
2025 ರ ಐಪಿಎಲ್ (IPL 2025) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಮಿಲಿಯನ್ ಡಾಲರ್ ಲೀಗ್‌ನಲ್ಲಿ 10 ತಂಡಗಳು ಒಟ್ಟು 74 ಪಂದ್ಯಗಳನ್ನು ಆಡಲಿವೆ. ಅದರಲ್ಲಿ ಪ್ರತಿ ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದ್ದು, ಈ ಪೈಕಿ 7 ಪಂದ್ಯಗಳನ್ನು ತನ್ನ ತವರು ಮೈದಾನದಲ್ಲಿ ಆಡಲಿವೆ. ಉಳಿದಂತೆ 7 ಪಂದ್ಯಗಳಿಗೆ ಇತರ ತಂಡಗಳ ತವರು ನೆಲಕ್ಕೆ ಪ್ರಯಾಣ ಬೆಳೆಸಬೇಕಿದೆ. ಈ ಪ್ರಯಾಣದ ನಡುವೆ ತಂಡಗಳಿಗೆ ಅಭ್ಯಾಸ ನಡೆಸಲು ಹಾಗೂ ವಿಶ್ರಾಂತಿ ಪಡೆಯಲು ಸಮಯಾವಕಾಶವಿದ್ದರೂ, ಕೆಲವು ತಂಡಗಳು ಮಾತ್ರ ಸಾಕಷ್ಟು ಪ್ರಯಾಣ ಮಾಡಬೇಕಾಗಿ ಬಂದಿದ್ದು, ಕೆಲವು ತಂಡಗಳಿಗೆ ಅತಿ ಕಡಿಮೆ ಪ್ರಯಾಣದ ಭಾಗ್ಯ ಸಿಕ್ಕಿದೆ. ಹೀಗೆ ಅತಿ ಹೆಚ್ಚು ಪ್ರಯಾಸದ ಪ್ರಯಾಣದ ಭಾಗ್ಯ ಪಡೆದಿರುವ ನತದೃಷ್ಟ ತಂಡಗಳಲ್ಲಿ ಆರ್ಸಿಬಿಗೆ ಮೊದಲ ಸ್ಥಾನವಿದೆ. ಆರ್‌ಸಿಬಿ (RCB) ಒಂದೇ ಕೇವಲ 7 ಪಂದ್ಯಗಳನ್ನು ಆಡಲು 17 ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣ ಮಾಡಬೇಕಾಗಿದೆ.
ಐಪಿಎಲ್ 2025 ರಲ್ಲಿ ಅತ್ಯಂತ ದಣಿದ ವೇಳಾಪಟ್ಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನದ್ದಾಗಿದೆ. ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 17084 ಕಿಲೋಮೀಟರ್ ಕ್ರಮಿಸಲಿದೆ. ಇದರಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ನಡುವೆ 1500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಸತತ ಎಂಟು ಪ್ರಯಾಣಗಳು ಸೇರಿವೆ. ಹೀಗಾಗಿ ಆರ್‌ಸಿಬಿ ಆಟಗಾರರಿಗೆ ಧಣಿವಾರಿಸಿಕೊಳ್ಳಲು ಅತ್ಯಂತ ಕಡಿಮೆ ಸಮಯ ಸಿಗಲಿದೆ. ಇದು ತಂಡದ ಅಭ್ಯಾಸಕ್ಕೆ ಹೊಡೆತ ನೀಡುವುದಂತೂ ಖಚಿತ. ಆರ್‌ಸಿಬಿ ನಂತರ, ಅಧಿಕ ಪ್ರಯಾಣ ಮಾಡುವ ತಂಡಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಈ ಬಾರಿ ಸಿಎಸ್‌ಕೆ ತಂಡ ಒಟ್ಟು 16184 ಕಿಲೋಮೀಟರ್ ದೂರ ಕ್ರಮಿಸಲಿದೆ.
ಪಂಜಾಬ್ ತಂಡಕ್ಕೆ 2 ತವರು ಮೈದಾನಗಳಿವೆ. ಮೊಹಾಲಿ ಹೊರತಾಗಿ, ಧರ್ಮಶಾಲಾದಲ್ಲಿಯೂ ಪಂಜಾಬ್ ತನ್ನ ತವರು ಪಂದ್ಯಗಳನ್ನು ಆಡಲಿದೆ. ಅಂತಹ ಪರಿಸ್ಥಿತಿಯಲ್ಲಿ ಪಂಜಾಬ್ ತಂಡ ಕೂಡ ಸಾಕಷ್ಟು ಪ್ರಯಾಣ ಮಾಡಬೇಕಾಗುತ್ತದೆ. ಒಟ್ಟಾರೆ ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ 14341 ಕಿಲೋಮೀಟರ್ ಪ್ರಯಾಣಿಸಲಿದೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ 13537 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ.
ರಾಜಸ್ಥಾನ್ ರಾಯಲ್ಸ್ ತಂಡವು ಜೈಪುರ ಮತ್ತು ಗುವಾಹಟಿಯನ್ನು ತಮ್ಮ ತವರು ಮೈದಾನವನ್ನಾಗಿ ಮಾಡಿಕೊಂಡಿರುವುದರಿಂದ ಈ ಬಾರಿ ಈ ತಂಡ ಒಟ್ಟು 12730 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್ ಕೂಡ 12702 ಕಿ.ಮೀ ದೂರವನ್ನು ಕ್ರಮಿಸಲಿದೆ. ಇವುಗಳಲ್ಲದೆ, ಗುಜರಾತ್ ಟೈಟಾನ್ಸ್ ಕೂಡ 10405 ಕಿ.ಮೀ ಕ್ರಮಿಸಲಿದ್ದು, ಲಕ್ನೋ ಸೂಪರ್ ಜೈಂಟ್ಸ್ ಕೂಡ 9747 ಕಿ.ಮೀ ದೂರ ಪ್ರಯಾಣ ಬೆಳೆಸಬೇಕಿದೆ.
ಇದನ್ನೂ ಓದಿ: IPL 2025: ಆರ್‌ಸಿಬಿ ಕ್ಯಾಂಪ್ ಸೇರಿಕೊಂಡ ಕೊಹ್ಲಿ; ಕಿಂಗ್ ರಾಯಲ್ ಎಂಟ್ರಿ ಹೇಗಿತ್ತು? ವಿಡಿಯೋ ನೋಡಿ
ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಎರಡು ತವರು ಮೈದಾನಗಳನ್ನು ಹೊಂದಿದೆ. ದೆಹಲಿಯ ಹೊರತಾಗಿ, ಈ ತಂಡ ವಿಶಾಖಪಟ್ಟಣದಲ್ಲಿ ತಮ್ಮ ತವರು ಪಂದ್ಯಗಳನ್ನು ಸಹ ಆಡಲಿದೆ. ಆದರೆ ಇದರ ಹೊರತಾಗಿಯೂ ಡೆಲ್ಲಿ ತಂಡ ಕೇವಲ 9270 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಅತಿ ಹೆಚ್ಚು ಕಡಿಮೆ ಪ್ರಯಾಣ ಮಾಡುವ ಅವಕಾಶ ಪಡೆದುಕೊಂಡಿದ್ದು, ಲೀಗ್ ಹಂತದಲ್ಲಿ ಕೇವಲ 8536 ಕಿ.ಮೀ ದೂರವನ್ನು ಕ್ರಮಿಸಬೇಕಾಗಿದೆ, ಇದು ಇತರ ತಂಡಗಳಿಗೆ ಹೋಲಿಸಿದರೆ ಅತಿ ಕನಿಷ್ಠವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Sat, 15 March 25