AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Games: ಮೊದಲ ಸುತ್ತಿನಲ್ಲಿಲ್ಲ ಇಂಡೋ-ಪಾಕ್ ಮ್ಯಾಚ್!

Asian Games 2026: ಏಷ್ಯಾದ ಅತ್ಯಂತ ದೊಡ್ಡ ಕ್ರೀಡಾ ಹಬ್ಬ 'ಏಷ್ಯನ್ ಗೇಮ್ಸ್ 2026' ಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಈ ಬಾರಿಯ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ಸಿಗಲಿದೆ. ಏಕೆಂದರೆ, ಈ ಬಾರಿ ಒಟ್ಟು 18 ತಂಡಗಳು ಪದಕದ ಬೇಟೆಗಾಗಿ ಅಖಾಡಕ್ಕಿಳಿಯಲಿವೆ.

Asian Games: ಮೊದಲ ಸುತ್ತಿನಲ್ಲಿಲ್ಲ ಇಂಡೋ-ಪಾಕ್ ಮ್ಯಾಚ್!
Ind Vs Pak Image Credit source: ACC
ಝಾಹಿರ್ ಯೂಸುಫ್
|

Updated on: Aug 13, 2026 | 7:32 AM

Share

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನ ಆರಂಭಿಕ ಹಂತಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಪರಸ್ಪರ ಮುಖಾಮುಖಿಯಾಗುವುದಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ, ಈ ಇಬ್ಬರು ಸಾಂಪ್ರದಾಯಿಕ ವೈರಿಗಳು ಪರಸ್ಪರ ಸೆಣಸಾಡಬೇಕಾದರೆ ಅದು ಕೇವಲ ಪದಕದ ಸುತ್ತಿನಲ್ಲಿ ಮಾತ್ರ ಸಾಧ್ಯ. ಅಂದರೆ ಫೈನಲ್​ ಅಥವಾ ಕಂಚಿನ ಪದಕದ ಪಂದ್ಯದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ್ ತಂಡದ ಮುಖಾಮುಖಿಯನ್ನು ಎದುರು ನೋಡಬಹುದು.

ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ!

ಐಸಿಸಿ  ಟಿ20 ಶ್ರೇಯಾಂಕದ ಆಧಾರದ ಮೇಲೆ ಏಷ್ಯಾದ ಅಗ್ರ ನಾಲ್ಕು ತಂಡಗಳಾದ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ಶ್ರೀಲಂಕಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ. ಉಳಿದ ದೇಶಗಳು ಕ್ವಾರ್ಟರ್ ಫೈನಲ್ ತಲುಪಲು ಪ್ರಾಥಮಿಕ ಗುಂಪು ಹಂತಗಳಲ್ಲಿ ಹೋರಾಡಬೇಕಾಗುತ್ತದೆ.

ಭಿನ್ನ ಬ್ರಾಕೆಟ್‌ಗಳಲ್ಲಿ ಉಭಯ ತಂಡಗಳು:

ಟೂರ್ನಿಯ ಡ್ರಾ ಮತ್ತು ಸೀಡಿಂಗ್ ವ್ಯವಸ್ಥೆಯು ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ನಾಕೌಟ್ ಬ್ರಾಕೆಟ್‌ನ ಸಂಪೂರ್ಣ ವಿರುದ್ಧ ಬದಿಗಳಲ್ಲಿ ಇರಿಸಿದೆ. ಭಾರತ ತಂಡವು ಕ್ವಾರ್ಟರ್ ಫೈನಲ್-2 ರಲ್ಲಿದ್ದರೆ, ಪಾಕಿಸ್ತಾನ್ ತಂಡವು ಕ್ವಾರ್ಟರ್ ಫೈನಲ್-1 ರಲ್ಲಿದೆ. ಈ ಎರಡೂ ಪಂದ್ಯಗಳು ಸೆಪ್ಟೆಂಬರ್ 28 ರಂದು ನಡೆಯಲಿದ್ದು, ಕಡಿಮೆ ಶ್ರೇಯಾಂಕದ ಕ್ವಾಲಿಫೈಯರ್ ತಂಡಗಳ ವಿರುದ್ಧ ಉಭಯ ತಂಡಗಳು ಸೆಣಸಾಡಲಿವೆ.

ಪದಕದ ಸುತ್ತಿನಲ್ಲೇ ಮುಖಾಮುಖಿ?

ಭಾರತ ಮತ್ತು ಪಾಕಿಸ್ತಾನ್ ಎರಡೂ ತಂಡಗಳು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಗೆದ್ದರೆ, ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಬೇರೆ ಬೇರೆ ಎದುರಾಳಿಗಳ ವಿರುದ್ಧ ಆಡಲಿವೆ. ಹೀಗಾಗಿ, ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಜಯಗಳಿಸಿದರೆ ಅಕ್ಟೋಬರ್ 3 ರಂದು ನಡೆಯಲಿರುವ ‘ಚಿನ್ನದ ಪದಕ’ದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಒಂದು ವೇಳೆ ಸೆಮಿಫೈನಲ್‌ನಲ್ಲಿ ಸೋತರೆ ಅಕ್ಟೋಬರ್ 3 ರಂದು ನಡೆಯಲಿರುವ ‘ಕಂಚಿನ ಪದಕ’ದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುವುದನ್ನು ಎದುರು ನೊಡಬಹುದು. ಇದರ ಹೊರತಾಗಿ ಸಾಂಪ್ರದಾಯಿಕ ಎದುರಾಳಿಗಳು ಮೊದಲ ಸುತ್ತಿನಲ್ಲಿ ಅಥವಾ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗುವುದಿಲ್ಲ.

ಮಹಿಳಾ ತಂಡಕ್ಕೂ ಇದೇ ನಿಯಮ!

ವಿಶೇಷವೆಂದರೆ ಮಹಿಳಾ ಕ್ರಿಕೆಟ್ ಟೂರ್ನಿಗೂ ಇದೇ ಮಾದರಿಯ ಬ್ರಾಕೆಟ್ ನಿಯಮವನ್ನು ಅನ್ವಯಿಸಲಾಗಿದೆ. ಅಗ್ರ ಶ್ರೇಯಾಂಕದ ಭಾರತ ಮತ್ತು ನಾಲ್ಕನೇ ಶ್ರೇಯಾಂಕದ ಪಾಕಿಸ್ತಾನ್ ಮಹಿಳಾ ತಂಡಗಳು ಡ್ರಾದಲ್ಲಿ ಪ್ರತ್ಯೇಕವಾಗಿವೆ. ಹೀಗಾಗಿ ಮಹಿಳಾ ಕ್ರಿಕೆಟ್‌ನಲ್ಲೂ ಭಾರತ-ಪಾಕ್ ಜಿದ್ದಾಜಿದ್ದಿ ನೋಡಬೇಕಾದರೆ ಸೆಪ್ಟೆಂಬರ್ 22 ರ ಚಿನ್ನ ಅಥವಾ ಕಂಚಿನ ಪದಕದ ಪಂದ್ಯದವರೆಗೂ ಕಾಯಬೇಕಾಗುತ್ತದೆ.

ಏಷ್ಯನ್ ಗೇಮ್ಸ್​ನಲ್ಲಿ ಕಣಕ್ಕಿಳಿಯಲಿರುವ ಪುರುಷರ ತಂಡಗಳು:

  • ಗ್ರೂಪ್ A:
  • ಅಫ್ಘಾನಿಸ್ತಾನ್
  • ನೇಪಾಳ
  • ಜಪಾನ್
  • ಗ್ರೂಪ್ B:
  • ಒಮಾನ್
  • ಹಾಂಗ್ ಕಾಂಗ್
  • ಮಲೇಷ್ಯಾ

 ನೇರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ತಂಡಗಳು:

  • ಭಾರತ
  • ಪಾಕಿಸ್ತಾನ್
  • ಶ್ರೀಲಂಕಾ
  • ಬಾಂಗ್ಲಾದೇಶ್

ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಏಷ್ಯನ್ ಗೇಮ್ಸ್​ನಲ್ಲಿ ಕಣಕ್ಕಿಳಿಯಲಿರುವ ಮಹಿಳಾ ತಂಡಗಳು:

ಮಹಿಳಾ ಟೂರ್ನಿಯು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದಲೇ ಆರಂಭವಾಗಲಿದ್ದು, ಈ ಕೆಳಗಿನ 8 ತಂಡಗಳು ಕಣಕ್ಕಿಳಿಯಲಿವೆ.

  • ಭಾರತ
  • ಪಾಕಿಸ್ತಾನ್
  • ಬಾಂಗ್ಲಾದೇಶ್
  • ಶ್ರೀಲಂಕಾ
  • ಜಪಾನ್
  • ಥಾಯ್ಲೆಂಡ್
  • ಮಲೇಷ್ಯಾ
  • ಚೀನಾ

Follow Us