ಈಗ ಹೇಗಿದ್ದಾರೆ ಲುಂಗಿ ಎನ್​ಗಿಡಿ? ಹೊರಬಿತ್ತು ಬಿಗ್ ಅಪ್​ಡೇಟ್!

Lungi Ngidi Injury Update: ಇಂಡಿಯನ್ ಪ್ರೀಮಿಯರ್ ಲೀಗ್​ನ 35ನೇ ಪಂದ್ಯದ ವೇಳೆ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಗಾಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನ ಆರೋಗ್ಯದ ಕುರಿತಾದ ಬಿಗ್ ಅಪ್​ಡೇಟ್​ವೊಂದು ಹೊರಬಿದ್ದಿದೆ.

ಈಗ ಹೇಗಿದ್ದಾರೆ ಲುಂಗಿ ಎನ್​ಗಿಡಿ? ಹೊರಬಿತ್ತು ಬಿಗ್ ಅಪ್​ಡೇಟ್!
Lungi Ngidi

Updated on: Apr 26, 2026 | 9:13 AM

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್​ಗಿಡಿ ಅವರು ಈಗ ಚೇತರಿಸಿಕೊಂಡಿದ್ದಾರೆ. ಈ ಚೇತರಿಕೆಯ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಹಿನ್ನೆಲೆ:

ಶನಿವಾರ ಸಂಜೆ ನಡೆದ ಐಪಿಎಲ್​​ನ 35ನೇ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಮೂರನೇ ಓವರ್‌ನಲ್ಲಿ ಮಿಡ್-ಆಫ್‌ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಲುಂಗಿ ಎನ್​ಗಿಡಿ ಅವರು ಸಮತೋಲನ ತಪ್ಪಿ ಹಿಮ್ಮುಖವಾಗಿ ಬಿದಿದ್ದರು. ಈ ವೇಳೆ ಅವರ ಕುತ್ತಿಗೆ ಮತ್ತು ತಲೆಯ ಹಿಂಭಾಗ ನೆಲಕ್ಕೆ ಬಲವಾಗಿ ಬಡಿದಿತ್ತು. ಮೈದಾನದಲ್ಲೇ ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಕಾರಣ, ಅವರನ್ನು ತಕ್ಷಣವೇ ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು.

ದೆಹಲಿ ಪೊಲೀಸರ ಸಾಹಸ:

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ದೆಹಲಿ ಸಂಚಾರಿ ಪೊಲೀಸರು, ಕ್ರೀಡಾಂಗಣದಿಂದ ಬಿಎಲ್‌ಕೆ-ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ‘ಗ್ರೀನ್ ಕಾರಿಡಾರ್’ ನಿರ್ಮಿಸಿದ್ದರು. ಇದರಿಂದಾಗಿ ದಟ್ಟಣೆಯ ಸಮಯದಲ್ಲೂ ಕೇವಲ 11 ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಯಿತು.

ಆರೋಗ್ಯ ಸ್ಥಿತಿ:

ಆಸ್ಪತ್ರೆಯಲ್ಲಿ  ಲುಂಗಿ ಎನ್​ಗಿಡಿ ಅವರಿಗೆ ಸಿಟಿ ಸ್ಕ್ಯಾನ್ (CT Scan) ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದೃಷ್ಟವಶಾತ್, ಅವರ ಬೆನ್ನುಮೂಳೆ ಅಥವಾ ಮೆದುಳಿಗೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ನ್ಯೂರೋ ಸರ್ಜನ್ ಮೇಲ್ವಿಚಾರಣೆಯಲ್ಲಿ ಕೆಲವು ಗಂಟೆಗಳ ಕಾಲ ನಿಗಾದಲ್ಲಿ ಇರಿಸಿದ ನಂತರ, ಅವರ ಆರೋಗ್ಯ ಸ್ಥಿರವಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ವೈದ್ಯರು ಡಿಸ್ಚಾರ್ಚ್​ಗೆ ಸೂಚಿಸಿದ್ದಾರೆ. ಅದರಂತೆ ಇದೀಗ ಲುಂಗಿ ಎನ್​ಗಿಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್​ಗೆ ಮರಳಿದ್ದಾರೆ. ಇದಾಗ್ಯೂ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ.

ಇದನ್ನೂ ಓದಿ: IPL 2026: ಒಂದೇ ದಿನ ಬರೋಬ್ಬರಿ 16 ಕ್ಯಾಚ್​ಗಳು ಡ್ರಾಪ್..!

ಇತ್ತ ವೈದ್ಯರು ವಿಶ್ರಾಂತಿ ಸೂಚಿಸಿರುವ ಕಾರಣ ಲುಂಗಿ ಎನ್​ಗಿಡಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್​ ಪರ ಮಿಚೆಲ್ ಸ್ಟಾರ್ಕ್​ ಕಣಕ್ಕಿಳಿಯಲಿದ್ದಾರೆ. ಸ್ಟಾರ್ಕ್​ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿರುವ ಸ್ಟಾರ್ಕ್​ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

 

 

Published On - 9:06 am, Sun, 26 April 26

Follow Us