LSG vs RCB: ಮುಂದಿನ ಸೀಸನ್ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ; ರಿಷಭ್ ಪಂತ್
Rishabh Pant LSG Statement: 2026ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದು, ಉಳಿದ ಏಳರಲ್ಲಿ ಸೋತಿದೆ. ನಾಯಕ ರಿಷಭ್ ಪಂತ್ ತಂಡದ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡು, ಮುಂದಿನ ಆವೃತ್ತಿಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ. LSG ಲೀಗ್ ಹಂತದಲ್ಲೇ ತನ್ನ ಪಯಣ ಮುಗಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

2026 ರ ಐಪಿಎಲ್‌ನಲ್ಲಿ (IPL 2026) ಇಂದು ಲಕ್ನೋ ಸೂಪರ್‌ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ 50ನೇ ಲೀಗ್ ಪಂದ್ಯ ನಡೆಯುತ್ತಿದೆ. ಅಂದರೆ ಲೀಗ್ ಹಂತ ಮುಗಿಯುವತ್ತ ಸಾಗಿದ್ದು, ಯಾವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಬಹುದು. ಯಾವ ತಂಡಗಳು ಲೀಗ್ ಸುತ್ತಿನಲ್ಲೇ ತಮ್ಮ ಪಯಣವನ್ನು ಮುಗಿಸಬಹುದು ಎಂಬುದಕ್ಕೆ ಭಾಗಶಃ ಸ್ಪಷ್ಟತೆ ಸಿಕ್ಕಂತ್ತಾಗಿದೆ. ಅದರಲ್ಲೂ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ 3 ಸ್ಥಾನಗಳಲ್ಲಿರುವ ತಂಡಗಳಿಗೆ ಗೇಟ್ಪಾಸ್ ಈಗಾಗಲೇ ಸಿಕ್ಕಿದೆ ಎನ್ನಬಹುದು. ಅಂತಹ ತಂಡಗಳಲ್ಲಿ ಲಕ್ನೋ ಕೂಡ ಒಂದು.
ಲಕ್ನೋ ಸೂಪರ್‌ಜೈಂಟ್ಸ್ ತಂಡ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಂದರೆ 10 ನೇ ಸ್ಥಾನದಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದ್ದ್ದು, ಉಳಿದ ಏಳು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಲಕ್ನೋ ತಂಡ ಮುಂದಿನ ಹಂತಕ್ಕೆ ಹೋಗುವುದು ಅನುಮಾನವಾಗಿದೆ. ನಾಯಕ ರಿಷಭ್ ಪಂತ್ ಕೂಡ ಇದನ್ನೇ ಆರ್‌ಸಿಬಿ ವಿರುದ್ಧದ ಪಂದ್ಯದ ಟಾಸ್ ಸಮಯದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿರುವ ಪಂತ್, ನಾವು ಮುಂದಿನ ಸೀಸನ್ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ ಎಂದಿದ್ದಾರೆ.
ರಿಷಭ್ ಪಂತ್ ಹೇಳಿದ್ದೇನು?
ಆರ್‌ಸಿಬಿ ವಿರುದ್ಧದ ಟಾಸ್ ಸಮಯದಲ್ಲಿ ಮಾತನಾಡಿದ ರಿಷಭ್ ಪಂತ್, ‘ನಾವು ಅತ್ಯುತ್ತಮ ಆಟಗಾರರು ಎಂದು ನಮಗೆ ತಿಳಿದಿದೆ, ಆದರೆ ಕೆಲವೊಮ್ಮೆ ವಿಷಯಗಳು ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಇದೆಲ್ಲ ಕ್ರಿಕೆಟ್‌ನಲ್ಲಿ ಸಾಮಾನ್ಯ. ಹೀಗಾಗಿ ನಮಗೆ ವಿಷಯಗಳ ಬಗ್ಗೆ ಸ್ಪಷ್ಟತೆ ಇರಬೇಕು. ಇನ್ನು ಈ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳಾಗಿವೆ. ಇಲ್ಲಿಂದ ನಮ್ಮ ಲೋಪ ದೋಷಗಳನ್ನು ಸರಿಪಡಿಸಿಕೊಂಡು ನಾವು, ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ. ಅಂದರೆ ಪಂತ್, ಈ ಆವೃತ್ತಿಯ ಲೀಗ್ ಹಂತ ಮುಗಿಯುವುದಕ್ಕೆ ಇನ್ನು 20 ಪಂದ್ಯಗಳು ಬಾಕಿ ಇರುವ ಮುನ್ನವೇ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಗಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಂಡಂತ್ತಾಗಿದೆ.
ಈ ಆವೃತ್ತಿಯಲ್ಲಿ ಲಕ್ನೋ ಪ್ರದರ್ಶನ
ಈ ಆವೃತ್ತಿಯನ್ನು ಸೋಲಿನೊಂದಿಗೆ ಆರಂಭಿಸಿದ ಲಕ್ನೋ ಸೂಪರ್‌ಜೈಂಟ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿತು. ಆದಾಗ್ಯೂ, ಆ ನಂತರ ನಡೆದ ಹೈದರಾಬಾದ್ ಮತ್ತು ಕೆಕೆಆರ್ ವಿರುದ್ಧದ ಸತತ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರ ನಂತರ ಲಕ್ನೋ ಸೂಪರ್‌ಜೈಂಟ್ಸ್ ತಂಡವು ಗುಜರಾತ್, ಆರ್‌ಸಿಬಿ, ಪಂಜಾಬ್ ಮತ್ತು ರಾಜಸ್ಥಾನ ವಿರುದ್ಧ ಸತತ ಆರು ಪಂದ್ಯಗಳನ್ನು ಸೋತಿತು. ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಟೈ ಆಯಿತ್ತಾದರೂ ಸೂಪರ್ ಓವರ್‌ನಲ್ಲಿ ಸೋತಿತ್ತು. ಇದಾದ ಬಳಿಕ ಲಕ್ನೋ, ಮುಂಬೈ ಇಂಡಿಯನ್ಸ್ ವಿರುದ್ಧವೂ ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




