ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​!

IPL 2026 DC vs RCB: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 75 ರನ್​ಗಳಿಗೆ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್​ಗಳಲ್ಲಿ ಪಂದ್ಯ ಮುಗಿಸಿದ್ದರು.

ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​!
Dc Vs Rcb

Updated on: Apr 28, 2026 | 4:57 PM

ಸೋಲಿನ ಅಂಚಿನಲ್ಲಿದ್ದಾಗಲೂ ಅಭಿಮಾನಿಗಳು ಸಂಭ್ರಮಿಸಲು ಸಾಧ್ಯವೇ? ಸಾಧ್ಯ ಎಂಬುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಣ ಪಂದ್ಯ ಸಾಕ್ಷಿ. ಆರ್​ಸಿಬಿ ವಿರುದ್ಧದ ಈ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ತಂಡವು ಕನಿಷ್ಠ 50 ರನ್ ಬಾರಿಸಲಿ ಎಂದು ಕಾತರದಿಂದ ಕಾಯುತ್ತಿದ್ದರು. ಯಾವಾಗ ತಂಡದ ಸ್ಕೋರ್ 49 ದಾಟಿತೋ, ಆಗ ಸ್ಟೇಡಿಯಂನಲ್ಲಿ ಮೊಳಗಿದ ಸಂಭ್ರಮದ ಅಲೆ ಅಷ್ಟಿಷ್ಟಲ್ಲ. ಆ ಅಪರೂಪದ ಕ್ಷಣ ಮತ್ತು ಅದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ ದಿಕ್ಕೆಟ್ಟಿತು. ಪವರ್‌ಪ್ಲೇ ಮುಕ್ತಾಯದ ವೇಳೆಗೆ ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ, ಐಪಿಎಲ್ ಇತಿಹಾಸದ ಅತ್ಯಂತ ಕಡಿಮೆ ಮೊತ್ತಕ್ಕೆ ಔಟ್ ಆಗುವ ಭೀತಿಯಲ್ಲಿತ್ತು.

ಐಪಿಎಲ್ ಇತಿಹಾಸದಲ್ಲಿ 49 ರನ್ ಅತ್ಯಂತ ಕಡಿಮೆ ಮೊತ್ತ. ಈ ಹೀನಾಯ ದಾಖಲೆ ಇರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ. 2017ರ ಐಪಿಎಲ್​ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್ ಆಗಿದ್ದರು.

ಈ ಹೀನಾಯ ದಾಖಲೆಯನ್ನು ಅಳಿಸಿ ಹಾಕುವ ಅವಕಾಶ ಆರ್​ಸಿಬಿ ಮುಂದಿತ್ತು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 13 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಎಲ್ಲರೂ ಆರ್​ಸಿಬಿ ತನ್ನ ಅನಗತ್ಯ ದಾಖಲೆಯ ಹಣೆಪಟ್ಟಿಯನ್ನು ಕಳಚಲಿದೆ ಎಂದು ಭಾವಿಸಿದ್ದರು.

ಆದರೆ ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳು ಒಂದು ಬಾರಿ ತಂಡದ ಸ್ಕೋರ್ 49 ದಾಟಲು ಕಾಯುತ್ತಿದ್ದರು. ಹೀಗಾಗಿಯೇ ಪ್ರತಿ ರನ್​ ಬಂದಾಗಲೂ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು.

49 ಸಂಭ್ರಮ:

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಕೋರ್ 40 ರನ್ ದಾಟುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು “49… 49…” ಎಂದು ಏಕದನಿಯಲ್ಲಿ ಕೂಗಲಾರಂಭಿಸಿದರು. ಡೆಲ್ಲಿ ತಂಡವು 49 ರನ್‌ಗಳನ್ನು ದಾಟಲಿ ಎಂಬುದು ಅವರ ಈ ಸಂಭ್ರಮದ ಹಿಂದಿನ ಉದ್ದೇಶವಾಗಿತ್ತು.

ಅಂತಿಮವಾಗಿ ಕೈಲ್ ಜೇಮಿಸನ್ ಸಿಕ್ಸರ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಇತ್ತ ತಂಡದ ಸ್ಕೋರ್ ಐವತ್ತು ದಾಟುತ್ತಿದ್ದಂತೆ ಇಡೀ ಸ್ಟೇಡಿಯಂ ಕಿಕ್ಕಿರಿದು ಸಂಭ್ರಮಿಸಿತು. ಇದು ತಂಡ ಗೆದ್ದಾಗ ಆಗುವ ಸಂಭ್ರಮಕ್ಕಿಂತಲೂ ಹೆಚ್ಚಾಗಿತ್ತು!

YouTube video player

ಅಭಿಮಾನಿಗಳ ಈ ಚೇಷ್ಟೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. “ಆರ್‌ಸಿಬಿ ತನ್ನ 49 ರನ್‌ಗಳ ದಾಖಲೆಯನ್ನು ಉಳಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಪಂದ್ಯದ ಫಲಿತಾಂಶ:

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 16.3 ಓವರ್​ಗಳಲ್ಲಿ 75 ರನ್ ಬಾರಿಸಿ ಆಲೌಟ್ ಆಗಿತ್ತು. ಈ ಸುಲಭ ಗುರಿಯನ್ನು ಆರ್​ಸಿಬಿ ತಂಡ 6.3 ಓವರ್​ಗಳಲ್ಲಿ ಚೇಸ್ ಮಾಡಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ೬ ಎಸೆತಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ RCB

ಒಟ್ಟಿನಲ್ಲಿ ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳ ಪಾಲಿಗೆ ಇದು ಮರೆಯಬೇಕಾದ ಪಂದ್ಯವಾದರೂ, ಕ್ರೀಡಾಂಗಣದಲ್ಲಿ ಮೊಳಗಿದ ‘49’ರ ಘೋಷಣೆ ಮಾತ್ರ ಐಪಿಎಲ್ ಇತಿಹಾಸದ ತಮಾಷೆಯ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.

 

 

Published On - 4:52 pm, Tue, 28 April 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us