SRH vs KKR: ಬಲಿಷ್ಠ ಸನ್‌ರೈಸರ್ಸ್​ಗೆ ಸೋಲುಣಿಸಿದ ಕೆಕೆಆರ್

IPL 2026 Match 45: ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಅವರ ತವರು ನೆಲದಲ್ಲೇ ಮಣಿಸಿತು. ಬಲಿಷ್ಠ ಸನ್‌ರೈಸರ್ಸ್ 165 ರನ್ ಗಳಿಸಲಷ್ಟೇ ಶಕ್ತವಾಯಿತು, ಅದನ್ನು ಕೆಕೆಆರ್ ಕೇವಲ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನಟ್ಟಿತು. ಇದು ಕೆಕೆಆರ್‌ನ ಮೂರನೇ ಗೆಲುವು ಹಾಗೂ ಸನ್‌ರೈಸರ್ಸ್‌ನ ನಾಲ್ಕನೇ ಸೋಲು.

SRH vs KKR: ಬಲಿಷ್ಠ ಸನ್‌ರೈಸರ್ಸ್​ಗೆ ಸೋಲುಣಿಸಿದ ಕೆಕೆಆರ್
Kkr

Updated on: May 03, 2026 | 7:25 PM

ಐಪಿಎಲ್ 2026 (IPL 2026) ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (SRH vs KKR)​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಅವರ ನೆಲದಲ್ಲೇ ಮಣಿಸಿದ ಕೆಕೆಆರ್ ಈ ಆವೃತ್ತಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಇತ್ತ ಸತತ ಗೆಲುವುಗಳಿಂದ ಬೀಗುತ್ತಿದ್ದ ಸನ್‌ರೈಸರ್ಸ್ ಲೀಗ್​ನಲ್ಲಿ 4ನೇ ಸೋಲು ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 165 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 18.2 ಓವರ್​ಗಳಲ್ಲಿ ಜಯದ ನಗೆ ಬೀರಿತು.

ಸನ್‌ರೈಸರ್ಸ್​ಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇದಕ್ಕೆ ಪೂರಕವಾಗಿ ತಂಡಕ್ಕೆ ಉತ್ತಮ ಆರಂಭವೂ ಸಿಕ್ಕಿತು. ಅಭಿಷೇಕ್ ಹಾಗೂ ಹೆಡ್ ಮೊದಲ ವಿಕೆಟ್​ಗೆ 44 ರನ್​​ಗಳ ಜೊತೆಯಾಟವನ್ನು ಹಂಚಿಕೊಂಡರು. ಆ ನಂತರ ಹೆಡ್ ಹಾಗೂ ಕಿಶನ್ ತಂಡವನ್ನು ಶತಕದ ಗಡಿಯನ್ನು ದಾಟಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಸನ್‌ರೈಸರ್ಸ್ ತಂಡದ ಇನ್ನಿಂಗ್ಸ್ ಕುಸಿಯಿತು. ಇದರ ಪರಿಣಾಮವಾಗಿ ತಂಡವು 19 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಭಿಷೇಕ್ ಶರ್ಮಾ ಕೇವಲ 15 ರನ್‌ಗಳಿಗೆ ಔಟಾದರೆ, ಟ್ರಾವಿಸ್ ಹೆಡ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ 28 ಎಸೆತಗಳಲ್ಲಿ 61 ರನ್ ಗಳಿಸಿದರು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಆದರೆ ಹೆಡ್ ವಿಕೆಟ್ ಪತನದ ಬಳಿಕ ಪೆವಿಲಿಯನ್ ಪರೇಡ್ ಶುರುವಾಯಿತು. ಹೀಗಾಗಿ ಸನ್‌ರೈಸರ್ಸ್ ತಂಡವು ತನ್ನ ಕೊನೆಯ ಒಂಬತ್ತು ವಿಕೆಟ್‌ಗಳನ್ನು ಕೇವಲ 60 ರನ್‌ಗಳಿಗೆ ಕಳೆದುಕೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ ಮೂರು ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಸುನಿಲ್ ನರೈನ್ ಮತ್ತು ಕಾರ್ತಿಕ್ ತ್ಯಾಗಿ ತಲಾ 2 ವಿಕೆಟ್ ಪಡೆದರು. ವೈಭವ್ ಅರೋರಾ, ಕ್ಯಾಮರೂನ್ ಗ್ರೀನ್ ಮತ್ತು ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆದರು.

ಸುಲಭವಾಗಿ ಗೆದ್ದ ಕೆಕೆಆರ್

ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಫಿನ್ ಅಲೆನ್ 13 ಎಸೆತಗಳಲ್ಲಿ 29 ರನ್ ಗಳಿಸಿದರು ಆದರೆ ಪ್ಯಾಟ್ ಕಮ್ಮಿನ್ಸ್ ಅವರನ್ನು ಔಟ್ ಮಾಡಿದರು. ನಂತರ ಅಜಿಂಕ್ಯ ರಹಾನೆ ಮತ್ತು ಅಂಗ್‌ಕ್ರಿಶ್ ರಘುವಂಶಿ ಎಚ್ಚರಿಕೆಯಿಂದ ಆಟವಾಡಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ರಹಾನೆ 36 ಎಸೆತಗಳಲ್ಲಿ 43 ರನ್ ಗಳಿಸಿದರೆ, ಅಂಗ್‌ಕ್ರಿಶ್ ರಘುವಂಶಿ 47 ಎಸೆತಗಳಲ್ಲಿ 59 ರನ್ ಗಳಿಸಿದರು. ರಿಂಕು ಸಿಂಗ್ ಕೂಡ 11 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿ ಕೆಕೆಆರ್ ತಂಡ 18.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಲು ಸಹಾಯ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Sun, 3 May 26

Follow Us