಟೆಯೊಳಗೆ ಮೈದಾನವನ್ನು ಮತ್ತೆ ಸಜ್ಜುಗೊಳಿಸಬಹುದು. ಈ ಮೂಲಕ ಪಂದ್ಯವನ್ನು ಆಯೋಜಿಸುವ ಸಾಧ್ಯತೆಯಿದೆ. ಈ ಮೂಲಕ ಫಲಿತಾಂಶವನ್ನು ಎದುರು ನೋಡಬಹುದು. ಹಾಗಿದ್ರೆ ವರುಣನ ಅಡ್ಡಿ ನಡುವೆ ಪಂದ್ಯ ನಡೆಯುವುದು ಹೇಗೆ? ಫಲಿತಾಂಶ ನಿರ್ಧರಿಸುವುದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ…
- ಟಾಸ್ ಪ್ರಕ್ರಿಯೆಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 8.40 ರೊಳಗೆ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. ಅದರಂತೆ 2 ತಂಡಗಳು 20 ಓವರ್ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್ಗಳ ಕಡಿತಕ್ಕೆ ಮುಂದಾಗಬಹುದು)
- ಮಳೆಯಿಂದ ವಿಳಂಬವಾಗಿ ರಾತ್ರಿ 8.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ.
- ಐಪಿಎಲ್ನ ಲೀಗ್ ಹಂತದ ಪಂದ್ಯಗಳಿಗೆ ಹೆಚ್ಚುವರಿ 60 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅಂದರೆ ಐಪಿಎಲ್ ಪಂದ್ಯದ ನಿಗದಿತ ಸಮಯ 3 ಗಂಟೆ 15 ನಿಮಿಷಗಳು. ಒಂದು ವೇಳೆ ಮಳೆ ಬಂದು ಅಥವಾ ಇನ್ನಿತರ ಕಾರಣಗಳಿಂದ ಪಂದ್ಯಕ್ಕೆ ಅಡಚಣೆಯಾದರೆ ಹೆಚ್ಚುವರಿ 1 ಗಂಟೆಯನ್ನು ಬಳಸಲಾಗುತ್ತದೆ.
- ಲೀಗ್ ಹಂತದ ಪಂದ್ಯಗಳಿಗೆ 7.30 ರಿಂದ 10.45 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ವಿಳಂಬವಾದರೆ 12.06 ರ ತನಕ ಪಂದ್ಯವನ್ನು ಆಯೋಜಿಸಲಿದ್ದಾರೆ.
- 10.56ರ ಬಳಿಕ ಪಂದ್ಯ ಶುರುವಾಗುವುದಾದರೆ, 5 ಓವರ್ಗಳ ಪಂದ್ಯವನ್ನು ಆಯೋಜಿಸಬಹುದು. ಈ 5 ಓವರ್ಗಳ ಪಂದ್ಯವು ರಾತ್ರಿ 10.56 ರಿಂದ ಶುರುವಾಗಬಹುದು, ಅಲ್ಲದೆ 12.06 ರೊಳಗೆ ಮುಗಿಸುವ ಪರಿಸ್ಥಿತಿ ಇದೆಯಾ ಎಂಬುದನ್ನು ರೆಫರಿ ಅವಲೋಕಿಸಲಿದ್ದಾರೆ.
- ಒಂದು ವೇಳೆ ಮಳೆಯ ತೀವ್ರತೆ ಹೆಚ್ಚಿದ್ದರೆ, ಅಥವಾ ಮೈದಾನವು ಸಂಪೂರ್ಣ ಒದ್ದೆಯಿಂದ ಕೂಡಿದ್ದರೆ, ಇಲ್ಲಾ ಪಂದ್ಯವನ್ನು ಆಯೋಜಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಕಂಡು ಬಂದರೆ ಮಾತ್ರ ಮ್ಯಾಚ್ ಅನ್ನು ರದ್ದುಗೊಳಿಸಲಾಗುತ್ತದೆ.
- ಮ್ಯಾಚ್ ರದ್ದಾರೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದ್ದಾರೆ. ಈ ನಿಯಮಗಳು ಲೀಗ್ ಹಂತದ ಪಂದ್ಯಗಳಿಗೆ ಮಾತ್ರ ಸೀಮಿತ.
ಇದನ್ನೂ ಓದಿ: IPL 2025: RCB ಗಿಂತ ಡೆಲ್ಲಿ ಪಡೆಯಲ್ಲೇ ಕನ್ನಡಿಗರ ದರ್ಬಾರು
ಪ್ಲೇಆಫ್ ರೈನ್ ರೂಲ್ಸ್:
- ಪ್ಲೇಆಫ್ ಪಂದ್ಯಗಳ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸಲು ಮೀಸಲು ದಿನದಾಟವನ್ನು ಬಳಸಿಕೊಳ್ಳಲಿದ್ದಾರೆ. ಅಂದರೆ ಮರುದಿನ ಪಂದ್ಯವನ್ನು ಆಯೋಜಿಸಲಿದ್ದಾರೆ.
- ಇನ್ನು ಮೀಸಲು ದಿನದಾಟದಲ್ಲಿ 5 ಓವರ್ಗಳ ಮ್ಯಾಚ್ ನಡೆಸಲು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಆಡಿಸಲಾಗುತ್ತದೆ. ಅದು ಕೂಡ ಅಸಾಧ್ಯವಾದರೆ, ಲೀಗ್ ಹಂತದ ಅಂಕ ಪಟ್ಟಿಯಲ್ಲಿ ಹೆಚ್ಚು ಪಾಯಿಂಟ್ಸ್ ಪಡೆದಿರುವ ತಂಡ ಮುಂದಿನ ಹಂತಕ್ಕೇರಲಿದೆ.
- ಹಾಗೆಯೇ ಫೈನಲ್ ಪಂದ್ಯ ಕೂಡ ಸಂಪೂರ್ಣ ಮಳೆಗೆ ಅಹುತಿಯಾದರೆ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.