IND vs ENG: ಭಾರತ- ಇಂಗ್ಲೆಂಡ್ 2ನೇ ಟಿ20 ಪಂದ್ಯಕ್ಕೂ ಇದೆಯಾ ಮಳೆಯಾತಂಕ?
India vs England 2nd T20 Manchester: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಈ ಪಂದ್ಯದ ಮೇಲೆ ಮಳೆಯ ಕರಿನೆರಳು ಆವರಿಸುವ ಆತಂಕವಿದೆ. ಆದರೆ, ಹವಾಮಾನ ಇಲಾಖೆ ಪ್ರಕಾರ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಮ್ಯಾಂಚೆಸ್ಟರ್‌ನಲ್ಲಿ ಉಭಯ ತಂಡಗಳ ದಾಖಲೆ 1-1 ಸಮನಾಗಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಪ್ರಸ್ತುತ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 189 ರನ್ ಕಲೆಹಾಕಿತ್ತು. ಆದರೆ ಈ ಗುರಿ ಬೆನ್ನಟ್ಟಲು ಇಂಗ್ಲೆಂಡ್ ತಂಡಕ್ಕೆ ಮಳೆರಾಯ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಈಗ, ಎರಡೂ ತಂಡಗಳು ಮ್ಯಾಂಚೆಸ್ಟರ್‌ನಲ್ಲಿ ಎರಡನೇ ಟಿ20 ಪಂದ್ಯವನ್ನಾಡಲು ಸಜ್ಜಾಗಿವೆ. ಆದರೆ ಮೊದಲ ಪಂದ್ಯದಂತೆ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಈ ಆತಂಕಕ್ಕೆ ಪೂರಕವಾದ ವರದಿಯನ್ನು ಹವಾಮಾನ ಇಲಾಖೆ ನೀಡಿದೆ.
ಮ್ಯಾಂಚೆಸ್ಟರ್‌ನಲ್ಲಿ ಹವಾಮಾನ ಹೇಗಿರಲಿದೆ?
ಪಂದ್ಯದ ದಿನದಂದು ಮ್ಯಾಂಚೆಸ್ಟರ್‌ನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ ಟಾಸ್‌ಗೂ ಮೊದಲು ಲಘು ಮಳೆ ಬೀಳುವ ಮುನ್ಸೂಚನೆ ನೀಡಲಾಗಿದ್ದರೂ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ ಮಳೆಯಾಗುವ ಸಾಧ್ಯತೆ ಶೇ. 24 ರಿಂದ ಶೇ. 13 ಕ್ಕೆ ಇಳಿಯುವ ನಿರೀಕ್ಷೆಯಿದೆ.
ಆದಾಗ್ಯೂ, ಪಂದ್ಯದ ಅಂತ್ಯದ ವೇಳೆಗೆ ಅಂದರೆ ಸ್ಥಳೀಯ ಸಮಯ ಸಂಜೆ 7 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆ ಇದೆ. ದಿನವಿಡೀ ಮೋಡ ಕವಿದ ವಾತಾವರಣದಿಂದ ಕೂಡಿರುವುದರಿಂದ ಆಟಗಾರರು ಬಿಸಿಲಿನ ತಾಪಮಾನದಿಂದ ಹೈರಾಣಾಗುವುದಿಲ್ಲ.
IND vs ENG: 2ನೇ ಟಿ20 ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್; ತಂಡದಲ್ಲಿ 2 ಬದಲಾವಣೆ
ಮ್ಯಾಂಚೆಸ್ಟರ್‌ನಲ್ಲಿ ಯಾರದ್ದು ಮೇಲುಗೈ?
ಈ ಮೈದಾನದಲ್ಲಿ ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು ಎರಡು ಟಿ20 ಪಂದ್ಯಗಳನ್ನು ಆಡಲಾಗಿದೆ. ಎರಡೂ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 159 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತದ ಪರ ಕನ್ನಡಿಗ ಕೆಎಲ್ ರಾಹುಲ್ 54 ಎಸೆತಗಳಲ್ಲಿ 101 ರನ್‌ಗಳ ಅಜೇಯ ಶತಕದ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.




