IPL 2026: ಐಪಿಎಲ್​ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್!

IPL 2026 CSK vs MI: ಐಪಿಎಲ್​ನ 44ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.1 ಓವರ್​ಗಳಲ್ಲಿ 160 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್​ಕೆ ತಂಡ 8 ವಿಕೆಟ್​ಗಳ ಜಯ ಸಾಧಿಸಿದೆ.

IPL 2026: ಐಪಿಎಲ್​ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್!
Karthik Sharma

Updated on: May 03, 2026 | 8:30 AM

ಕ್ರಿಕೆಟ್ ಲೋಕದಲ್ಲಿ ಎಂ.ಎಸ್. ಧೋನಿ ಎಂದರೆ ಅದೊಂದು ಭಾವನೆ. ಅವರ ಆಟ, ನಾಯಕತ್ವದಷ್ಟೇ ಅವರ ಹಳೆಯ ಸ್ಟೈಲ್‌ಗಳು ಕೂಡ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಶನಿವಾರ (ಮೇ 2, 2026) ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಯುವ ಆಟಗಾರ ಕಾರ್ತಿಕ್ ಶರ್ಮಾ ಧೋನಿಯವರ ಐಕಾನಿಕ್ ‘ಗನ್ ಸೆಲೆಬ್ರೇಷನ್’ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಹಂತದಲ್ಲಿ, ಟ್ರೆಂಟ್ ಬೌಲ್ಟ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಕಾರ್ತಿಕ್ ಶರ್ಮಾ ತಂಡಕ್ಕೆ ಜಯ ತಂದುಕೊಟ್ಟರು. ಈ ವೇಳೆ ತಮ್ಮ ಬ್ಯಾಟ್ ಅನ್ನು ಗನ್‌ನಂತೆ ಹಿಡಿದು ಸಂಭ್ರಮಿಸಿದರು. ಇದು 2005ರಲ್ಲಿ ಜೈಪುರದಲ್ಲಿ ಶ್ರೀಲಂಕಾ ವಿರುದ್ಧ 183 ರನ್ ಚಚ್ಚಿದಾಗ ಧೋನಿ ಮಾಡಿದ್ದ ಸಂಭ್ರಮಾಚರಣೆಯನ್ನು ನೆನಪಿಸಿತು.
ಇದೀಗ ಕಾರ್ತಿಕ್ ಶರ್ಮಾ ಅವರ ಗನ್ ಸೆಲೆಬ್ರೇಷನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾರ್ತಿಕ್ ಶರ್ಮಾ ಇನಿಂಗ್ಸ್ ವಿಶೇಷ:

  • ಚೊಚ್ಚಲ ಅರ್ಧಶತಕ: ಈ ಪಂದ್ಯದಲ್ಲಿ ಕಾರ್ತಿಕ್ ಶರ್ಮಾ ಕೇವಲ 40 ಎಸೆತಗಳಲ್ಲಿ ಅಜೇಯ 54 ರನ್ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಅವರ ಚೊಚ್ಚಲ ಅರ್ಧಶತಕವಾಗಿದೆ.
  • ಜವಾಬ್ದಾರಿಯುತ ಬ್ಯಾಟಿಂಗ್: ಸಿಎಸ್​ಕೆ ತಂಡವು ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡಾಗ ಕ್ರೀಸ್​ಗೆ ಆಗಮಿಸಿದ ಕಾರ್ತಿಕ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಎಂಟು ವಿಕೆಟ್‌ಗಳ ಭರ್ಜರಿ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
  •  ಪೂರ್ವ ನಿಯೋಜಿತ ಸಂಭ್ರಮ: ಪಂದ್ಯದ ನಂತರ ಮಾತನಾಡಿದ ಕಾರ್ತಿಕ್ ಶರ್ಮಾ, “ಇಂದು ನಾನು ರನ್ ಗಳಿಸಿದರೆ ಧೋನಿ ಸರ್ ಅವರಂತೆ ಸಂಭ್ರಮಿಸಬೇಕೆಂದು ಮೊದಲೇ ನಿರ್ಧರಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ.

ಯಾರು ಈ ಕಾರ್ತಿಕ್ ಶರ್ಮಾ?

ರಾಜಸ್ಥಾನದ ದೇಶೀಯ ಕ್ರಿಕೆಟ್‌ನಿಂದ ಬಂದಿರುವ 20 ವರ್ಷದ ಕಾರ್ತಿಕ್ ಶರ್ಮಾ ಅವರನ್ನು ಅಭಿಮಾನಿಗಳು ಪ್ರೀತಿಯಿಂದ “ರಾಜಸ್ಥಾನದ ಧೋನಿ” ಎಂದೇ ಕರೆಯುತ್ತಾರೆ. 2026ರ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿ ಕಾರ್ತಿಕ್ ಅವರನ್ನು ಬರೋಬ್ಬರಿ 14.20 ಕೋಟಿ ರೂಪಾಯಿಗೆ ಖರೀದಿಸಿತ್ತು. ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಇವರು ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿದ್ದಾರೆ.

ಇದನ್ನೂ ಓದಿ: ಬೆಂಕಿಯ ಉಂಡೆಗಳನ್ನೇ ಎಸೆಯಬೇಕಿತ್ತೇನೋ… ಪಾಂಡ್ಯ ಅಸಹಾಯಕತೆ!

ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಈ ಗೆಲುವಿನೊಂದಿಗೆ  ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನುಳಿದ 5 ಪಂದ್ಯಗಳಲ್ಲಿ 4 ಮ್ಯಾಚ್​ಗಳಲ್ಲಿ ಸಿಎಸ್​ಕೆ ತಂಡ ಗೆದ್ದರೆ ಪ್ಲೇಆಫ್ ಪ್ರವೇಶಿಸುವುದು ಖಚಿತ.

 

Follow Us