AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs RCB: ಪಂಜಾಬ್ ಮಣಿಸಿ ಅಧಿಕೃತವಾಗಿ ಪ್ಲೇಆಫ್​ಗೇರಿದ ಆರ್​ಸಿಬಿ

IPL 2026 Match 61 Result: ಐಪಿಎಲ್ 2026ರ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. 222 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಆರ್​ಸಿಬಿ, ಪಂಜಾಬ್ ತಂಡವನ್ನು ಮಣಿಸುವ ಮೂಲಕ ಪ್ಲೇಆಫ್​ಗೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ಇತ್ತ ಈ ಸೋಲು ಪಂಜಾಬ್‌ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

PBKS vs RCB: ಪಂಜಾಬ್ ಮಣಿಸಿ ಅಧಿಕೃತವಾಗಿ ಪ್ಲೇಆಫ್​ಗೇರಿದ ಆರ್​ಸಿಬಿ
Rcb
ಪೃಥ್ವಿಶಂಕರ
|

Updated on:May 17, 2026 | 7:43 PM

Share

ಐಪಿಎಲ್ 2026 (IPL 2026) ರ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ತಂಡಗಳು ಮುಖಾಮುಖಿಯಾಗಿದ್ದವು. ಕಳೆದ ಬಾರಿಯ ಫೈನಲಿಸ್ಟ್​ಗಳ ನಡುವಿನ ಪಂದ್ಯವಾಗಿದ್ದರಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಒಂದೆಡೆ ಆರ್​ಸಿಬಿಗೆ ಪ್ಲೇಆಫ್‌ ಟಿಕೆಟ್ ಪಡಿಸಿಕೊಳ್ಳುವ ಇರಾದೆಯಿದ್ದರೆ, ಇತ್ತ ಪಂಜಾಬ್​ಗೆ ಕಳೆದ ಫೈನಲ್​ಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿತ್ತು. ಆದರೆ ಈ ಪಂದ್ಯದಲ್ಲಿ ಕಳೆದ ಬಾರಿಯ ಫೈನಲ್ ಫಲಿತಾಂಶವನ್ನು ಪುನರಾವರ್ತಿಸಿದ ಆರ್​ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ತನ್ನ ಗೆಲುವಿನ ಓಟವನ್ನು ಮುಂದುವರೆಸಿತು. ಇತ್ತ ಸೋತ ಪಂಜಾಬ್ ತನ್ನ ಪ್ಲೇಆಫ್‌ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 222 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ 199 ರನ್ ಗಳಿಸಲಷ್ಟೇ ಶಕ್ತವಾಗಿ 23 ರನ್​ಗಳಿಂದ ಸೋಲನುಭವಿಸಿತು.

ಕೊಹ್ಲಿ- ಪಡಿಕ್ಕಲ್ ಜೊತೆಯಾಟ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿಗೆ ಸಾಧಾರಣ ಆರಂಭ ಸಿಕ್ಕಿತು. ಮತ್ತೊಂದು ಪಂದ್ಯದಲ್ಲಿ ವಿಫಲರಾದ ಜಾಕೋಬ್ ಬೆಥೆಲ್ 11 ರನ್‌ಗಳಿಗೆ ಔಟಾದರು. ಆದರೆ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ, ಈ ಪಂದ್ಯದಲ್ಲೂ ಅದೇ ಫಾರ್ಮ್​ ಮುಂದುವರೆಸಿ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 58 ರನ್ ಬಾರಿಸಿದರು. ದೇವದತ್ ಪಡಿಕ್ಕಲ್ ಕೂಡ 45 ರನ್ ಬಾರಿಸಿ ವಿರಾಟ್ ಜೊತೆ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟ ನೀಡಿದರು.

ವೆಂಕಟೇಶ್ ಅಯ್ಯರ್ ಅರ್ಧಶತಕ

ಇವರಿಬ್ಬರ ಬಳಿಕ ತಂಡದ ಇನ್ನಿಂಗ್ಸ್ ಕಟ್ಟಿದ ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 73 ರನ್ ಬಾರಿಸಿದರು. ಟಿಮ್ ಡೇವಿಡ್ ಕೂಡ 12 ಎಸೆತಗಳಲ್ಲಿ 28 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಪರ ಹರ್‌ಪ್ರೀತ್ ಬ್ರಾರ್ ಎರಡು ವಿಕೆಟ್ ಪಡೆದರೆ, ಅರ್ಶ್‌ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಪಂಜಾಬ್​ಗೆ ಕಳಪೆ ಆರಂಭ

ಇದಕ್ಕೆ ಉತ್ತರವಾಗಿ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಕಳಪೆ ಆರಂಭ ಕಂಡಿತು. ಭುವನೇಶ್ವರ್ ಕುಮಾರ್ ಮೊದಲ ಓವರ್​ನಲ್ಲೇ ಪ್ರಿಯಾಂಶ್ ಆರ್ಯ ಅವರನ್ನು 0 ರನ್​ಗೆ ಔಟ್ ಮಾಡಿದರೆ, ನಂತರ ಪ್ರಭ್ಸಿಮ್ರನ್ ಸಿಂಗ್ ಅವರನ್ನು 2 ರನ್​ಗೆ ಔಟ್ ಮಾಡಿದರು. ಆ ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 1 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಉಪಯುಕ್ತ ಇನ್ನಿಂಗ್ಸ್ ಆಡಿದ ಕೂಪರ್ ಕೊನೊಲಿ 37 ರನ್​ಗಳ ಕಾಣಿಕೆ ನೀಡಿದರು. ಯುವ ಬ್ಯಾಟರ್ ಸೂರ್ಯಾಂಶ್ ಶೆಡ್ಜ್ 35 ರನ್ ಗಳಿಸಿ ಔಟಾದರು.

PBKS vs RCB IPL 2026 Highlights: ಆರ್​ಸಿಬಿ ವಿರುದ್ಧ 23 ರನ್​ಗಳಿಂದ ಸೋತ ಪಂಜಾಬ್

ರಸಿಖ್, ಭುವಿ ಮಾರಕ ದಾಳಿ

ಆ ನಂತರ ಬಂದ ಮಾರ್ಕಸ್ ಸ್ಟೊಯಿನಿಸ್ 37 ರನ್​ಗೆ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಶಾಂಕ್ ಸಿಂಗ್ 27 ಎಸೆತಗಳಲ್ಲಿ 55 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಆರ್​ಸಿಬಿ ಪರ ಬೌಲಿಂಗ್​ನಲ್ಲಿ ಮಿಂಚಿದ ರಸಿಖ್ 3 ವಿಕೆಟ್ ಪಡೆದರೆ, ಭುವನೇಶ್ವರ್ ವಿಕೆಟ್ ಪಡೆದರು. ಹೇಜಲ್​ವುಡ್, ಶೆರ್ಫಡ್ ಹಾಗೂ ಸುಯೇಶ್ ತಲಾ ಒಂದೊಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Sun, 17 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More